ADVERTISEMENT

ಲೈಸೆನ್ಸ್‌ ಅಮಾನತ್ತಾದರೂ ನಿಲ್ಲದ ಓಲಾ ಸೇವೆ

ಬೈಕ್‌ ಟ್ಯಾಕ್ಸಿ ಸೇವೆ ಆರಂಭಿಸಿ ನಿಯಮ ಉಲ್ಲಂಘನೆ l ಆರು ತಿಂಗಳ ಅವಧಿಗೆ ಕಂಪನಿಯ ಪರವಾನಗಿ ರದ್ದು

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2019, 20:22 IST
Last Updated 22 ಮಾರ್ಚ್ 2019, 20:22 IST
ಓಲಾ ಕಂಪನಿ ಲಾಂಛನ
ಓಲಾ ಕಂಪನಿ ಲಾಂಛನ   

ಬೆಂಗಳೂರು: ಮೊಬೈಲ್‌ ಆ್ಯಪ್‌ ಆಧಾರಿತ ಟ್ಯಾಕ್ಸಿ ಸೇವೆ ಒದಗಿಸುತ್ತಿದ್ದ ಓಲಾ ಕಂಪನಿಗೆ ನೀಡಿದ್ದ ಪರವಾನಗಿಯನ್ನು ಸಾರಿಗೆ ಇಲಾಖೆ ಅಮಾನತು ಮಾಡಿದೆ. ಆದರೆ, ಕಂಪನಿಯು ಯಥಾಪ್ರಕಾರ ತನ್ನ ಸೇವೆಯನ್ನು ಮುಂದುವರಿಸಿದೆ.

ಆ್ಯಪ್‌ ಆಧಾರಿತ ಟ್ಯಾಕ್ಸಿ ಸೇವಾ ಕಂಪನಿಗಳ ನಿಯಂತ್ರಣ ಹಾಗೂ ನಿರ್ವಹಣೆಗಾಗಿ ಜಾರಿಗೆ ತರಲಾಗಿದ್ದ ‘ಕರ್ನಾಟಕ ರಾಜ್ಯ ಬೇಡಿಕೆ ಆಧಾರಿತ ಸಂಚಾರ ತಂತ್ರಜ್ಞಾನ ನಿಯಮಾವಳಿಗಳು–2016’ರ ಉಲ್ಲಂಘನೆ ಕಾರಣ ಕ್ಕಾಗಿ ಓಲಾ ಕಂಪನಿಯ ಪರವಾನಗಿ ಯನ್ನು ಮುಂದಿನ ಆರು ತಿಂಗಳ ಅವಧಿ ಯವರೆಗೆ ಅಮಾನತು ಮಾಡಿ ಮಾ. 18ರಂದೇ ರಾಜ್ಯ ಸಾರಿಗೆ ಪ್ರಾಧಿಕಾರವು ಆದೇಶ ಹೊರಡಿಸಿದೆ.

‘ಆದೇಶ ಸ್ವೀಕರಿಸಿದ ದಿನಾಂಕದಿಂದ ಮೂರು ದಿನದೊಳಗಾಗಿ ಕಂಪನಿಯು ತನ್ನ ಪರವಾನಗಿಯನ್ನು ಪ್ರಾಧಿಕಾರಕ್ಕೆ ಒಪ್ಪಿಸಬೇಕು. ತಕ್ಷಣವೇ ಆ್ಯಪ್ ಆಧಾರಿತ ಟ್ಯಾಕ್ಸಿ ಸೇವೆಯನ್ನು ಸ್ಥಗಿತಗೊಳಿಸಬೇಕು’ ಎಂದು ಎಚ್ಚರಿಕೆ ನೀಡಿದೆ.

ADVERTISEMENT

ಸೇವೆ ಸ್ಥಗಿತಗೊಳಿಸದ ಓಲಾ ಕಂಪನಿ, ‘ಶುಕ್ರವಾರ ಸಂಜೆಯಷ್ಟೇ ಆದೇಶದ ಪ್ರತಿ ಕೈ ಸೇರಿದೆ. ಅದರ ಜಾರಿಗೆ ಇನ್ನು ಮೂರು ದಿನಗಳವರೆಗೆ ಅವಕಾಶವಿದೆ. ಸಂಬಂಧಪಟ್ಟ ಅಧಿಕಾರಿ ಗಳ ಜೊತೆ ಚರ್ಚಿಸಿ ಸಮಸ್ಯೆ ಬಗೆಹರಿಸಿಕೊಳ್ಳಲಿದ್ದೇವೆ’ ಎಂದು ಹೇಳಿದೆ.

‘ಶನಿವಾರ ಹಾಗೂ ಭಾನುವಾರ ನ್ಯಾಯಾಲಯಕ್ಕೆ ರಜೆ ಇರುವುದು ಗೊತ್ತಿದ್ದೇ ಇಲಾಖೆಯವರು ಶುಕ್ರವಾರ ಆದೇಶದ ಪ್ರತಿಯನ್ನು ಬಹಿರಂಗಪಡಿಸಿದ್ದಾರೆ. ಆ ಮೂಲಕ ಕಂಪನಿ, ಚಾಲಕರು ಹಾಗೂ ಪ್ರಯಾಣಿಕರಿಗೆ ತೊಂದರೆ ಯನ್ನುಂಟು ಮಾಡಲು ಪ್ರಯತ್ನಿಸಿದ್ದಾರೆ. ಇಲಾಖೆಯ ಕ್ರಮವನ್ನು ಸೋಮವಾರ ನ್ಯಾಯಾಲಯದಲ್ಲಿ ಪ್ರಶ್ನಿಸುವ ಬಗ್ಗೆ ಕಾನೂನು ತಜ್ಞರ ಜೊತೆ ಚರ್ಚಿಸಲಾಗುತ್ತಿದೆ’ ಎಂದು ಕಂಪನಿಯ ಮೂಲಗಳು ತಿಳಿಸಿವೆ.

ಕಂಪನಿಯ ವರ್ತನೆ ಬಗ್ಗೆ ಪ್ರತಿಕ್ರಿಯಿಸಿದ ಸಾರಿಗೆ ಇಲಾಖೆಯ ಅಧಿಕಾರಿಯೊಬ್ಬರು, ‘ಆದೇಶವು ತಕ್ಷಣ ದಿಂದ ಜಾರಿಗೆ ಬಂದಿದೆ. ಆದರೆ, ಪರವಾನಗಿ ಪತ್ರವನ್ನು ಪ್ರಾಧಿಕಾರಕ್ಕೆ ವಾಪಸ್ ನೀಡಲು ಮೂರು ದಿನಗಳ ಅವಕಾಶವಿದೆ’ ಎಂದು ಹೇಳಿದರು.

‘ತಕ್ಷಣದಿಂದ ಓಲಾ ಕಂಪನಿಯ ಆ್ಯಪ್‌ ನಿಷ್ಕ್ರಿಯಗೊಳ್ಳಬೇಕು. ಕಂಪ ನಿಯ ಟ್ಯಾಕ್ಸಿ ಹಾಗೂ ಆಟೊ ಸೇವೆ ಸಂಪೂರ್ಣ ವಾಗಿ ಬಂದ್ ಆಗ ಬೇಕು. ಕಂಪನಿಯು ಈ ಆದೇಶ ವನ್ನು ಪಾಲಿಸದಿದ್ದರೆ, ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಕಂಪನಿ ಹಾಗೂ ಕ್ಯಾಬ್‌ಗಳನ್ನು ಜಪ್ತಿ ಮಾಡುವ ಅಧಿಕಾರ ಪ್ರಾಧಿಕಾರಕ್ಕೆ ಇದೆ’ ಎಂದು ಅವರು ವಿವರಿಸಿದರು.

ಅಕ್ರಮವಾಗಿ ಬೈಕ್‌ ಟ್ಯಾಕ್ಸಿ ಆರಂಭ: ‘ಓಲಾ ಕಂಪನಿಗೆ ನೀಡಿರುವ ಪರವಾನಗಿ ಅನ್ವಯ ಟ್ಯಾಕ್ಸಿ ಸೇವೆ (ಮೋಟಾರು ಕ್ಯಾಬ್) ಒದಗಿಸಲು ಮಾತ್ರ ಅವಕಾಶವಿದೆ. ಆದರೆ, ಕಂಪನಿಯು ಅಕ್ರಮವಾಗಿ ಬೈಕ್ ಟ್ಯಾಕ್ಸಿ ಸೇವೆ ಆರಂಭಿಸುವ ಮೂಲಕ ನಿಯಮಗಳನ್ನು ಉಲ್ಲಂಘಿಸಿದೆ’ ಎಂದು ಸಾರಿಗೆ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

‘ವೆಬ್ ಆಧಾರಿತ ಟ್ಯಾಕ್ಸಿ ಸೇವೆ ಒದಗಿಸುವ ಬಗ್ಗೆ‘ಕರ್ನಾಟಕ ರಾಜ್ಯ ಬೇಡಿಕೆ ಆಧಾರಿತ ಸಂಚಾರ ತಂತ್ರಜ್ಞಾನ ನಿಯಮಾವಳಿಗಳು– 2016’ ಜಾರಿಗೆ ತರಲಾಗಿದೆ. ಅದರಡಿ ಪರವಾನಗಿ ಪಡೆದ ಕಂಪನಿಗಳು, ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಆದರೆ, ಓಲಾ ಕಂಪನಿಯು ಬೆಂಗಳೂರಿನಲ್ಲಿ ಅಕ್ರಮವಾಗಿ ಬೈಕ್ ಟ್ಯಾಕ್ಸಿ ಸೇವೆ ಆರಂಭಿಸಿತ್ತು’ ಎಂದರು.

‘ಕಂಪನಿಯಡಿ ಸಂಚರಿಸುತ್ತಿದ್ದ ಐದು ಬೈಕ್‌ಗಳನ್ನು ಜಪ್ತಿ ಮಾಡಿ ಪ್ರಕರಣ ದಾಖಲಿಸಿಕೊಂಡಿದ್ದ ಸಾರಿಗೆ ಇಲಾಖೆಯ ಹೆಚ್ಚುವರಿ ಆಯುಕ್ತರು, ಕಂಪನಿ ವಿರುದ್ಧ ಕ್ರಮ ಕೈಗೊಳ್ಳುವಂತೆ ರಾಜ್ಯ ಸಾರಿಗೆ ಪ್ರಾಧಿಕಾರಕ್ಕೆ ವರದಿ ಸಲ್ಲಿಸಿದ್ದರು’ ಎಂದು ವಿವರಿಸಿದರು.

ನೋಟಿಸ್‌ಗೆ ಕಂಪನಿಯಿಂದ ಅಸಮರ್ಪಕ ಉತ್ತರ; ‘ಹೆಚ್ಚುವರಿ ಆಯುಕ್ತರ ವರದಿ ಆಧರಿಸಿ ಓಲಾ ಕಂಪನಿಗೆ ಫೆ. 15ರಂದು ನೋಟಿಸ್‌ ನೀಡಿದ್ದ ಪ್ರಾಧಿಕಾರ, ‘ಕಂಪನಿಯ ಪರವಾನಗಿಯನ್ನು ಏಕೆ ಅಮಾನತು ಅಥವಾ ರದ್ದು ಮಾಡಬಾರದು ಎಂದು ವಿವರಣೆ ಕೊಡಲು ಹೇಳಿತ್ತು. ಆದರೆ, ಕಂಪನಿಯು ಯಾವುದೇ ಉತ್ತರ ನೀಡಿರಲಿಲ್ಲ’ ಎಂದು ಅಧಿಕಾರಿ ಹೇಳಿದರು.

‘ಮಾ. 5ರಂದು ಮತ್ತೊಂದು ನೋಟಿಸ್‌ ನೀಡಿದ್ದ ಪ್ರಾಧಿಕಾರ, ಕಾರಣ ಕೇಳಿತ್ತು. ಅದಕ್ಕೆ ಕಂಪನಿಯು ನೀಡಿದ್ದ ವಿವರಣೆ ಸಮರ್ಪಕವಾಗಿರಲಿಲ್ಲ. ಹೀಗಾಗಿ ಪ್ರಾಧಿಕಾರವು ಕಂಪನಿಯ ಪರವಾನಗಿಯನ್ನು ಮುಂದಿನ ಆರು ತಿಂಗಳವರೆಗೆ ರದ್ದುಪಡಿಸಿದೆ’ ಎಂದು ತಿಳಿಸಿದರು.

ದೂರು ನೀಡಿದ್ದ ಸಂಘಟನೆಗಳು: ಬೆಂಗಳೂರಿನಲ್ಲಿ ಬೈಕ್‌ ಟ್ಯಾಕ್ಸಿ ಸಂಚರಿಸುತ್ತಿದ್ದ ಬಗ್ಗೆಓಲಾ, ಟ್ಯಾಕ್ಸಿ ಫಾರ್ ಶ್ಯೂರ್‌, ಉಬರ್ (ಓಟಿಯು) ಚಾಲಕರು ಮತ್ತು ಮಾಲೀಕರ ಸಂಘಟನೆ ಮತ್ತು ಕರ್ನಾಟಕ ಆಟೊ ಮತ್ತು ಟ್ಯಾಕ್ಸಿ ಒಕ್ಕೂಟದ ಸದಸ್ಯರು ಸಾರಿಗೆ ಇಲಾಖೆಗೆ ದೂರು ನೀಡಿದ್ದರು.

‘ನಿಯಮಗಳನ್ನು ಉಲ್ಲಂಘಿಸಿ ಟ್ಯಾಕ್ಸಿ ಚಾಲಕರನ್ನು ಕಡೆಗಣಿಸಿ ಓಲಾ ಕಂಪನಿಯು ಬೈಕ್ ಟ್ಯಾಕ್ಸಿ ಆರಂಭಿ ಸಿತ್ತು. ರ‍್ಯಾಪಿಡ್ ಎಂಬ ಕಂಪನಿಯು ಅಕ್ರಮವಾಗಿ ಬೈಕ್ ಟ್ಯಾಕ್ಸಿ ಓಡಿಸುತ್ತಿದೆ. ಇಂಥ ಬೈಕ್‌ಗಳ ವಿಡಿಯೊವನ್ನು ಚಿತ್ರೀಕರಿಸಿ ಇಲಾಖೆಗೆ ದೂರು ನೀಡಲಾ ಗಿತ್ತು. ಅದನ್ನು ಆಧರಿಸಿ ಇಲಾಖೆ ನೀಡಿದ್ದ ನೋಟಿಸ್‌ಗೂ ಕಂಪನಿ ಕ್ಯಾರೆ ಎಂದಿರಲಿಲ್ಲ. ಈಗ ಪರವಾನಗಿ ರದ್ದುಪಡಿಸುವ ಮೂಲಕ ಎಚ್ಚರಿಕೆ ನೀಡಿದೆ. ರ‍್ಯಾಪಿಡ್ ಕಂಪನಿ ವಿರುದ್ಧವೂ ಕ್ರಮ ಕೈಗೊಳ್ಳಬೇಕು’ ಎಂದು ಓಟಿಯು ಅಧ್ಯಕ್ಷ ತನ್ವೀರ್ ಪಾಷಾ ಹೇಳಿದರು.

‘ಬೈಕ್ ಟ್ಯಾಕ್ಸಿ ವಿಭಾಗ ಮುಚ್ಚಿದ್ದೇವೆ’

‘ಪ್ರಾಯೋಗಿಕವಾಗಿ ಆರಂಭಿಸಿದ್ದ ಬೈಕ್ ಟ್ಯಾಕ್ಸಿ ಸೇವೆಯನ್ನು ವಾರದ ಹಿಂದಷ್ಟೇ ಬಂದ್‌ ಮಾಡಿದ್ದೇವೆ. ಇತರೆ ಸಂಸ್ಥೆಗಳು ಕಾನೂನುಬಾಹಿರವಾಗಿ ಬೈಕ್ ಕಾರ್ಯಾಚರಣೆ ನಡೆಸುತ್ತಿದ್ದರೂ ನಮ್ಮ ಕಂಪನಿಯು ಬೈಕ್‌ ಟ್ಯಾಕ್ಸಿ ವಿಭಾಗವನ್ನೇ ಮುಚ್ಚಿದ್ದೇವೆ’ ಎಂದು ಓಲಾ ಕಂಪನಿಯ ಪ್ರತಿನಿಧಿ ತಿಳಿಸಿದ್ದಾರೆ.

ಪತ್ರಿಕಾ ಪ್ರಕಟಣೆ ನೀಡಿರುವ ಪ್ರತಿನಿಧಿ, ‘ಜನರ ಜೀವನೋಪಾಯ ಅಭಿವೃದ್ಧಿಪಡಿಸಲು, ಸಂಚಾರ ಸುಗಮಗೊಳಿಸಲು ಮತ್ತು ಹೊಸ ತಂತ್ರಜ್ಞಾನದ ಉದ್ದಿಮೆ ಬೆಳೆಸುವುದಕ್ಕಾಗಿ ಸರ್ಕಾರದ ಜೊತೆಯಲ್ಲಿ ಕಂಪನಿಯು ಕೆಲಸ ಮಾಡುತ್ತಿದೆ. ಸಂಚಾರ ಕ್ಷೇತ್ರದ ಆರ್ಥಿಕತೆ ಉತ್ತಮಗೊಳಿಸಲು ಇರುವ ಅಪಾರ ಅವಕಾಶಗಳ ಲಾಭ ಪಡೆಯಲು ಸರ್ಕಾರದ ಕಾನೂನಿನ ಚೌಕಟ್ಟಿನಲ್ಲಿಯೇ ಕಾರ್ಯಕ್ರಮ ರೂಪಿಸುತ್ತಿದ್ದೇವೆ’ ಎಂದಿದ್ದಾರೆ.

‘ಈ ಪ್ರಕಟಣೆ ದುರದೃಷ್ಟಕರ. ಕಂಪನಿಯ ಚಾಲಕರು ಹಾಗೂ ಬಳಕೆದಾರರಿಗೋಸ್ಕರ, ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳನ್ನು ಭೇಟಿಯಾಗಿ ಸಮಸ್ಯೆಗೆ ಪರಿಹಾರ ಹುಡುಕಲಾಗುವುದು’ ಎಂದು ಹೇಳಿದ್ದಾರೆ.

ಬೈಕ್‌ ಟ್ಯಾಕ್ಸಿ ಆಯ್ಕೆ ತೆಗೆದ ಕಂಪನಿ

'ತಕ್ಷಣದಿಂದ ಸೇವೆ ಸ್ಥಗಿತಗೊಳಿಸಿ’ ಎಂದು ಆದೇಶದಲ್ಲಿ ಉಲ್ಲೇಖಿಸಿದ್ದರೂ ಓಲಾ ಕಂಪನಿಯು ನಗರದಲ್ಲಿ ಟ್ಯಾಕ್ಸಿ ಸೇವೆಯನ್ನು ಮುಂದುವರಿಸಿದೆ. ಆದರೆ, ಬೈಕ್‌ ಟ್ಯಾಕ್ಸಿ ಆಯ್ಕೆಯನ್ನು ಮಾತ್ರ ಆ್ಯಪ್‌ನಿಂದ ತೆಗೆದು ಹಾಕಿದೆ.

ಆದೇಶ ಪಾಲಿಸದೇ ಕೋರಮಂಗಲದಲ್ಲಿ ಓಡಾಟ ನಡೆಸುತ್ತಿದ್ದ ಎರಡು ಕ್ಯಾಬ್‌ಗಳನ್ನು ಆರ್‌ಟಿಒ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಕಂಪನಿಗೆ ನೋಟಿಸ್ ಕಳುಹಿಸಿದ್ದಾರೆ.
**
‘ಓಲಾ ಕಂಪನಿಯಿಂದ ಚಾಲಕರು ನರಕಯಾತನೆ ಅನುಭವಿಸುತ್ತಿದ್ದಾರೆ. ಆರಂಭದಲ್ಲಿ ಪ್ರೋತ್ಸಾಹ ಧನ ನೀಡುತ್ತಿದ್ದ ಕಂಪನಿ, ಕಳೆದ ವರ್ಷವೇ ಅದನ್ನು ಕಡಿತಗೊಳಿಸಿದೆ. ಸದ್ಯದ ಸ್ಥಿತಿಯಲ್ಲಿ ದಿನಕ್ಕೆ ₹ 1,000 ದುಡಿಯುವುದು ಕಷ್ಟವಾಗಿದೆ’ ಎಂದು ಚಾಲಕ ಲಕ್ಷ್ಮಣ ತಿಳಿಸಿದರು.

‘ಓಲಾ ಕಂಪನಿಗೆ ಪರ್ಯಾಯವಾಗಿ ಉಬರ್ ಹಾಗೂ ಇತರ ಕಂಪನಿಗಳು ನಗರದಲ್ಲಿವೆ. ಬಹುಪಾಲು ಚಾಲಕರು, ಎರಡೂ ಕಂಪನಿಯಡಿ ಸೇವೆ ನೀಡುತ್ತಿದ್ದಾರೆ. ಓಲಾ ಕಂಪನಿ ಪರವಾನಗಿ ಅಮಾನತ್ತಾದರೂ ಉಬರ್‌ ಕಂಪನಿಯಡಿ ಚಾಲಕರು ಸೇವೆ ಮುಂದುವರಿಸಲಿದ್ದಾರೆ’ ಎಂದು ಹೇಳಿದರು.

‘ಇಲಾಖೆಯ ಆದೇಶದಿಂದ ಕಂಪನಿಗೆ ನಷ್ಟವಾಗಲಿದೆ. ಪ್ರಯಾಣಿಕರಿಗೆ ಹಾಗೂ ಚಾಲಕರಿಗೆ ಯಾವುದೇ ತೊಂದರೆ ಆಗುವುದಿಲ್ಲ. ಪರ್ಯಾಯ ಸಾರಿಗೆ ವ್ಯವಸ್ಥೆ ಬೆಂಗಳೂರಿನಲ್ಲಿದೆ’ ಎಂದು ಹೇಳಿದರು.

ಚಾಲಕ ಆನೇಕಲ್ ಸುರೇಶ್, ‘ಓಲಾ ಕಂಪನಿಯಿಂದ ದುಡಿಮೆ ಕಡಿಮೆಯಾಗಿದ್ದರಿಂದ, ಖಾಸಗಿಯಾಗಿ ಕ್ಯಾಬ್ ಓಡಿಸುತ್ತಿದ್ದೆ. ಕಂಪನಿ ಬಂದಾದರೆ, ಖಾಸಗಿಯಾಗಿ ಕ್ಯಾಬ್ ಓಡಿಸಿ ಜೀವನ ನಡೆಸುತ್ತೇನೆ’ ಎಂದರು.

**

ಎಂದಿನಂತೆ ಕ್ಯಾಬ್ ಓಡಿಸುತ್ತಿದ್ದೇನೆ. ಪರವಾನಗಿ ರದ್ದು ಆಗಿರುವ ಬಗ್ಗೆ ಯಾವುದೇ ಮಾಹಿತಿ ಬಂದಿಲ್ಲ
- ಗಿರೀಶ್, ಚಾಲಕ

**

ಶುಕ್ರವಾರ ಸಂಜೆಯಷ್ಟೇ ಕ್ಯಾಬ್‌ನಲ್ಲಿ ಪ್ರಯಾಣಿಸಿದ್ದೇನೆ. ಮಾಧ್ಯಮಗಳಿಂದ ವಿಷಯ ಗೊತ್ತಾಗಿದೆ. ಕ್ಯಾಬ್ ಸ್ಥಗಿತವಾದರೆ ಪರ್ಯಾಯ ಸಾರಿಗೆ ಮೊರೆ ಹೋಗುತ್ತೇನೆ
- ಬಿ. ರವಿಶಂಕರ್, ಪ್ರಯಾಣಿಕ

**
40 ಸಾವಿರಕ್ಕೂ ಹೆಚ್ಚು ನಗರದಲ್ಲಿರುವ ಓಲಾ ಕಂಪನಿ ಕ್ಯಾಬ್‌ಗಳು
1 ಲಕ್ಷಕ್ಕೂ ಹೆಚ್ಚು ಕ್ಯಾಬ್ ಬಳಸುವ ಪ್ರಯಾಣಿಕರ ಸಂಖ್ಯೆ (ದಿನಕ್ಕೆ)
ಓಲಾ ಕ್ಯಾಬ್ ಸೇವೆ ಇರುವ ಜಿಲ್ಲೆಗಳು: ಬೆಂಗಳೂರು, ಮೈಸೂರು, ಮಂಗಳೂರು, ಬೆಳಗಾವಿ, ಬೀದರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.