ADVERTISEMENT

ಸಾರಿಗೆ ಇಲಾಖೆಗೆ ಡೋಂಟ್ ಕೇರ್! ಓಲಾ, ಉಬರ್: ಮುಂದುವರಿದ ಆಟೋರಿಕ್ಷಾ ಸೇವೆ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2022, 19:27 IST
Last Updated 8 ಅಕ್ಟೋಬರ್ 2022, 19:27 IST
   

ಬೆಂಗಳೂರು: ಆಟೋರಿಕ್ಷಾ ಸೇವೆ ಸ್ಥಗಿತಗೊಳಿಸುವಂತೆಓಲಾ, ಉಬರ್ ಮತ್ತು ರ್‍ಯಾಪಿಡೊ ಕಂ‍ಪನಿಗಳಿಗೆ ಸಾರಿಗೆ ಇಲಾಖೆ ನೋಟಿಸ್ ನೀಡಿದ್ದರೂ, ಶನಿವಾರ ಈ ಕಂಪನಿಗಳ ಆ್ಯಪ್‌ಗಳಲ್ಲಿ ಆಟೋರಿಕ್ಷಾ ಸೇವೆ ಮುಂದುವರಿದಿತ್ತು.

ಸಾರಿಗೆ ಇಲಾಖೆಯ ನೋಟಿಸ್‌ಗೆ ಈ ಕಂಪನಿಗಳು ಯಾವುದೇ ಕಿಮ್ಮತ್ತು ನೀಡಿದಂತಿಲ್ಲ. ಆಟೋರಿಕ್ಷಾ ಸೇವೆ ಶನಿವಾರವೂ ಸರಾಗವಾಗಿ ನಡೆಯಿತು. ನೋಟಿಸ್ ನೀಡಿದ ಬಳಿಕವೂ ಸೇವೆ ಮುಂದುವರಿಸಿದರೆ ಅಂತಹ ಆಟೋರಿಕ್ಷಾಗಳನ್ನು ಜಪ್ತಿ ಮಾಡಲಾಗುವುದು ಎಂದು ಸಾರಿಗೆ ಸಚಿವರು ಹೇಳಿಕೆ ನೀಡಿದ್ದಾರೆ. ಆದರೆ, ನಗರದಲ್ಲಿ ಯಾವುದೇ ಆಟೋರಿಕ್ಷಾವನ್ನೂ ಜಪ್ತಿ ಮಾಡಿದ್ದು ಕಾಣಿಸಲಿಲ್ಲ.

ಅಲ್ಲದೇ ಎಂದಿನಂತೆ ದುಬಾರಿ ದರ ಕೂಡ ಮುಂದುವರಿದಿತ್ತು. ಎಂ.ಜಿ.ರಸ್ತೆಯಿಂದ ಕಾರ್ಪೊರೇಷನ್‌ ವೃತ್ತಕ್ಕೆ ಆಟೋರಿಕ್ಷಾದಲ್ಲಿ ಪ್ರಯಾಣ ದರ ₹108 ಇದ್ದರೆ, ಟ್ಯಾಕ್ಸಿ ಮಿನಿ ಪ್ರಯಾಣ ದರ ₹91 ಇತ್ತು. ಕಾರು ಪ್ರಯಾಣಕ್ಕಿಂತ ಆಟೋರಿಕ್ಷಾ ಪ್ರಯಾಣವೇ ದುಬಾರಿಯಾಗಿತ್ತು. ಯಾವುದೇ ಮಾರ್ಗದಲ್ಲಿ ಪ್ರಯಾಣಿಸಲು ಪ್ರಯತ್ನಿಸಿದರೂ ಆಟೋರಿಕ್ಷಾ ಪ್ರಯಾಣ ದರವೇ ಹೆಚ್ಚಿತ್ತು.

ADVERTISEMENT

ಕಾನೂನುಬಾಹಿರ ಅಲ್ಲ: ರ್‍ಯಾಪಿಡೊ ಕಂಪನಿಯ ಯಾವುದೇ ಕಾರ್ಯಾಚರಣೆ ಕಾನೂನುಬಾಹಿರವಾಗಿಲ್ಲ ಎಂದು ಕಂಪನಿ ಸ್ಪಷ್ಟಪಡಿಸಿದೆ.

‘ಸಾರಿಗೆ ಇಲಾಖೆಯಿಂದ ನಮಗೆ ನೋಟಿಸ್ ಬಂದಿದ್ದು, ನಿಗದಿತ ಸಮಯದೊಳಗೆ ನಾವು ಪ್ರತಿಕ್ರಿಯಿಸುತ್ತೇವೆ. ಆಟೋಟ್ಯಾಕ್ಸಿ ಪ್ರಯಾಣ ದರದಲ್ಲಿ ಹೆಚ್ಚುವರಿ ಹಣ ವಸೂಲಿ ಮಾಡಲಾಗುತ್ತಿದೆ ಎಂಬುದು ಸುಳ್ಳು ಆರೋಪ. ನಮ್ಮ ಎಲ್ಲಾ ದರಗಳು ಸರ್ಕಾರ ನಿರ್ಧರಿಸಿದ ದರಗಳಿಗೆ ಅನುಗುಣವಾಗಿದೆ. ಕಾನೂನು ಅಡಿಯಲ್ಲಿಯೇ ಸೇವೆ ಮುಂದುವರಿಯಲಿದೆ’ ಎಂದು ವಿವರಿಸಿದೆ.

ಷರತ್ತು ಉಲ್ಲಂಘಿಸಿದರೆ ಜಪ್ತಿ

ಆ್ಯಪ್ ಆಧಾರಿತ ಟ್ಯಾಕ್ಸಿ ಸೇವೆ ಒದಗಿಸುತ್ತಿರುವ ಕಂಪನಿಗಳಿಗೆ ಪರವಾನಗಿ ನೀಡುವಾಗ ಕೆಲವು ಷರತ್ತುಗಳನ್ನು ವಿಧಿಸಲಾಗಿದ್ದು, ಅವುಗಳನ್ನು ಉಲ್ಲಂಘಿಸಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ತಿಳಿಸಿದರು.

ಆಟೋರಿಕ್ಷಾ ಸೇವೆ ಸ್ಥಗಿತಗೊಳಿಸುವಂತೆ ನೋಟಿಸ್ ನೀಡಿದ ಬಳಿಕವೂ ಸೇವೆ ಮುಂದುವರಿಸಿದ್ದರೆ ಅಂತಹ ವಾಹನಗಳನ್ನು ಜಪ್ತಿ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಎರಡು–ಮೂರು ದಿನಗಳಲ್ಲಿ ಸಮಸ್ಯೆ ಬಗೆಹರಿಯಲಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.