ADVERTISEMENT

ನಾಲ್ವರ ಬಂಧನ: ₹ 99 ಲಕ್ಷ ಮೌಲ್ಯದ ಹಳೆ ನೋಟು ವಶಕ್ಕೆ

ಹೊಸ ನೋಟು ನೀಡಿ ಹಣ ಗಳಿಸುವ ಆಮಿಷ

​ಪ್ರಜಾವಾಣಿ ವಾರ್ತೆ
Published 21 ಜನವರಿ 2020, 22:07 IST
Last Updated 21 ಜನವರಿ 2020, 22:07 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ರದ್ದಾದ ಹಳೆ ನೋಟು ಗಳನ್ನು ಬದಲಿಸಿ ಹೊಸ ನೋಟುಗಳನ್ನು ನೀಡುವುದಾಗಿ ಆಮಿಷ ಒಡ್ಡಿ ವಂಚಿಸು ತ್ತಿದ್ದ ನಾಲ್ವರನ್ನು ಹೆಬ್ಬಾಳ ಪೊಲೀಸರು ಬಂಧಿಸಿದ್ದಾರೆ.

ಕೆ.ಆರ್‌. ಪುರದ ರಾಜೇಂದ್ರ ಪ್ರಸಾದ್ (49), ವಿಲ್ಸನ್ ಗಾರ್ಡನ್‌ನ ಸುರೇಶ್ ಕುಮಾರ್ (40), ಆಡು ಗೋಡಿಯ ಷಾ ನವಾಜ್ (45), ದೀಪಾಂಜಲಿ ನಗರದ ಕೆ. ಸತೀಶ್ (40) ಬಂಧಿತರು. ಆರೋಪಿಗಳಿಂದ ₹ 500 ಮತ್ತು ₹ 1,000 ಮುಖಬೆಲೆಯ ₹ 99 ಲಕ್ಷ ಮೌಲ್ಯದ ಹಳೆ ನೋಟು ಜಪ್ತಿ ಮಾಡಲಾಗಿದೆ.

ಯಲಹಂಕದ ಡಿ.ಎಂ. ನಾಗರಾಜು ಎಂಬವರು ನೀಡಿದ ದೂರಿನ ಆಧಾರದಲ್ಲಿ ಪೊಲೀಸರು ತನಿಖೆ ನಡೆಸಿದ್ದರು.

ADVERTISEMENT

ನಾಗರಾಜು ಅವರಿಗೆ ಮಲ್ಲೇಶ್ವರ ದಲ್ಲಿ ಪರಿಚಯವಾದ ರಾಜೇಂದ್ರ ಎಂಬಾತ, ‘ವ್ಯಕ್ತಿಯೊಬ್ಬರ ಬಳಿ ₹ 1 ಕೋಟಿ ಮೌಲ್ಯದ ಹಳೆ ನೋಟುಗಳಿವೆ.
₹ 10 ಲಕ್ಷ ಮೌಲ್ಯದ ಹೊಸ ನೋಟುಗಳನ್ನು ನೀಡಿದರೆ ಹಳೆನೋಟುಗಳನ್ನು ಆ ವ್ಯಕ್ತಿ ಕೊಡುತ್ತಾರೆ. ಅದನ್ನು ₹ 14 ಲಕ್ಷಕ್ಕೆ ಮತ್ತೊಬ್ಬ ವ್ಯಕ್ತಿಯಿಂದ ಖರೀದಿ ಮಾಡಿಸುತ್ತೇನೆ. ಹೀಗೆ ಖರೀದಿಸಿದ ವ್ಯಕ್ತಿ ರಿಸರ್ವ್‌ ಬ್ಯಾಂಕಿನಲ್ಲಿ ನೋಟು ಬದಲಾಯಿಸಿಕೊಳ್ಳುತ್ತಾನೆ. ಲಾಭವಾಗಿ ಬಂದ
₹ 4 ಲಕ್ಷ ಹಣದಲ್ಲಿ ನಾನು ಮತ್ತು ಹಳೆ ನೋಟು ಖರೀದಿಸಿದ ವ್ಯಕ್ತಿ ₹ 2 ಲಕ್ಷ ಇಟ್ಟುಕೊಳ್ಳುತ್ತೇವೆ. ಒಟ್ಟು ₹ 12 ಲಕ್ಷ ವನ್ನು ನಿಮಗೆ ನೀಡುತ್ತೇವೆ’ ಎಂದು ನಂಬಿಸಿದ್ದ.

‘ಇನ್ನೂ ಸಾಕಷ್ಟು ಹಳೆ ನೋಟು ಗಳಿವೆ. ಅದನ್ನು ಸಾಗಿಸಲು ಜನರೂ ಇದ್ದಾರೆ. ದೊಡ್ಡ ದೊಡ್ಡ ವ್ಯಕ್ತಿಗಳಿಂದ, ಮಧ್ಯವರ್ತಿಗಳಿಂದ ಹಳೆ ನೋಟುಗಳು ಬರುತ್ತವೆ’ ಎಂದೂ ಹೇಳಿ ನಾಗರಾಜು ಅವರಿಗೆ ಹೆಚ್ಚಿನ ಹಣದ ಆಸೆ ತೋರಿಸಿದ್ದ. ಬಳಿಕ ನಾಗರಾಜು ಮತ್ತು ಅವರ ಸಂಬಂಧಿ ರಾಜಣ್ಣ ಜೊತೆ ಯುನಿಟಿ ಬಿಲ್ಡಿಂಗ್‌ ಬಳಿಗೆ ಕರೆದುಕೊಂಡು ಹೋಗಿ, ಹಳೆ ನೋಟುಗಳನ್ನು ತಂದು ಕೊಡುವವರೆಂದು ಸುರೇಶ್ ಕುಮಾರ್, ಷಾ ನವಾಜ್ ಮತ್ತು ಸತೀಶ್‌ನನ್ನು ಪರಿಚಯಿಸಿದ್ದ. ನಾಗರಾಜು ಅವರಿಂದ ₹ 10 ಲಕ್ಷ ಪಡೆದು ಅವರಿಂದ ₹ 1 ಕೋಟಿ ಮೌಲ್ಯದ ಹಳೆ ನೋಟು ಕೂಡಾ ಕೊಡಿಸಿದ್ದ. ಬಳಿಕ ವಂಚಿಸಿದ್ದ’ ಎಂದು ಪೊಲೀಸರು ತಿಳಿಸಿದರು.‌

‘ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಕಡೆಗಳಲ್ಲಿ ಆರೋಪಿಗಳು ಇದೇ ರೀತಿಯ ಕೃತ್ಯ ಎಸಗಿರುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ತನಿಖೆ ನಡೆಯುತ್ತಿದೆ’ ಎಂದು ಉತ್ತರ ವಿಭಾಗದ ಡಿಸಿಪಿ ಶಶಿಕುಮಾರ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.