ADVERTISEMENT

ಬೆಂಗಳೂರು: ಬಂದೂಕು ಕಳ್ಳತನದ ದೂರು ನೀಡಲು ಅಲೆದಾಡಿದ ವೃದ್ಧ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2022, 4:14 IST
Last Updated 13 ಡಿಸೆಂಬರ್ 2022, 4:14 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ‘ಬಂದೂಕು ಕಳ್ಳತನವಾಗಿದೆ. ಕಳ್ಳರನ್ನು ಪತ್ತೆ ಮಾಡಿ ಕಾನೂನು ಕ್ರಮ ಕೈಗೊಳ್ಳಿ’ ಎಂಬುದಾಗಿ ದೂರು ನೀಡಲು ಹೋಗಿದ್ದ ವೃದ್ಧನನ್ನು ಹಲವು ಕಾರಣ ನೀಡಿ ಅಲೆದಾಡಿಸಿದ್ದ ಅಮೃತಹಳ್ಳಿ ಠಾಣೆ ಪೊಲೀಸರು, ಹಲವು ದಿನಗಳ ನಂತರ ಎಫ್‌ಐಆರ್ ದಾಖಲು ಮಾಡಿಕೊಂಡಿದ್ದಾರೆ.

ಬಿಇಎಲ್ ನಿವೃತ್ತ ಯೋಜನಾ ಅಧಿಕಾರಿ ಭೈರೇಗೌಡ (72) ಅವರು ಜಕ್ಕೂರಿನಲ್ಲಿ ನೆಲೆಸಿದ್ದಾರೆ. ಸಮೀಪದಲ್ಲೇ ಅವರ ತೋಟದ ಮನೆ ಇತ್ತು. 30 ವರ್ಷಗಳ ಹಿಂದೆ ಒಂಟಿ ಮನೆಯಲ್ಲಿದ್ದ ಭೈರೇಗೌಡ ಅವರು ಬಂದೂಕು ಖರೀದಿಸಿದ್ದರು. ಪೊಲೀಸರಿಂದಲೂ ಪರವಾನಗಿ ಪಡೆದಿದ್ದರು.

‘ಡಿ. 7ರಂದು ಸಂಜೆ ಬಂದೂಕು ಸ್ವಚ್ಛಗೊಳಿಸಿ, ಒಣಗಲೆಂದು ಮನೆಯ ಮುಖ್ಯದ್ವಾರದ ಬಳಿ ಇಟ್ಟು ತೋಟದ ಮನೆಗೆ ಹೋಗಿದ್ದರು. ಸ್ವಲ್ಪ ಹೊತ್ತು ಬಿಟ್ಟು ಮನೆಗೆ ವಾಪಸು ಬಂದಾಗ ಬಂದೂಕು ಇರಲಿಲ್ಲ. ಮನೆ, ತೋಟದ ಮನೆ ಹಾಗೂ ಹಲವೆಡೆ ಹುಡುಕಾಡಿದರೂ ಸುಳಿವು ಸಿಕ್ಕಿರಲಿಲ್ಲ’ ಎಂದು ಭೈರೇಗೌಡ ಹೇಳಿದ್ದಾರೆ.

ADVERTISEMENT

‘ಬಂದೂಕು ಕಳ್ಳತನ ಬಗ್ಗೆ ದೂರು ನೀಡಲು ಅಮೃತಹಳ್ಳಿ ಠಾಣೆಗೆ ಹೋಗಿದ್ದೆ. ಎಲ್ಲ ದಾಖಲೆ ಸಮೇತ ದೂರು ನೀಡಿದ್ದೆ. ವಿಚಾರಣೆ ನೆಪದಲ್ಲಿ ಬಂದೂಕು ಪರವಾನಗಿ ಬಗೆಗೆ ವಿನಾ ಕಾರಣ ಅನುಮಾನ ವ್ಯಕ್ತಪಡಿಸಿದ್ದೇ ಅಲ್ಲದೆ ಅಸಂಬದ್ಧ ಪ್ರಶ್ನೆಗಳನ್ನು ಕೇಳಿದ್ದ ಸಿಬ್ಬಂದಿ, ದೂರು ಸ್ವೀಕರಿಸಲು ಹಿಂದೇಟು ಹಾಕಿದರು. ಮರುದಿನ ಠಾಣೆಗೆ ಹೋದಾಗ, ವಿದ್ಯುತ್ ಇಲ್ಲವೆಂದು ಸುಖಾಸುಮ್ಮನೇ ಅಲೆದಾಡಿಸಿದರು. ವೃದ್ಧನಾದ ನನಗೆ ಪೊಲೀಸರ ವರ್ತನೆಯಿಂದ ತುಂಬಾ ನೋವಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಆರೋಪಕ್ಕೆ ಪ್ರತಿಕ್ರಿಯಿಸಿದ ಅಮೃತಹಳ್ಳಿ ಪೊಲೀಸರು, ‘ಡಿ. 9ರಂದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆರೋಪಿಗಳನ್ನು ಪತ್ತೆ ಮಾಡಲಾಗುತ್ತಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.