ADVERTISEMENT

ಕೇಂದ್ರ ಕಾರಾಗೃಹ ಅಕ್ರಮದ ವಿಡಿಯೊ; ಕ್ರಿಮಿನಲ್ ಪ್ರಕರಣ?

​ಪ್ರಜಾವಾಣಿ ವಾರ್ತೆ
Published 25 ಜನವರಿ 2022, 20:24 IST
Last Updated 25 ಜನವರಿ 2022, 20:24 IST

ಬೆಂಗಳೂರು: ನಗರದ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಅಕ್ರಮವಾಗಿ ಕೈದಿಗಳಿಗೆ ದಿನಸಿ ವಸ್ತುಗಳನ್ನು ಮಾರುತ್ತಿರುವ ಆರೋಪ ಕೇಳಿಬಂದಿದ್ದು, ಈ ಬಗ್ಗೆ ಕೈದಿಯೊಬ್ಬರು ವಿಡಿಯೊ ಚಿತ್ರೀಕರಿಸಿ ಹರಿಬಿಟ್ಟಿದ್ದಾರೆ.

'ಕಾರಾಗೃಹಗಳ ನಿಯಮಗಳ ಪ್ರಕಾರ, ಕೈದಿಗಳಿಗೆ ನಿರ್ದಿಷ್ಟಪಡಿಸಿದ ದಿನಸಿ ನೀಡಲಾಗುತ್ತದೆ. ದಿನಸಿ ಖರೀದಿಯಲ್ಲಿ ಅವ್ಯವಹಾರವಾಗಿದ್ದು, ಕಳಪೆ ದಿನಸಿ ಪದಾರ್ಥಗಳು ಜೈಲಿಗೆ ಬರುತ್ತಿವೆ. ಗುಣಮಟ್ಟದ ದಿನಸಿ ಬೇಕೆನ್ನುವ ಕೈದಿಗಳು, ಹಣ ಕೊಟ್ಟು ಖರೀದಿಸುತ್ತಿದ್ದಾರೆ’ ಎಂಬ ಆರೋಪ ವಿಡಿಯೊದಲ್ಲಿದೆ.

'ಅಪರಾಧ ಪ್ರಕರಣವೊಂದರಲ್ಲಿ ಬಂಧಿತನಾಗಿ ಜೈಲಿನಲ್ಲಿರುವ ರೌಡಿ ಜೆಸಿಬಿ ನಾರಾಯಣ ಸಹ ಐಷಾರಾಮಿ ಸೇವೆ ಪಡೆಯುತ್ತಿದ್ದಾನೆ. ಆತನಿಗೆ ಬೇಕಾದ ವಸ್ತುಗಳನ್ನು ಜೈಲಿನ ಸಿಬ್ಬಂದಿಯೇ ಪೂರೈಕೆ ಮಾಡುತ್ತಿದ್ದಾರೆ‘ ಎಂಬ ಸಂಗತಿಯೂ ವಿಡಿಯೊದಲ್ಲಿದೆ.

ADVERTISEMENT

ವಿಡಿಯೊ ಬಗ್ಗೆ ಪ್ರತಿಕ್ರಿಯಿಸಿದ ಕಾರಾಗೃಹಗಳ ಡಿಜಿಪಿ ಅಲೋಕ್ ಮೋಹನ್, 'ಜೈಲಿನಲ್ಲಿ ಅಕ್ರಮಗಳನ್ನು ತಡೆಯಲು ಸಾಕಷ್ಟು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ವಿಡಿಯೊ ಬಗ್ಗೆ ಪರಿಶೀಲಿಸಲಾಗುವುದು‘ ಎಂದರು.

‘ಜೈಲಿನ ಅಕ್ರಮದಲ್ಲಿ ಭಾಗಿಯಾಗುವ ಸಿಬ್ಬಂದಿಯನ್ನು ಅಮಾನತು ಮಾಡಿ, ಇಲಾಖೆ ಶಿಸ್ತುಕ್ರಮ ಕೈಗೊಳ್ಳುವ ಪದ್ಧತಿ ಇತ್ತು. ಆದರೆ, ಇನ್ನು ಮುಂದೆ ಅಂಥ ಸಿಬ್ಬಂದಿ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವ ಚಿಂತನೆ ಇದೆ. ಅದಕ್ಕಾಗಿ ಕಾನೂನು ತಿದ್ದುಪಡಿ ತರುವ ಪ್ರಕ್ರಿಯೆ ಸರ್ಕಾರದ ಮಟ್ಟದಲ್ಲಿ ಆರಂಭವಾಗಿದೆ‘ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.