ಬೆಂಗಳೂರು: ನಿವೃತ್ತ ಪೊಲೀಸ್ ಮಹಾ ನಿರ್ದೇಶಕ ಓಂ ಪ್ರಕಾಶ್ ಹತ್ಯೆ ಪ್ರಕರಣದ ತನಿಖೆ ಅಂತಿಮ ಹಂತ ತಲುಪಿದ್ದು, ಸಿಸಿಬಿ ಪೊಲೀಸರು ಶೀಘ್ರದಲ್ಲೇ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸುವ ಸಾಧ್ಯತೆಯಿದೆ.
ಪ್ರಕರಣ ಸಂಬಂಧ ಓಂ ಪ್ರಕಾಶ್ ಅವರ ಪತ್ನಿ ಪಲ್ಲವಿ ಅವರನ್ನು ಬಂಧಿಸಿ, ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಲಾಗಿದೆ. ‘ತಾನೇ ಕೊಲೆ ಮಾಡಿದ್ದಾಗಿ ವಿಚಾರಣೆ ವೇಳೆ ಆರೋಪಿ ಪಲ್ಲವಿ ತಪ್ಪೊಪ್ಪಿಕೊಂಡಿದ್ದಾರೆ. ಕೃತ್ಯ ನಡೆದ ವೇಳೆ ಪುತ್ರಿ ಕೃತಿ ಸಹ ಮನೆಯಲ್ಲೇ ಇದ್ದ ಕಾರಣ ಆಕೆಯ ವಿರುದ್ಧವೂ ಪ್ರಕರಣ ದಾಖಲಿಸಲಾಗಿತ್ತು. ಆದರೆ, ತನಿಖೆ ವೇಳೆ ಆಕೆಯ ವಿರುದ್ಧ ಯಾವುದೇ ಸಾಕ್ಷ್ಯಗಳು ಲಭ್ಯವಾಗಿಲ್ಲ. ಹೀಗಾಗಿ ಪಲ್ಲವಿ ವಿರುದ್ಧ ಮಾತ್ರ ದೋಷಾರೋಪ ಪಟ್ಟಿ ಸಲ್ಲಿಸಲು ಸಿದ್ಧತೆ ನಡೆಸಲಾಗಿದೆ’ ಎಂದು ಸಿಸಿಬಿ ಮೂಲಗಳು ತಿಳಿಸಿವೆ.
ಸಿಸಿಬಿ ತನಿಖೆಯಲ್ಲಿ ಓಂ ಪ್ರಕಾಶ್ ಹತ್ಯೆಗೆ ಪ್ರಮುಖ ಕಾರಣಗಳು ಪತ್ತೆಯಾಗಿವೆ. ಓಂ ಪ್ರಕಾಶ್ ಅವರು ಕುಟುಂಬದ ಬಗ್ಗೆ ತಳೆದ ನಿರ್ಲಕ್ಷ್ಯ ಹಾಗೂ ಕೌಟುಂಬಿಕ ಮನಸ್ತಾಪವೇ ಕೊಲೆಗೆ ಕಾರಣ ಎಂಬುದು ತನಿಖೆ ವೇಳೆ ಗೊತ್ತಾಗಿದೆ..
‘ಪತ್ನಿ ಮತ್ತು ಮಗಳ ಬಗ್ಗೆ ಗಮನ ಕೊಡುತ್ತಿರಲಿಲ್ಲ. ಮಗಳ ಮದುವೆ ಬಗ್ಗೆಯೂ ಆಸಕ್ತಿ ತೋರಲಿಲ್ಲ. ಆರ್ಥಿಕವಾಗಿ ಸದೃಢರಾಗಿದ್ದರೂ ಪತ್ನಿ, ಮಗಳ ಖರ್ಚಿಗೆ ಹಣ ಕೊಡುತ್ತಿರಲಿಲ್ಲ. ಸಣ್ಣ ವಿಚಾರಕ್ಕೆ ಗಲಾಟೆ ನಡೆದಾಗ ಓಂ ಪ್ರಕಾಶ್ ಅವರು ತಮ್ಮ ಸಹೋದರಿ ಮನೆಗೆ ಹೋಗುತ್ತಿದ್ದರು. ಈ ನಡುವೆ ಪಲ್ಲವಿ ಮತ್ತು ಕೃತಿ ಮಾನಸಿಕ ಸಮಸ್ಯೆಗಳಿಗೆ ತುತ್ತಾಗಿದ್ದರು. ಪತಿ ತನ್ನನ್ನು ಕೊಲೆ ಮಾಡುತ್ತಾರೆ ಎಂದು ಪಲ್ಲವಿ ಆತಂಕಕ್ಕೆ ಒಳಗಾಗಿದ್ದರು. ಹಾಗಾಗಿ ಓಂ ಪ್ರಕಾಶ್ ಅವರನ್ನು ಪಲ್ಲವಿ ಹತ್ಯೆ ಮಾಡಿದ್ದಾರೆ ಎಂಬುದು ಸಿಸಿಬಿ ತನಿಖೆಯಲ್ಲಿ ಗೊತ್ತಾಗಿದೆ’ ಎಂದು ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.