ADVERTISEMENT

ಬೆಲೆ ಕೇಳಿದರೇ ಕಣ್ಣೀರು: ₹200ರತ್ತ ಈರುಳ್ಳಿ ದರ!

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2019, 6:08 IST
Last Updated 7 ಡಿಸೆಂಬರ್ 2019, 6:08 IST
   

ಬೆಂಗಳೂರು: ದಿನೇ ದಿನೇ ಈರುಳ್ಳಿ ದುಬಾರಿಯಾಗುತ್ತಿದೆ. ಕಳೆದ ವಾರ ಶತಕ ದಾಟಿದ್ದ ಈರುಳ್ಳಿ ದರ, ಈ ವಾರ ₹180ಕ್ಕೆ ತಲುಪಿದೆ. ಶೀಘ್ರ ₹200ರ ಗಡಿ ದಾಟುವ ನಿರೀಕ್ಷೆ ಇದೆ.

ಕೆ.ಆರ್‌.ಮಾರುಕಟ್ಟೆಯಲ್ಲಿ ಕಳೆದ ವಾರ ಈರುಳ್ಳಿ ದರ ಪ್ರತಿ ಕೆ.ಜಿ.ಗೆ ₹100 ಇತ್ತು. ಸಾಧಾರಣ ಈರುಳ್ಳಿ ಬೆಲೆ ₹60ರಿಂದ ₹80ರಷ್ಟಿತ್ತು. ಆದರೆ, ಈರುಳ್ಳಿಯ ಸದ್ಯದ ಬೆಲೆ ₹160ರಿಂದ ₹180ಕ್ಕೆ ತಲುಪಿದ್ದು, ಒಂದೇ ವಾರದಲ್ಲಿ ದರ ₹100 ಹೆಚ್ಚಳವಾಗಿದೆ.

ಶುಕ್ರವಾರ ಕೆ.ಆರ್.ಮಾರುಕಟ್ಟೆಯಲ್ಲಿ ₹140ರಿಂದ ₹160, ಕಲಾಸಿಪಾಳ್ಯ ಮಾರುಕಟ್ಟೆಯಲ್ಲಿ ₹120ರಿಂದ ₹130, ಯಶವಂತಪುರ ಎಪಿಎಂಸಿ ಯಾರ್ಡ್‌ನಲ್ಲಿ ₹160ರಿಂದ ₹180ರಂತೆ ಈರುಳ್ಳಿ ಮಾರಾಟವಾಯಿತು. ಹಾಪ್‌ಕಾಮ್ಸ್‌ನಲ್ಲಿ ಈರುಳ್ಳಿ ಪ್ರತಿ ಕೆ.ಜಿ.ಗೆ ₹142 ಹಾಗೂ ಸಾಂಬಾರ್‌ ಈರುಳ್ಳಿ ದರ ₹160ರಷ್ಟಿದೆ.

ADVERTISEMENT

‘ಪ್ರತಿ ಕ್ವಿಂಟಲ್‌ಗೆ ₹10 ಸಾವಿರದಿಂದ ₹16 ಸಾವಿರ ಇದೆ. ಈರುಳ್ಳಿ ಒಟ್ಟು ಬೇಡಿಕೆಯಲ್ಲಿ ಶೇ 25ರಷ್ಟೇ ಪೂರೈಕೆಯಾಗುತ್ತಿದೆ. ನಾಳಿನ ಈರುಳ್ಳಿ ಬೆಲೆ ನಿರ್ಧರಿಸಲು ಆಗುತ್ತಿಲ್ಲ. ಬೇಡಿಕೆಗೆ ತಕ್ಕ ಈರುಳ್ಳಿ ಪೂರೈಕೆ ಆಗುತ್ತಿಲ್ಲ’ ಎನ್ನುತ್ತಾರೆ ಬೆಂಗಳೂರು ಈರುಳ್ಳಿ, ಆಲೂಗಡ್ಡೆ ವರ್ತಕರ ಸಂಘದ ಕಾರ್ಯದರ್ಶಿ ಉದಯ್‌ ಶಂಕರ್.

‘ಮಹಾರಾಷ್ಟ್ರ, ರಾಜ್ಯದ ಈರುಳ್ಳಿ ಮಾರುಕಟ್ಟೆಯಲ್ಲಿದೆ. ಜನವರಿವರೆಗೆ ದರ ಇಳಿವ ಲಕ್ಷಣವಿಲ್ಲ. ಮಹಾರಾಷ್ಟ್ರದಿಂದ ಜನವರಿಯಲ್ಲಿ ಹೊಸ ಈರುಳ್ಳಿ ದಾಸ್ತಾನು ಆಗಲಿದೆ. ಅಲ್ಲಿವರೆಗೆ ಈರುಳ್ಳಿ ದರ ಏರಬಹುದು. ₹200 ದಾಟಿದರೂ ಆಶ್ಚರ್ಯವಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.