ADVERTISEMENT

ಮಧ್ಯವರ್ತಿಗಳ ಹಾವಳಿ ತಡೆಗೆ ಕ್ರಮ: ಆನ್‌ಲೈನ್‌ನಲ್ಲೇ ಅರ್ಜಿ ಸಲ್ಲಿಕೆ ಕಡ್ಡಾಯ

ಮಧ್ಯವರ್ತಿಗಳ ಹಾವಳಿ ತಡೆಗೆ ಕ್ರಮ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2019, 1:51 IST
Last Updated 29 ಅಕ್ಟೋಬರ್ 2019, 1:51 IST
   

ಬೆಂಗಳೂರು: ಸರ್ಕಾರಿ ಇಲಾಖೆಗಳಲ್ಲಿ ಮಧ್ಯವರ್ತಿಗಳ ಹಾವಳಿ ತಪ್ಪಿಸಲಿಕ್ಕಾಗಿ ಪ್ರಾದೇಶಿಕ ಸಾರಿಗೆ ಕಚೇರಿ, ಭೂ ಪರಿವರ್ತನೆ, ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ ವಿವಿಧ ವಿಭಾಗಗಳು ಸಹಿತ ಎಲ್ಲೆಡೆಆನ್‌ಲೈನ್‌ನಲ್ಲೇ ಅರ್ಜಿ ಸಲ್ಲಿಕೆಯನ್ನು ಹಂತ ಹಂತವಾಗಿ ಕಡ್ಡಾಯಗೊಳಿಸಲಾಗುತ್ತಿದೆ ಎಂದು ಮುಖ್ಯ ಕಾರ್ಯದರ್ಶಿ ಟಿ. ಎಂ. ವಿಜಯಭಾಸ್ಕರ್‌ ಹೇಳಿದರು.

ವಿಧಾನಸೌಧದಲ್ಲಿ ಸೋಮವಾರ ಸೆಪ್ಟೆಂಬರ್ ತಿಂಗಳಲ್ಲಿ ಸಕಾಲ ಅರ್ಜಿಗಳ ವಿಲೇವಾರಿ ಕುರಿತ ಮಾಹಿತಿ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ಆನ್‌ಲೈನ್ ಅರ್ಜಿಕಡ್ಡಾಯಗೊಳಿಸುವ ಆದೇಶಗಳು ಸಿದ್ಧವಾಗುತ್ತಿವೆ ಎಂದರು.

ಪ್ರಶಸ್ತಿ–ದಂಡ: ಸಕಾಲದಲ್ಲಿ ಅರ್ಜಿ ವಿಲೇವಾರಿ ಮಾಡಿದವರಿಗೆ ಪ್ರತಿ ತಿಂಗಳು ರಾಜ್ಯಮಟ್ಟದಲ್ಲಿ ಒಂದು ಪ್ರಶಸ್ತಿ (₹ 50 ಸಾವಿರ) ಮತ್ತು ಜಿಲ್ಲಾ ಮಟ್ಟದಲ್ಲಿ ಒಂದು ಪ್ರಶಸ್ತಿ (₹ 10 ಸಾವಿರ) ನೀಡುವ ಯೋಜನೆಗೆ ಸಕಾಲ ಸಚಿವ ಎಸ್‌. ಸುರೇಶ್‌ ಕುಮಾರ್‌ ಚಾಲನೆ ನೀಡಿದರು. ಸತತ ಏಳು ಸಲ ಅವಧಿ ಮೀರಿ ಮಾಹಿತಿ ನೀಡುವ ಅಧಿಕಾರಿಗೆ ದಂಡ ರೂಪದಲ್ಲಿ ಶಿಕ್ಷೆ ವಿಧಿಸುವ ಎಚ್ಚರಿಕೆಯನ್ನೂ ಸಚಿವರು ನೀಡಿದರು.

ADVERTISEMENT

ಚಿಕ್ಕಬಳ್ಳಾಪುರ ಸಾಧನೆ: ಸಕಾಲ ಯೋಜನೆ ಆರಂಭವಾದ 7 ವರ್ಷಗಳಲ್ಲಿ 20 ಕೋಟಿ ಅರ್ಜಿಗಳ ವಿಲೇವಾರಿ ನಡೆದಿದೆ.ಸೆಪ್ಟೆಂಬರ್‌ ತಿಂಗಳಲ್ಲಿ ಚಿಕ್ಕಬಳ್ಳಾಪುರ, ಹಾಸನ ಮತ್ತು ಶಿವಮೊಗ್ಗ ಜಿಲ್ಲೆಗಳು ಅತಿ ಹೆಚ್ಚು ಅರ್ಜಿಗಳ ವಿಲೇವಾರಿ ಮಾಡಿ ಮೊದಲ ಮೂರು ಸ್ಥಾನದಲ್ಲಿವೆ. ಬೆಂಗಳೂರು ನಗರ, ಬಾಗಲಕೋಟೆ ಮತ್ತು ಬೀದರ್‌ ಜಿಲ್ಲೆಗಳು ಕೊನೆಯ ಸ್ಥಾನದಲ್ಲಿವೆ. ತಾಲ್ಲೂಕುಗಳ ಪೈಕಿ ಚಿಕ್ಕಬಳ್ಳಾಪುರ, ಕಲಘಟಗಿ ಮತ್ತು ಶಿವಮೊಗ್ಗ ಮೊದಲ ಮೂರು ಸ್ಥಾನ ಗಳಿಸಿದ್ದರೆ, ದಾವಣಗೆರೆ, ಬೀದರ್‌, ಬಳ್ಳಾರಿ ಕೊನೆಯ ಸ್ಥಾನದಲ್ಲಿವೆ ಎಂದು ಸಚಿವರು ತಿಳಿಸಿದರು.

ಚಿಕ್ಕಬಳ್ಳಾಪುರದ ಜಿಲ್ಲಾಧಿಕಾರಿ ಆರ್. ಲತಾ, ಚಿಕ್ಕಬಳ್ಳಾಪುರ ತಹಶೀಲ್ದಾರ್‌ ಕೆ. ನರಸಿಂಹಮೂರ್ತಿ ಅವರಿಗೆ ಪ್ರಮಾಣಪತ್ರ ನೀಡಲಾಯಿತು.

ಇ–ಆಡಳಿತ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಜೀವ್‌ ಚಾವ್ಲಾ, ಮುಖ್ಯಮಂತ್ರಿಗಳ ಇ–ಆಡಳಿತ ಸಲಹೆಗಾರ ಬೇಳೂರು ಸುದರ್ಶನ ಇದ್ದರು.

**

ಸಕಾಲವನ್ನು ರಾಷ್ಟ್ರಮಟ್ಟದಲ್ಲಿ ಜಾರಿಗೆ ತರುವುದಕ್ಕೆ ಉತ್ಸುಕರಾಗಿರುವ ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯದ ಯಶೋಗಾಥೆಯನ್ನು ತರಿಸಿಕೊಂಡಿದ್ದಾರೆ
– ಎಸ್‌. ಸುರೇಶ್‌ ಕುಮಾರ್‌ , ಸಕಾಲ ಸಚಿವ

**

20.09 ಕೋಟಿ – ಸಕಾಲ–ಇದುವರೆಗೆ ಸಲ್ಲಿಕೆಯಾದ ಅರ್ಜಿ
20.02 ಕೋಟಿ – ವಿಲೇವಾರಿಯಾದ ಅರ್ಜಿಗಳು
91 – ಇಲಾಖೆಗಳು
1027 – ಸೇವೆಗಳು
25.76 ಲಕ್ಷ – ಸೆಪ್ಟೆಂಬರ್ ತಿಂಗಳಲ್ಲಿ ಸಲ್ಲಿಕೆಯಾದ ಅರ್ಜಿ
25.03 ಲಕ್ಷ – ಸೆಪ್ಟೆಂಬರ್‌ನಲ್ಲಿ ವಿಲೇವಾರಿಯಾದ ಅರ್ಜಿ

**
20 ಕೋಟಿ ದಾಟಿದ ಸಕಾಲ ಅರ್ಜಿ ವಿಲೇವಾರಿ
ದೂರುಗಳಿಗೆ ಸಂಪರ್ಕಿಸಿ: 080–44554455
ಬೆಂಗಳೂರು ನಗರ–ಸಕಾಲ ಬದಲಿಗೆ ಬೈಪಾಸ್‌ ಮೂಲಕ ಅರ್ಜಿ ವಿಲೇವಾರಿ ಅಧಿಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.