ADVERTISEMENT

ನಕಲಿ ಇ–ಮೇಲ್ ಸೃಷ್ಟಿಸಿ ಕೋಟಿ ದೋಚುವ ಜಾಲ

ಬಹುರಾಷ್ಟ್ರೀಯ ಕಂಪನಿಗಳ ದತ್ತಾಂಶ ಕದ್ದು ವಂಚನೆ l ದೂರು ದಾಖಲು

ಸಂತೋಷ ಜಿಗಳಿಕೊಪ್ಪ
Published 5 ಡಿಸೆಂಬರ್ 2021, 23:13 IST
Last Updated 5 ಡಿಸೆಂಬರ್ 2021, 23:13 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ಅಂತರರಾಷ್ಟ್ರೀಯ ಮಟ್ಟದಲ್ಲಿ ವ್ಯವಹಾರ ನಡೆಸುವ ಕಂಪನಿಗಳ ದತ್ತಾಂಶ ಕದಿಯುತ್ತಿರುವ ಸೈಬರ್ ವಂಚಕರ ಜಾಲ, ನಕಲಿ ಇ–ಮೇಲ್‌ ಐ.ಡಿ.ಗಳನ್ನು ಸೃಷ್ಟಿಸಿ ಕೋಟ್ಯಂತರ ರೂಪಾಯಿ ದೋಚುತ್ತಿದೆ.

ರಾಜಧಾನಿಯನ್ನು ಕೇಂದ್ರ ಸ್ಥಾನ ಮಾಡಿಕೊಂಡಿರುವ ಹಲವು ಕಂ‍ಪನಿಗಳು, ನಕಲಿ ಇ–ಮೇಲ್ ಐ.ಡಿ.ಗಳಿಂದ ಬರುವ ಸಂದೇಶಗಳನ್ನು ನಂಬಿ ಹಣ ಕಳೆದುಕೊಳ್ಳುತ್ತಿವೆ. ಈ ಪೈಕಿ ಐದು ಪ್ರಮುಖ ಕಂಪನಿಗಳು ನಗರದ ಸೈಬರ್‌ ಕ್ರೈಂ ಠಾಣೆಯಲ್ಲಿ ದೂರು ದಾಖಲಿಸಿವೆ.

‘ಕಂಪನಿಗಳಿಗೆ ಕಚ್ಚಾವಸ್ತು ಪೂರೈಸುವವರ ಹಾಗೂ ಸೇವೆ ನೀಡುವ ಗ್ರಾಹಕರ ದತ್ತಾಂಶ ಕದಿಯಲಾಗುತ್ತಿದೆ. ಅವರೆಲ್ಲರ ಅಸಲಿ ಇ–ಮೇಲ್‌ ಐ.ಡಿ.ಯನ್ನು ಹೋಲುವಂತೆ ಒಂದೇ ಅಕ್ಷರವನ್ನು ಬದಲಿಸಿ ನಕಲಿ ಐ.ಡಿ. ಸೃಷ್ಟಿಸಲಾಗುತ್ತಿದೆ. ಅದೇ ಐ.ಡಿ.ಯಿಂದ ಕಂಪನಿಗಳ ಪ್ರತಿನಿಧಿಗಳಿಗೆ ಸಂದೇಶ ಕಳುಹಿಸಿ, ಹಣವನ್ನು ಬ್ಯಾಂಕ್ ಖಾತೆಗೆ ಜಮೆ ಮಾಡಿಸಿಕೊಂಡು ವಂಚಿಸಲಾಗುತ್ತಿದೆ’ ಎಂದು ನಗರದ ಸೈಬರ್ ಕ್ರೈಂ ವಿಭಾಗದ ಪೊಲೀಸ್ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ಹೇಳಿದರು.

ADVERTISEMENT

‘ಕಾಂಟಿನೆಂಟಲ್, ಫ್ಯೂಚರ್‌ ರೋಬೊಟಿಕ್ಸ್ ಆ್ಯಂಡ್ ಆಟೊಮೇಷನ್, ಅದ್ವಿಕ್ ಆಟೊ ಹಾಗೂ ಇತರೆ ಕಂಪನಿಗಳು ಈ ಕುರಿತು ಆಗ್ನೇಯ ವಿಭಾಗದ ಸೈಬರ್‌ ಕ್ರೈಂ ಠಾಣೆಗೆ ಈಗಾಗಲೇ ದೂರು ನೀಡಿವೆ. ಕಂಪನಿಯಲ್ಲಿರುವ ವ್ಯಕ್ತಿ ಗಳೇ ದತ್ತಾಂಶಗಳನ್ನು ಕದ್ದು, ಸೈಬರ್ ವಂಚಕರಿಗೆ ನೀಡಿರುವ ಅನುಮಾನವಿದೆ. ಆಂತರಿಕ ತನಿಖೆ ನಡೆಸುವಂತೆ ಕಂಪನಿಗಳಿಗೆ ಸಲಹೆ ನೀಡಲಾಗಿದೆ’ ಎಂದೂ ತಿಳಿಸಿದರು.

₹ 60.97 ಲಕ್ಷ ವಂಚನೆ: ನಕಲಿ ಇ–ಮೇಲ್‌ ಐ.ಡಿ.ಯಿಂದ ಬಂದ ಸಂದೇಶದಿಂದ ₹ 60.97 ಲಕ್ಷ ವಂಚನೆಯಾಗಿರುವುದಾಗಿ ಕಾಂಟಿನೆಂಟಲ್ ಕಂಪನಿ ಕಾರ್ಯದರ್ಶಿ ಶ್ರೀನಿವಾಸಯ್ಯ ದೂರು ನೀಡಿದ್ದಾರೆ.

‘ಕಂಪನಿಗೆ ಬೇಕಾಗುವ ಕಚ್ಚಾ ವಸ್ತುಗಳನ್ನು ಹೊರದೇಶದ ಸಮ್ವಾ ಟೆಕಾಮ್ ಕಂಪನಿಯಿಂದ ಆಮದು ಮಾಡಿಕೊಳ್ಳಲಾಗುತ್ತದೆ. ಇದಕ್ಕೆ ಸಂಬಂಧಪಟ್ಟ ವ್ಯವಹಾರ ಹಾಗೂ ಹಣ ವರ್ಗಾವಣೆಯನ್ನು ‘bhchun@samwha.com’ ಇ–ಮೇಲ್ ಮೂಲಕ ನಡೆಸಲಾಗುತ್ತದೆ’ ಎಂದು ಶ್ರೀನಿವಾಸಯ್ಯ ದೂರಿನಲ್ಲಿ ತಿಳಿಸಿದ್ದಾರೆ.

‘ಕಂಪನಿ ವ್ಯವಹಾರದ ಮಾಹಿತಿ ಕದ್ದಿರುವ ಸೈಬರ್ ವಂಚಕರು, ಸಮ್ವಾ ಟೆಕಾಮ್ ಕಂಪನಿಯ ಅಸಲಿ ಇ–ಮೇಲ್ ಐ.ಡಿ.ಗೆ ಹೋಲುವಂತೆ ‘bhchun@sawmah.com’ ಹಾಗೂ ‘bhchun@sawmha’ ಹೆಸರಿನಲ್ಲಿ ನಕಲಿ ಇ–ಮೇಲ್ ಐ.ಡಿ. ಸೃಷ್ಟಿಸಿದ್ದಾರೆ. ಅದೇ ಐ.ಡಿ.ಯಿಂದ ಅ. 28ರಂದು ಸಂದೇಶ ಕಳುಹಿಸಿದ್ದರು. ಅದನ್ನು ನಂಬಿ ₹ 60.97 ಲಕ್ಷ ಪಾವತಿ ಮಾಡಲಾಗಿದೆ. ಕೆಲ ದಿನಗಳ ನಂತರ ಕಂಪನಿಯವರು ಸಂಪರ್ಕಕ್ಕೆ ಸಿಕ್ಕಾಗಲೇ ವಂಚನೆ ಗಮನಕ್ಕೆ ಬಂದಿದೆ’ ಎಂದೂ ಹೇಳಿದ್ದಾರೆ.

₹ 33.48 ಲಕ್ಷ ವಂಚನೆ: ಅದ್ವಿಕ್ ಆಟೊ ಕಂಪನಿ ಸಹ ₹ 33.48 ಲಕ್ಷ ಕಳೆದುಕೊಂಡಿದೆ. ಕಂಪನಿಯ ಘಟಕದ ಮುಖ್ಯಸ್ಥ ಪ್ರಭಾಕರ್ ರಾವ್ ದೂರು ನೀಡಿದ್ದಾರೆ.

‘ಕಂಪನಿಗೆ ಕಚ್ಚಾ ವಸ್ತುಗಳನ್ನು ಪೂರೈಸುವವರ ಹೆಸರಿನಲ್ಲಿ ನಕಲಿ ಇ–ಮೇಲ್ ಸೃಷ್ಟಿಸಿದ್ದ ಆರೋಪಿಗಳು, ಸಂದೇಶ ಕಳುಹಿಸಿದ್ದರು. ಅದು ನಿಜವೆಂದು ನಂಬಿ ₹33.48 ಲಕ್ಷ ಪಾವತಿಸಲಾಗಿದೆ. ಆ ಹಣ ಬೇರೆ ಯವರಿಗೆ ಹೋಗಿರುವುದು ಇತ್ತೀಚೆಗೆ ಗೊತ್ತಾಗಿದೆ’ ಎಂದೂ ಹೇಳಿದ್ದಾರೆ.

ಗ್ರಾಹಕರಿಂದ ₹ 1.92 ಲಕ್ಷ ವರ್ಗಾವಣೆ: ಪ್ಯೂಚರ್ ರೋಬೊಟಿಕ್ಸ್ ಆ್ಯಂಡ್ ಆಟೊ ಮಿಷನ್ ಕಂಪನಿ ಹೆಸರಿನಲ್ಲಿ ನಕಲಿ ಇ–ಮೇಲ್ ಐ.ಡಿ ಸೃಷ್ಟಿಸಿದ್ದ ವಂಚಕರು, ಗ್ರಾಹಕರೊಬ್ಬರಿಂದ ₹1.92 ಲಕ್ಷ ದೋಚಿದ್ದಾರೆ. ಈ ಬಗ್ಗೆ ಕಂಪನಿ ನಿರ್ದೇ ಶಕ ರಾಘವೇಂದ್ರ ಉಡುಪ ದೂರು ದಾಖಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.