ADVERTISEMENT

ನಾಲ್ಕು ರಂಗಮಂದಿರ: ಸ್ಥಳ ಮಾತ್ರ ಗುರುತು

ಎರಡು ವರ್ಷಗಳಾದರೂ ಪ್ರಾರಂಭವಾಗದ ಕಟ್ಟಡ ಕಾಮಗಾರಿ

ವರುಣ ಹೆಗಡೆ
Published 23 ಆಗಸ್ಟ್ 2022, 20:44 IST
Last Updated 23 ಆಗಸ್ಟ್ 2022, 20:44 IST
ರವೀಂದ್ರ ಕಲಾಕ್ಷೇತ್ರದ ಹೊರನೋಟ – ಪ್ರಜಾವಾಣಿ ಚಿತ್ರ
ರವೀಂದ್ರ ಕಲಾಕ್ಷೇತ್ರದ ಹೊರನೋಟ – ಪ್ರಜಾವಾಣಿ ಚಿತ್ರ   

ಬೆಂಗಳೂರು:ರವೀಂದ್ರ ಕಲಾಕ್ಷೇತ್ರದ ಮಾದರಿಯಲ್ಲಿಯೇ ನಗರದ ನಾಲ್ಕು ಕಡೆ ರಂಗಮಂದಿರ ನಿರ್ಮಿಸುವುದಾಗಿ ಸರ್ಕಾರ ಘೋಷಿಸಿ, ಎರಡು ವರ್ಷಗಳಾದರೂ ಕಟ್ಟಡ ನಿರ್ಮಾಣ ಕಾಮಗಾರಿ ಇನ್ನೂ ಪ್ರಾರಂಭವಾಗಿಲ್ಲ.

ನಗರದ ಹೃದಯ ಭಾಗದಲ್ಲಿರುವ ರವೀಂದ್ರ ಕಲಾಕ್ಷೇತ್ರದಲ್ಲಿ ನಾಟಕಗಳಿಗೆ ಆದ್ಯತೆ ನೀಡಲಾಗುತ್ತಿದೆಯಾದರೂ ರಂಗ ತಂಡಗಳು ಪ್ರದರ್ಶನ ನೀಡಲು ಎರಡು ಮೂರು ತಿಂಗಳು ಮುಂಚಿತವಾಗಿ ಕಾಯ್ದಿರಿಸಿ, ಕಾಯಬೇಕಾದ ಪರಿಸ್ಥಿತಿಯಿದೆ. ಅದು ಕೂಡ ಸರ್ಕಾರಿ ಕಾರ್ಯಕ್ರಮಗಳು ತುರ್ತಾಗಿ ನಿಗದಿಯಾದಲ್ಲಿ ಕಾಯ್ದಿರಿಸಿದ ದಿನಾಂಕವನ್ನು ಬಿಟ್ಟುಕೊಡಬೇಕಾಗುತ್ತದೆ.
ಹೀಗಾಗಿ, ಪ್ರದರ್ಶನದ ದಿನದ
ವರೆಗೂ ರಂಗಮಂದಿರ ಸಿಗುವ ಖಚಿತತೆ ಇಲ್ಲದಂತಾಗಿದೆ. ಆದ್ದರಿಂದ ಕಲಾವಿದರು ಸೇರಿ ಸಾಂಸ್ಕೃತಿಕ ವಲಯದ ಪ್ರಮುಖರು ರಂಗಮಂದಿರಗಳ ನಿರ್ಮಾಣಕ್ಕೆ ಸರ್ಕಾರಕ್ಕೆ ಆಗ್ರಹಿಸಿದ್ದರು.

2020ರಲ್ಲಿ ಅಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ನಗರದ ನಾಲ್ಕು ಕಡೆ ರಂಗಮಂದಿರಗಳನ್ನು
ಘೋಷಿಸಿದ್ದರು. ಇದ
ಕ್ಕಾಗಿ ಬಜೆಟ್‌ನಲ್ಲಿ ₹ 60
ಕೋಟಿ ಮೀಸಲಿಡಲಾಗಿತ್ತು.
ವಿಶ್ವೇಶ್ವರಯ್ಯ ಬಡಾವಣೆಯಲ್ಲಿ ಎರಡೂವರೆ ಎಕರೆ, ದೇವನಹಳ್ಳಿಯ ಕಸಬಾ ಹೋಬಳಿ, ಕನ್ನಹಳ್ಳಿ ಬಳಿ
ಐದು ಎಕರೆ, ಕೆಐಎಡಿಬಿ, ಕೆಎಚ್‌ಬಿಯಲ್ಲಿ
ಸಾರ್ವಜನಿಕರಿಗೆ ಮೀಸಲಿಟ್ಟ ಸಿಎ
ನಿವೇಶನವನ್ನು ರಂಗಮಂದಿರ ನಿರ್ಮಾ
ಣಕ್ಕೆ ಗುರುತಿಸಲಾಗಿದೆ. ಆದರೆ, ಜಾಗ ಹಸ್ತಾಂತರ ಸೇರಿ ವಿವಿಧ ಪ್ರಕ್ರಿಯೆಗಳು ಪೂರ್ಣಗೊಳ್ಳದಿರುವುದರಿಂದ ರಂಗಮಂದಿರಗಳ ನಿರ್ಮಾಣ ಕಾಮಗಾರಿ ನನೆಗುದಿಗೆ ಬಿದ್ದಿದೆ.

ADVERTISEMENT

ಲಭ್ಯತೆ ಕಷ್ಟ: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ರವೀಂದ್ರ ಕಲಾಕ್ಷೇತ್ರ ಒಳಗೊಂಡಂತೆ ನಗರದ ಏಳು ರಂಗಮಂದಿರಗಳನ್ನು ನಿರ್ವಹಣೆ ಮಾಡುತ್ತಿದೆ. ಇವುಗಳಲ್ಲಿ ಎರಡು ಬಯಲು ರಂಗಮಂದಿರಗಳೂ ಸೇರಿವೆ. 2018ರ ಡಿಸೆಂಬರ್ ತಿಂಗಳಲ್ಲಿ ಶಾರ್ಟ್ ಸರ್ಕಿಟ್‌ನಿಂದ ಅಗ್ನಿ ಅವಘಡಕ್ಕೆ ಒಳಗಾಗಿದ್ದ ಕಲಾಗ್ರಾಮದ ಸಾಂಸ್ಕೃತಿಕ ಸಮುಚ್ಚಯ, ಮೂರೂವರೆ ವರ್ಷಗಳ ಬಳಿಕ ಪ್ರದರ್ಶನಗಳಿಗೆ ವೇದಿಕೆ ಒದಗಿಸಿದೆ. ಕಳೆದ ಏಪ್ರಿಲ್‌ ತಿಂಗಳಿಂದ ಅಲ್ಲಿ ಪ್ರದರ್ಶನಗಳಿಗೆ ಅವಕಾಶ ಮಾಡಿಕೊಡಲಾಗಿದೆ. ರವೀಂದ್ರ ಕಲಾಕ್ಷೇತ್ರ, ನಯನ ಸಭಾಂಗಣ ಹಾಗೂ ಸಾಂಸ್ಕೃತಿಕ ಸಮುಚ್ಚಯಕ್ಕೆ ಬೇಡಿಕೆ ಹೆಚ್ಚಿದ್ದು, ಎರಡು ತಿಂಗಳು ಮೊದಲೇ ಕಾರ್ಯಕ್ರಮಗಳು ಕಾಯ್ದಿರಿಸಲ್ಪಡುತ್ತಿವೆ.

‘ರವೀಂದ್ರ ಕಲಾಕ್ಷೇತ್ರದಲ್ಲಿ ಸಣ್ಣ ಸಂಸ್ಥೆಗಳು ಕಾರ್ಯಕ್ರಮ ನೀಡುವುದು ಕಷ್ಟ. ಸರ್ಕಾರಿ ಜಯಂತಿಗಳು ಹಾಗೂ ಅಕಾಡೆಮಿ, ಪ್ರಾಧಿಕಾರಗಳ ಕಾರ್ಯಕ್ರಮ
ಗಳು ನಡೆಯುತ್ತಿರುತ್ತವೆ. ದಿಢೀರ್ ಆಗಿ ಸರ್ಕಾರಿ ಕಾರ್ಯಕ್ರಮ ನಿಗದಿಯಾದಲ್ಲಿ ಸಂಘ–ಸಂಸ್ಥೆಗಳು ಹಮ್ಮಿಕೊಂಡಿದ್ದ ಕಾರ್ಯಕ್ರಮಗಳನ್ನು ರದ್ದುಗೊಳಿಸಬೇಕಾಗುತ್ತದೆ. ಇದರಿಂದ ಸಮಸ್ಯೆಯಾಗುತ್ತಿದೆ’ ಎಂದು ಇಲ್ಲಿನ ಕಲಾವಿದರೊಬ್ಬರು ಬೇಸರ ವ್ಯಕ್ತಪಡಿಸಿದರು.


‘ರಂಗಮಂದಿರ ಪ್ರಾಧಿಕಾರ’ ನನೆಗುದಿಗೆ

ರಂಗಮಂದಿರಗಳ ಕೊರತೆ ಹಾಗೂ ರಂಗಭೂಮಿಯ ಸಮಸ್ಯೆಗಳನ್ನು ನೀಗಿಸಲು ಕರ್ನಾಟಕ ನಾಟಕ ಅಕಾಡೆಮಿ ಈ ಹಿಂದೆ ‘ರಂಗ ಮಂದಿರ ಪ್ರಾಧಿಕಾರ’ ರಚಿಸುವ ಪ್ರಸ್ತಾವನೆಯನ್ನು ಸಿದ್ಧಪಡಿಸಿ, ಸರ್ಕಾರಕ್ಕೆ ಸಲ್ಲಿಸಿತ್ತು. ನಾಡಿನ ರಂಗಕರ್ಮಿಗಳು ಹಾಗೂ ಸಾಂಸ್ಕೃತಿಕ ವಲಯದ ತಜ್ಞರ ಸಲಹೆಗಳನ್ನು ಪಡೆದಿದ್ದ ಅಕಾಡೆಮಿ, ಪ್ರಾಧಿಕಾರ ರಚನೆಗೆ ಸಂಬಂಧಿಸಿದ ರೂಪುರೇಷೆಗಳನ್ನೂ ಸಿದ್ಧಪಡಿಸಿತ್ತು.

ಪ್ರತಿ ತಾಲ್ಲೂಕಿನಲ್ಲಿ 300 ಆಸನಗಳ ವ್ಯವಸ್ಥೆಯ ಸುಸಜ್ಜಿತ ರಂಗಮಂದಿರ ನಿರ್ಮಾಣ ಮಾಡಬೇಕು ಎಂದು ಪ್ರಸ್ತಾವನೆಯಲ್ಲಿ ತಿಳಿಸಲಾಗಿತ್ತು. ರಂಗ
ಮಂದಿರದ ನೀಲ ನಕ್ಷೆಯನ್ನೂ ರಚಿಸಿ, ಪ್ರತಿ ರಂಗಮಂದಿರಕ್ಕೆ ₹ 1.6 ಕೋಟಿ ವೆಚ್ಚವಾಗಲಿದೆ ಎಂದೂ ಅಂದಾಜಿಸಲಾಗಿತ್ತು. ಅಕಾಡೆಮಿಯ ಈ ಹಿಂದಿನ ಅಧ್ಯಕ್ಷ ಜೆ. ಲೋಕೇಶ್ ಅವರು ಮೈತ್ರಿ ಸರ್ಕಾರ ಹಾಗೂ ಬಿಜೆಪಿ ನೇತೃತ್ವದ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು. ಈ ಪ್ರಸ್ತಾವನೆ ನನೆಗುದಿಗೆ ಬಿದ್ದಿದೆ.

ರವೀಂದ್ರ ಕಲಾಕ್ಷೇತ್ರ ಮಾದರಿಯಲ್ಲಿಯೇ ನಗರದ ನಾಲ್ಕು ಕಡೆ ರಂಗಮಂದಿರ ನಿರ್ಮಾಣ ಯೋಜನೆ ಪ್ರಗತಿಯಲ್ಲಿದೆ. ಜಾಗ ಹಸ್ತಾಂತರ ಪ್ರಕ್ರಿಯೆ ಬಳಿಕ ನಿರ್ಮಾಣ ಕಾಮಗಾರಿ ನಡೆಯಲಿದೆ.

– ಪ್ರಕಾಶ್ ಜಿ. ನಿಟ್ಟಾಲಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.