ADVERTISEMENT

‘ಶೈಕ್ಷಣಿಕ ಚಟುವಟಿಕೆ ಹಂತ ಹಂತವಾಗಿ ಆರಂಭಿಸಿ’

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2020, 20:32 IST
Last Updated 6 ಅಕ್ಟೋಬರ್ 2020, 20:32 IST

ಬೆಂಗಳೂರು: ‘ಶೈಕ್ಷಣಿಕ ಚಟುವಟಿಕೆ ಆರಂಭಿಸುವುದಾದರೆ ಮೊದಲು ಕಾಲೇಜು, ನಂತರ ಪಿಯು ಕಾಲೇಜು, ಮೂರನೇ ಹಂತದಲ್ಲಿ ಆರನೇ ತರಗತಿಯ ನಂತರದ ತ‌ರಗತಿಗಳನ್ನು ಆರಂಭಿಸಬಹುದು’ ಎಂದು ರಾಜ್ಯ ಸರ್ಕಾರದ ಶಿಕ್ಷಣ ಸುಧಾರಣೆಗಳ ಸಲಹೆಗಾರ ಪ್ರೊ.ಎಂ.ಆರ್‌. ದೊರೆಸ್ವಾಮಿ ಸಲಹೆ ನೀಡಿದ್ದಾರೆ.

ಉಪ ಮುಖ್ಯಮಂತ್ರಿಯೂ ಆಗಿರುವ ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್‌. ಅಶ್ವತ್ಥನಾರಾಯಣ ಹಾಗೂ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್‌. ಸುರೇಶ್‌ಕುಮಾರ್‌ ಅವರಿಗೆ ಪತ್ರ ಬರೆದಿರುವ ಅವರು, ‘ಕೋವಿಡ್‌ ದಿನೇ ದಿನೇ ಹೆಚ್ಚುತ್ತಿರುವ ಸಂದರ್ಭದಲ್ಲಿ ಶೈಕ್ಷಣಿಕ ಚಟುವಟಿಕೆ ಆರಂಭಿಸುವುದು ಕ್ಲಿಷ್ಟ ಸಮಸ್ಯೆ’ ಎಂದೂ ಹೇಳಿದ್ದಾರೆ.

‘ಹಂತ ಹಂತವಾಗಿ ಆರಂಭಿಸುವುದರಿಂದ, ಪ್ರತಿ ಹಂತದಲ್ಲಿ ಲಭ್ಯವಾಗುವ ಪ್ರತಿಕ್ರಿಯೆಯು ಮುಂದಿನ ಹಂತಕ್ಕೆ ಪೂರಕ ವ್ಯವಸ್ಥೆಗೆ ಅನುಕೂಲವಾಗುತ್ತದೆ. ಹಾಸ್ಟೆಲ್‌ ಮತ್ತು ಅಂತರರಾಜ್ಯ ಸಾರಿಗೆಯ ತೊಂದರೆ ತಪ್ಪಿಸಲು ಸ್ಥಳೀಯ ವಿದ್ಯಾರ್ಥಿಗಳಿಗೆ ಮಾತ್ರ ಶಿಕ್ಷಣ ಸಂಸ್ಥೆಗಳಲ್ಲಿ ಅವಕಾಶ ನೀಡಬೇಕು. ಹೊರ ರಾಜ್ಯದ ವಿದ್ಯಾರ್ಥಿಗಳಿಗೆ ಆನ್‌ಲೈನ್‌ ಶಿಕ್ಷಣ ಸೌಲಭ್ಯ ಕಲ್ಪಿಸಬೇಕು’ ಎಂದೂ ಅವರು ಸಲಹೆ ನೀಡಿದ್ದಾರೆ.

ADVERTISEMENT

‘ಪ್ರತಿ ತರಗತಿಯನ್ನು ಎರಡು ತಂಡಗಳಾಗಿ ಮಾಡಿ, ದಿನ ಬಿಟ್ಟು ದಿನ ತರಗತಿ ನಡೆಸಬಹುದು. ಶಿಕ್ಷಣ ಸಂಸ್ಥೆಗಳಿಗೆ ಬಂದು ಹೋಗುವವರೆಗೆ ಎಲ್ಲ ವಿದ್ಯಾರ್ಥಿಗಳಿಗೆ ಆರೋಗ್ಯ ಕವಚವಾಗಿ ಶಿಕ್ಷಕರು ಶ್ರಮಿಸಬೇಕು. ಇಡೀ ಆವರಣವನ್ನು ಸ್ವಚ್ಛಗೊಳಿಸುವುದು, ಆರೋಗ್ಯ ಇಲಾಖೆಯ ನಿಬಂಧನೆಗಳನ್ನು (ಮಾಸ್ಕ್‌ ಧರಿಸುವುದು, ಥರ್ಮಲ್‌ ಸ್ಕ್ಯಾನಿಂಗ್‌, ಅಂತರ ಕಾ‍ಪಾಡುವುದು) ಕಟ್ಟುನಿಟ್ಟಾಗಿ ಪಾಲಿಸಲು ಸಂಸ್ಥೆಗಳು ಬದ್ಧವಾಗಿರಬೇಕು. ವಿದ್ಯಾರ್ಥಿಗಳಿಗೆ ಎಲ್ಲ ರೀತಿಯ ಸುರಕ್ಷತೆ ನೀಡಲು ಸರ್ಕಾರ ಎಲ್ಲ ಆಯಾಮಗಳನ್ನು ಬಳಸಿಕೊಂಡಿದೆ ಎಂಬ ಸಂದೇಶವನ್ನು ಪೋಷಕರಿಗೆ ತಲುಪಿಸುವ ಮೂಲಕ ವಿಶ್ವಾಸ ಹೆಚ್ಚಿಸಲು ಸಾಧ್ಯ’ ಎಂದೂ ಪತ್ರದಲ್ಲಿ ಅವರು ಅಭಿ‍ಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.