ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ (ಕಸಾಪ) ನಡೆದಿದೆ ಎನ್ನಲಾದ ಹಣಕಾಸಿನ ಅವ್ಯವಹಾರ ಹಾಗೂ ಅಧಿಕಾರ ದುರ್ಬಳಕೆಯ ಆರೋಪಗಳ ಬಗ್ಗೆ ವಿಚಾರಣೆಗೆ ಆದೇಶಿಸಿರುವ ಸಹಕಾರ ಇಲಾಖೆ, ಬೆಂಗಳೂರು ನಗರ ಜಿಲ್ಲೆಯ ಸಹಕಾರ ಸಂಘಗಳ ಉಪ ನಿಬಂಧಕ ಪಿ.ಶಶಿಧರ್ ಅವರನ್ನು ವಿಚಾರಣಾಧಿಕಾರಿಯನ್ನಾಗಿ ನೇಮಿಸಿದೆ.
ಕಸಾಪ ಕಾರ್ಯಚಟುವಟಿಕೆಗಳ ಬಗ್ಗೆ ಹಲವು ದೂರುಗಳು ಸಲ್ಲಿಕೆಯಾಗಿವೆ. ಈ ದೂರುಗಳ ಸತ್ಯಾಸತ್ಯತೆ ಅರಿಯಲು ಕರ್ನಾಟಕ ಸಂಘಗಳ ನೋಂದಣಿ ಕಾಯ್ದೆ 1960ರ ಕಲಂ 25ರ ಅಡಿ 17 ಅಂಶಗಳ ಬಗ್ಗೆ ವಿಚಾರಣೆ ನಡೆಸಲು ನಿರ್ಧರಿಸಿ, ಆದೇಶಿಸಲಾಗಿದೆ. ವಿಚಾರಣಾಧಿಕಾರಿಯು 45 ದಿನಗಳೊಳಗೆ ವಿಚಾರಣೆ ನಡೆಸಿ, ವರದಿ ಸಲ್ಲಿಸಬೇಕು ಎಂದು ಸಂಘಗಳ ಜಿಲ್ಲಾ ನೋಂದಣಾಧಿಕಾರಿ ಹಾಗೂ ಸಹಕಾರ ಸಂಘಗಳ ಉಪ ನಿಬಂಧಕರು ತಿಳಿಸಿದ್ದಾರೆ.
ಪರಿಷತ್ತಿನ ನಿಯಮ–ನಿಬಂಧನೆಯ ಪ್ರಕಾರ ಆಯ್ಕೆಗೊಂಡಿರುವ ಆಡಳಿತ ಮಂಡಳಿಯ ಪದಾಧಿಕಾರಿಗಳಿಗೆ ಮತ್ತು ಜಿಲ್ಲಾ ಪದಾಧಿಕಾರಿಗಳಿಗೆ ನಿಯಮ ಬಾಹಿರವಾಗಿ ಕಸಾಪ ಅಧ್ಯಕ್ಷರು ನೋಟಿಸ್ ಜಾರಿ ಮಾಡುತ್ತಿರುವ ಬಗ್ಗೆ ಪರಿಶೀಲಿಸಬೇಕು. 2022–23ನೇ ಸಾಲಿನಿಂದ ಈವರೆಗೆ ವಾಹನಗಳ ಖರೀದಿ ಮತ್ತು ಮಾರಾಟ ಮಾಡುವಲ್ಲಿ ಆಗಿರುವ ಹಣಕಾಸಿನ ದುರುಪಯೋಗದ ಬಗ್ಗೆ ಪರಿಶೀಲನೆ ನಡೆಸಬೇಕು ಎಂದು ಆದೇಶದಲ್ಲಿ ಸೂಚಿಸಲಾಗಿದೆ.
ಹಾವೇರಿ ಮತ್ತು ಮಂಡ್ಯ ಜಿಲ್ಲೆಯಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಲೆಕ್ಕಪತ್ರಗಳನ್ನು ಸಲ್ಲಿಸದೆ, ಹಣ ದುರುಪಯೋಗ ಮಾಡಿರುವ ಬಗ್ಗೆ ಪರಿಶೀಲಿಸಬೇಕು. ಪರಿಷತ್ತಿನ ಕಟ್ಟಡದ ನಿರ್ಮಾಣ ಮತ್ತು ನವೀಕರಣದಲ್ಲಿನ ಹಣ ದುರುಪಯೋಗದ ಬಗ್ಗೆ ವಿಚಾರಣೆ ನಡೆಸಬೇಕು ಎಂದು ತಿಳಿಸಲಾಗಿದೆ.
‘ಪರಿಷತ್ತಿನವರು ನಿಯಮ ಬಾಹಿರವಾಗಿ ವಿದೇಶ ಪ್ರವಾಸ ಕೈಗೊಂಡು, ಹಣ ದುರುಪಯೋಗ ಮತ್ತು ನಷ್ಟ ಮಾಡಿರುವ ಬಗ್ಗೆಯೂ ಪರಿಶೀಲಿಸಬೇಕು’ ಎಂದು ಸೂಚಿಸಲಾಗಿದೆ.
ಅಧ್ಯಕ್ಷರ ಕುಟುಂಬದ ಕಾರ್ಯಕ್ರಮಕ್ಕೆ ಹಣ ಬಳಕೆ?
ಕಸಾಪದ ಚಟುವಟಿಕೆ ಹಣ ಬಳಕೆ ಹಾಗೂ ಅಧಿಕಾರ ದುರುಪಯೋಗದ ಬಗೆಗಿನ ಆರೋಪಗಳನ್ನು ಆದೇಶದಲ್ಲಿ ಉಲ್ಲೇಖಿಸಲಾಗಿದ್ದು ಆ ಬಗ್ಗೆ ವಿಚಾರಣೆ ನಡೆಸುವಂತೆ ವಿಚಾರಣಾಧಿಕಾರಿಗೆ ಸೂಚಿಸಲಾಗಿದೆ.
ಯಾವ ಆರೋಪಗಳ ಪರಿಶೀಲನೆ
ಪರಿಷತ್ತಿನ ಹಣವನ್ನು ಕಸಾಪ ಅಧ್ಯಕ್ಷರ ಕುಟುಂಬದ ಸದಸ್ಯರ ಕಾರ್ಯಕ್ರಮಗಳಿಗೆ ನಿಯಮ ಬಾಹಿರವಾಗಿ ಬಳಕೆ ಮಾಡಿಕೊಂಡಿರುವುದು
2022-23ರಿಂದ ಈವರೆಗೆ ಅನುಮೋದಿಸಿರುವ ತಿದ್ದುಪಡಿಗಳು *ಸರ್ಕಾರ ಮತ್ತು ಇತರೆ ಮೂಲಗಳಿಂದ ಪರಿಷತ್ತಿನಲ್ಲಿ ಸಂಗ್ರಹವಾಗಿರುವ ಅನುದಾನವನ್ನು ಪಾರದರ್ಶಕವಾಗಿ ನಿರ್ವಹಿಸದೆ ಹಣ ದುರುಪಯೋಗ ಮಾಡಿರುವುದು
ವಿವಿಧ ಕಾರ್ಯಕ್ರಮಗಳಿಗಾಗಿ ಜಿಲ್ಲಾ ಘಟಕ ತಾಲ್ಲೂಕು ಘಟಕ ಮತ್ತು ಇತರೆ ಸಂಘ–ಸಂಸ್ಥೆಗಳಿಗೆ ನೀಡಿರುವ ಅನುದಾನವನ್ನು ಪಾರದರ್ಶಕವಾಗಿ ನಿರ್ವಹಿಸದೆ ಹಣ ದುರುಪಯೋಗ ಮಾಡಿರುವುದು
ಕಂಪ್ಯೂಟರ್ ಖರೀದಿ ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಕೆ ಅಗ್ನಿಶಾಮಕ ಉಪಕರಣದ ಅಳವಡಿಕೆ ಪುಸ್ತಕಗಳ ಮುದ್ರಣಗಳಿಗೆ ಸಂಬಂಧಿಸಿದಂತೆ ಹಣ ದುರ್ಬಳಕೆ
ಕರ್ನಾಟಕ ರಾಜ್ಯ ಲೆಕ್ಕಪರಿಶೋಧನಾ ಇಲಾಖೆಯು ಲೆಕ್ಕ ಪರಿಶೋಧನೆ ವರದಿಯಲ್ಲಿ ಆಕ್ಷೇಪಿಸಿರುವ ಅಂಶಗಳಿಗೆ ಅನುಪಾಲನಾ ವರದಿ ಸಲ್ಲಿಸದೆ ಇರುವುದು
ಪರಿಷತ್ತಿನ ಆಡಳಿತ ಮಂಡಳಿಯ ನಿರ್ಣಯಗಳನ್ನು ಸಂಘದ ನಿಯಮ-ನಿಬಂಧನೆಗೆ ವಿರುದ್ಧವಾಗಿ ತಮ್ಮ ಇಚ್ಛಾನುಸಾರ ದಾಖಲಿಸಿರುವುದು
ಸಂಘದ ಗುರುತಿನ ಚೀಟಿ (ಸ್ಮಾರ್ಟ್ ಕಾರ್ಡ್) ನೀಡುವಲ್ಲಿ ಆಗಿರುವ ಹಣ ದುರುಪಯೋಗ ಆಗಿರುವುದು
ಸಿಬ್ಬಂದಿ ನೇಮಕಾತಿ ಪ್ರಕ್ರಿಯೆಯಲ್ಲಿ ದೋಷಗಳ ಪತ್ತೆ ಮಾಡುವುದು
ಪರಿಷತ್ತಿನಲ್ಲಿ ಸಂಗ್ರಹವಾಗಿರುವ ಕಾರ್ಪೊರೇಟ್ ಕಂಪನಿಗಳ ಸಾಮಾಜಿಕ ಹೊಣೆಗಾರಿಕೆ ನಿಧಿ (ಸಿಎಸ್‌ಆರ್) ದುರುಪಯೋಗ ಆಗಿರುವುದು
ವಾರ್ಷಿಕ ಸರ್ವಸದಸ್ಯರ ಸಭೆಗಳ ಕುರಿತು ಪರಿಶೀಲಿಸುವುದು
ಪ್ರತಿ ವರ್ಷ ವಾರ್ಷಿಕ ಸರ್ವಸದಸ್ಯರ ಸಭೆಯ ನಂತರ ದಾಖಲಾತಿಗಳನ್ನು ಪ್ರಾಧಿಕಾರಕ್ಕೆ ಸಲ್ಲಿಸಿ ಸ್ವೀಕೃತಿ ಪಡೆದಿರುವ ಬಗ್ಗೆ ತಪಾಸಣೆ ಮಾಡುವುದು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.