ADVERTISEMENT

ಆರೋಪ ಹೊತ್ತ ಟೆಂಡರ್‌ ತನಿಖೆಗೆ ಆದೇಶ

ಬಿಡಿಎಯಿಂದ ಬೊಕ್ಕಸಕ್ಕೆ ನಷ್ಟ : 6 ತಿಂಗಳಲ್ಲಿ ವರದಿ ಸಲ್ಲಿಸಲು ಎಸಿಬಿಗೆ ಹೈಕೋರ್ಟ್‌ ನಿರ್ದೇಶನ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2019, 19:58 IST
Last Updated 18 ಡಿಸೆಂಬರ್ 2019, 19:58 IST
ಕರ್ನಾಟಕ ಹೈಕೋರ್ಟ್‌
ಕರ್ನಾಟಕ ಹೈಕೋರ್ಟ್‌   

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (ಬಿಡಿಎ), ಗುತ್ತಿಗೆ ನೀಡಿದ ಅಭಿವೃದ್ಧಿ ಕಾಮಗಾರಿಗಳನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸದೆ ಯೋಜನಾ ವೆಚ್ಚ ಏರಿಸಿ, ಬೊಕ್ಕಸಕ್ಕೆ ನಷ್ಟ ಉಂಟು ಮಾಡಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಪ್ರಕರಣಗಳನ್ನು ಸಮಗ್ರ ತನಿಖೆಗೆ ಒಳಪಡಿಸಬೇಕು’ ಎಂದು ಹೈಕೋರ್ಟ್‌ ಭ್ರಷ್ಟಾಚಾರ ನಿಗ್ರಹ ದಳಕ್ಕೆ (ಎಸಿಬಿ) ಆದೇಶಿಸಿದೆ.

ಗುತ್ತಿಗೆದಾರರ ಮತ್ತು ಬಿಡಿಎ ನಡುವಿನ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಬಿಡಿಎ ಸಲ್ಲಿಸಿರುವ ಕಮರ್ಶಿಯಲ್‌ ಮೇಲ್ಮನವಿಯೊಂದನ್ನು ನ್ಯಾಯಮೂರ್ತಿ ರವಿ ಮಳಿಮಠ ಮತ್ತು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ವಿಭಾಗೀಯ ನ್ಯಾಯಪೀಠ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ನ್ಯಾಯಪೀಠವು, ‘ಕೆಲ ಗುತ್ತಿಗೆದಾರರ ಜೊತೆ ಬಿಡಿಎ ಅಧಿಕಾರಿಗಳು ಶಾಮೀಲಾಗಿ, ಉದ್ದೇಶ ಪೂರ್ವಕವಾಗಿ ಕಾಮಗಾರಿ ವಿಳಂಬ ಮಾಡಲಾಗುತ್ತಿದೆ ಎನಿಸುತ್ತದೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂಪಾಯಿ ನಷ್ಟವಾಗುತ್ತಿದೆ’ ಎಂದು ಮೌಖಿಕ ಅಭಿಪ್ರಾಯ ವ್ಯಕ್ತಪಡಿಸಿತು.

ADVERTISEMENT

‘ಈ ಪ್ರಕರಣದಲ್ಲಿ ಗುತ್ತಿಗೆ ನೀಡಿಕೆ ವಿಚಾರದಲ್ಲಿ ಮೇಲ್ನೋಟಕ್ಕೆ ಸಾಕಷ್ಟು ಗೋಲ್‌ಮಾಲ್‌ ನಡೆದಿರುವ ಅನುಮಾನ ಕಂಡು ಬರುತ್ತಿದೆ. ಆದ್ದರಿಂದ, ಬಿಡಿಎ ಟೆಂಡರ್ ನೀಡಿ ಈಗಾಗಲೇ ಕಾಮಗಾರಿ ಮುಗಿದಿರುವ ಹಾಗೂ ಹಾಲಿ ನಡೆಯುತ್ತಿರುವ ಕಾಮಗಾರಿಗಳ ಬಗ್ಗೆ ಸಮಗ್ರ ತನಿಖೆಗೆ ನಡೆಸಿ ನಡೆಸಿ ಆರು ತಿಂಗಳಲ್ಲಿ
ವರದಿ ಸಲ್ಲಿಸಬೇಕು’ ಎಂದು ಎಸಿಬಿಗೆ ಆದೇಶಿಸಿತು.

ಪ್ರಕರಣವೇನು?: 2012ರ ಅಕ್ಟೋಬರ್ 29ರಂದು ಅರ್ಕಾವತಿ ಲೇ ಔಟ್ ನಿರ್ಮಾಣ ಮಾಡಲು ಥಣಿಸಂದ್ರದ ಗ್ರಾಮದಲ್ಲಿ ಹಲವು ಕಾಮಗಾರಿಗಳಿಗೆ ಬಿಡಿಎ ಟೆಂಡರ್ ಕರೆದಿತ್ತು.

ಅವುಗಳಲ್ಲಿ ಒಂದು ಕಾಮಗಾರಿಗೆ ಸಂಬಂಧಿಸಿದಂತೆ ಮಧ್ಯಸ್ಥಿಕೆ ಕೇಂದ್ರ ಬಿಡಿಎಗುತ್ತಿಗೆದಾರರ ಟೆಂಡರ್‌ ಮೊತ್ತವನ್ನು₹ 10 ಕೋಟಿಗೂ ಹೆಚ್ಚು ಏರಿಸಿ ನಿರ್ಣಯ ಕೈಗೊಂಡಿತ್ತು.

ಈ ನಿರ್ಣಯವನ್ನು ಬಿಡಿಎ 120 ದಿನಗಳ ಒಳಗಾಗಿ ನ್ಯಾಯಾಲಯದಲ್ಲಿ ಪ್ರಶ್ನಿಸಬೇಕಿತ್ತು. ಆದರೆ, ಮೇಲ್ಮನವಿ ಸಲ್ಲಿಸಿರಲಿಲ್ಲ. ಹೀಗಾಗಿ ಜಿಲ್ಲಾ ನ್ಯಾಯಾಲಯದಲ್ಲಿ ಕಾಲಮಿತಿ ಮೀರಿ ಸಲ್ಲಿಸಿದ ಮೇಲ್ಮನವಿ ವಜಾಗೊಂಡಿತ್ತು. ಇದನ್ನು ಹೈಕೋರ್ಟ್‌ನಲ್ಲಿಪ್ರಶ್ನಿಸಲಾಗಿದೆ.

ತನಿಖೆ ಆದೇಶಕ್ಕೆ ಬಿಎಸ್‌ವೈ ಸ್ವಾಗತ

‘ಬಿಡಿಎ ಕಾಮಗಾರಿಗಳ ಕುರಿತಾದ ಆರೋಪಗಳ ಬಗ್ಗೆ ಹೈಕೋರ್ಟ್‌, ಎಸಿಬಿ ತನಿಖೆಗೆ ಆದೇಶಿಸಿರುವುದು ಸ್ವಾಗತಾರ್ಹ’ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ.

‘ಬಿಡಿಎ ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಕಾಮಗಾರಿಗಳ ಬಗ್ಗೆ ಕಳೆದ ಒಂದೆರಡು ವರ್ಷಗಳಲ್ಲಿ ನಡೆದ ಗುತ್ತಿಗೆ ಕೆಲಸಗಳ ತನಿಖೆ ಆಗಬೇಕು. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಜೊತೆಗೆ ಬಿಬಿಎಂಪಿಯ ಕಳೆಪೆ ಕಾಮಗಾರಿಗಳನ್ನೂ ಎಸಿಬಿ ತನಿಖೆ ವೇಳೆ ಗಣನೆಗೆ ತೆಗೆದುಕೊಳ್ಳಬೇಕು’ ಎಂದು ಮುಖ್ಯಮಂತ್ರಿ ಪ್ರಕಟಣೆಯಲ್ಲಿ ಕೋರಿದ್ದಾರೆ.

’ಬಿಡಿಎ ಮತ್ತು ಬಿಬಿಎಂಪಿಯಲ್ಲಿ ಅನೇಕ ಕಾಮಗಾರಿಗಳು, ಅದರಲ್ಲೂ ರಸ್ತೆ ಕಾಮಗಾರಿಗಳು ಕಳಪೆಯಾಗಿವೆ. ಅಧಿಕಾರಿಗಳು, ಗುತ್ತಿಗೆದಾರರು ಗುಣಮಟ್ಟ ಕಾಯ್ದುಕೊಳ್ಳುವಲ್ಲಿ ವಿಫಲವಾಗಿದ್ದಾರೆ. ಆದ್ದರಿಂದ, ತನಿಖೆ ಸಮಗ್ರವಾಗಿರಬೇಕು ಮತ್ತುಎಸಿಬಿ ಆರು ತಿಂಗಳ ಗಡುವಿಗೆ ಕಾಯದೆ ಆದಷ್ಟುಶೀಘ್ರ ವರದಿ ನೀಡಬೇಕು’ ಎಂದು ಯಡಿಯೂರಪ್ಪ ಅಭಿಪ್ರಾಯಪಟ್ಟಿದ್ದಾರೆ.

‘ಕಳಪೆ ಕಾಮಗಾರಿಗಳು ಯಾವುವು ಎಂದು ಗೊತ್ತಾದರೆ ಅವುಗಳಿಗೆ ಸರ್ಕಾರ ನೀಡುವ ಹಣವನ್ನು
ತಡೆ ಹಿಡಿಯಬಹುದು. ನನ್ನ ಸರ್ಕಾರ ಯಾವುದೇ ಕಾರಣಕ್ಕೂ ಕಳಪೆ ಕಾಮಗಾರಿಗೆ ಆಸ್ಪದ ನೀಡುವುದಿಲ್ಲ. ಮುಂದಿನ ದಿನಗಳಲ್ಲಿ ನಮ್ಮ ಸರ್ಕಾರ ಬಿಡಿಎ ಮತ್ತು ಬಿಬಿಎಂಪಿ ಕಾಮಗಾರಿಗಳು, ಅದರಲ್ಲೂ ರಸ್ತೆ ಕಾಮಗಾರಿಗಳ ಗುಣಮಟ್ಟವನ್ನು ಅತ್ಯಂತವಿಶೇಷವಾಗಿ ಮತ್ತು ಸೂಕ್ಷ್ಮವಾಗಿ ಗಮನಿಸಲಿದೆ’ಎಂದು ಪ್ರಕಟಣೆಯಲ್ಲಿ ವಿವರಿಸಿದ್ದಾರೆ.

‘ವಿಶೇಷ ತಂಡ ರಚನೆ’

ಬಿಡಿಎ ಪರ ಹಾಜರಿದ್ದ ಹಿರಿಯ ವಕೀಲ ನಂಜುಂಡರೆಡ್ಡಿ ಅವರು, ‘ಆರೋಪ ಹೊತ್ತ ಪ್ರಕರಣಗಳ ಬಗ್ಗೆ ನಿವೃತ್ತ ನ್ಯಾಯಮೂರ್ತಿಗಳಿಂದ ವಿಚಾರಣೆ ನಡೆಸಬೇಕು’ ಎಂದರು. ಇದಕ್ಕೆ ನ್ಯಾಯಪೀಠ, ‘ಯಾರಿಂದ ವಿಚಾರಣೆ ಮಾಡಿಸುತ್ತೀರಿ’ ಎಂದು ಅಡ್ವೊಕೇಟ್‌ ಜನರಲ್‌ ಅವರನ್ನು ಪ್ರಶ್ನಿಸಿತು.

ಇದಕ್ಕೆ ಪ್ರಭುಲಿಂಗ ಕೆ.ನಾವದಗಿ, ‘ಇಂತಹ ಪ್ರಕರಣಗಳನ್ನು ಎಸಿಬಿಗೆ ನೀಡಲಾಗುವುದು. ಅವಶ್ಯಕತೆ ಬಿದ್ದರೆ ಎಸಿಬಿಯಲ್ಲೇ ಇದಕ್ಕಾಗಿ ವಿಶೇಷ ತಂಡ ರಚಿಸಲಾಗುವುದು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.