ADVERTISEMENT

ಇಂದಿರಾನಗರ: ರಸ್ತೆ ದುರಸ್ತಿಗೆ ಸೂಚನೆ

ವಾರ್ಡ್ ಸಭೆಯಲ್ಲಿ ಸಮಸ್ಯೆಗಳ ಪ್ರಸ್ತಾಪ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2020, 18:05 IST
Last Updated 7 ನವೆಂಬರ್ 2020, 18:05 IST
ಇಂದಿರಾ ನಗರದ 17ನೇ ಸಿ ಮತ್ತು ಡಿ ಅಡ್ಡರಸ್ತೆಗಳನ್ನು ಬಿಬಿಎಂಪಿ ಆಡಳಿತಾಧಿಕಾರಿ ಗೌರವ ಗುಪ್ತ ಶನಿವಾರ ಪರಿಶೀಲನೆ ನಡೆಸಿದರು
ಇಂದಿರಾ ನಗರದ 17ನೇ ಸಿ ಮತ್ತು ಡಿ ಅಡ್ಡರಸ್ತೆಗಳನ್ನು ಬಿಬಿಎಂಪಿ ಆಡಳಿತಾಧಿಕಾರಿ ಗೌರವ ಗುಪ್ತ ಶನಿವಾರ ಪರಿಶೀಲನೆ ನಡೆಸಿದರು   

ಬೆಂಗಳೂರು: ಇಂದಿರಾನಗರದ 17ನೇ ಸಿ ಮತ್ತು ಡಿ ಅಡ್ಡರಸ್ತೆಗಳನ್ನು ದುರಸ್ತಿ ಪಡಿಸುವಂತೆ ಬಿಬಿಎಂಪಿ ಆಡಳಿತಾಧಿಕಾರಿ ಗೌರವ ಗುಪ್ತ ಅಧಿಕಾರಿಗಳಿಗೆ ಸೂಚಿಸಿದರು.

ಹೊಯ್ಸಳ ನಗರ ವಾರ್ಡ್‌ನಲ್ಲಿ ಶನಿವಾರ ನಡೆದ ವಾರ್ಡ್‌ ಸಭೆಯಲ್ಲಿ ಆಡಳಿತಾಧಿಕಾರಿ ಭಾಗವಹಿಸಿದರು.

‘17ನೇ ಸಿ ಮತ್ತು ಡಿ ಅಡ್ಡ ರಸ್ತೆಗಳನ್ನು ಜಲಮಂಡಳಿಯವರು ಅಗೆದಿದ್ದಾರೆ. ತಿಂಗಳಾದರೂ ದುರಸ್ತಿ ಮಾಡಿಲ್ಲ’ ಎಂದು ಸ್ಥಳೀಯರು ದೂರಿದರು. ಸಭೆ ಬಳಿಕ ರಸ್ತೆಗಳ
ಸ್ಥಿತಿ ಪರಿಶೀಲಿಸಿದ ಆಡಳಿತಾಧಕಾರಿ ಶೀಘ್ರ ದುರಸ್ತಿ ಕಾಮಗಾರಿಗೆ ಸೂಚಿಸಿದರು.

ADVERTISEMENT

‘ವಾರ್ಡ್ ವ್ಯಾಪ್ತಿಯಲ್ಲಿ ಸಮರ್ಪಕವಾಗಿ ಕಸ ವಿಂಗಡಣೆಯಾಗುತ್ತಿಲ್ಲ. ಒಣ ಕಸ ಸಂಗ್ರಹಣಾ ಕೇಂದ್ರ ಇಲ್ಲ. ಉದ್ಯಾನಗಳನ್ನು ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ’ ಎಂದು ಸ್ಥಳೀಯರು ವಾರ್ಡ್‌ ಸಭೆಯಲ್ಲಿ ದೂರಿದರು.

ವಸತಿ ಪ್ರದೇಶದಲ್ಲಿ ವಾಣಿಜ್ಯ ಕಟ್ಟಡಗಳು ನಿರ್ಮಾಣವಾಗುತ್ತಿದ್ದು, ಇದನ್ನು ತಡೆಯಲು ಕ್ರಮ ವಹಿಸಬೇಕು. ಅನಧಿಕೃತ ಕಟ್ಟಡಗಳ ನಿರ್ಮಾಣವನ್ನು ನಿಯಂತ್ರಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದರು.

ಗೌರವ ಗುಪ್ತ, ‘ರಸ್ತೆ ಗುಂಡಿಗಳನ್ನು ತ್ವರಿತವಾಗಿ ಮುಚ್ಚಬೇಕು. ಅಚ್ಚುಕಟ್ಟಾಗಿ ಕಸ ವಿಲೇವಾರಿ ಆಗಬೇಕು. ಪಾದಚಾರಿ ರಸ್ತೆಗಳು ಸುಸ್ಥಿತಿಯಲ್ಲಿಡಬೇಕು. ಪಾಲಿಕೆ, ಜಲಮಂಡಳಿ, ಬೆಸ್ಕಾಂ, ಪೊಲೀಸ್ ಅಧಿಕಾರಿಗಳು ಸಮನ್ವಯದಿಂದ ಕೆಲಸ ಮಾಡಿ ಸಮಸ್ಯೆಗಳನ್ನು ಸ್ಥಳೀಯ ಹಂತದಲ್ಲೇ ನಿವಾರಣೆ ಮಾಡಲು ಕ್ರಮ ಕೈಗೊಳ್ಳಬೇಕು’ ಎಂದೂ ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.