ADVERTISEMENT

ತಂದೆಗೆ ಅಂಗಾಂಗ ದಾನ ಮಾಡಿದ ಪುತ್ರ

ಬಿಜಿಎಸ್ ಗ್ಲೇನಿಗಲ್ಸ್ ಗ್ಲೋಬಲ್ ಆಸ್ಪತ್ರೆಯಲ್ಲಿ ಯಶಸ್ವಿ ಶಸ್ತ್ರಚಿಕಿತ್ಸೆ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2019, 19:06 IST
Last Updated 25 ಸೆಪ್ಟೆಂಬರ್ 2019, 19:06 IST
ಅಂಗಾಂಗ ಕಸಿ ಮಾಡಿಸಿಕೊಂಡ ವಿಕ್ಟರ್‌ ಅವರಿಗೆ ಆಸ್ಪತ್ರೆ ವೈದ್ಯರು ಶುಭಹಾರೈಸಿದರು
ಅಂಗಾಂಗ ಕಸಿ ಮಾಡಿಸಿಕೊಂಡ ವಿಕ್ಟರ್‌ ಅವರಿಗೆ ಆಸ್ಪತ್ರೆ ವೈದ್ಯರು ಶುಭಹಾರೈಸಿದರು   

ಬೆಂಗಳೂರು:ಪಿತ್ತಜನಕಾಂಗದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ 59 ವರ್ಷದ ವ್ಯಕ್ತಿಗೆ ಮಾಲ್ಡೀವ್ಸ್‌ನಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದ ಪುತ್ರನೇ ಅಂಗಾಂಗ ದಾನ ಮಾಡುವ ಮೂಲಕ ಆಸರೆಯಾಗಿದ್ದಾರೆ.

ವಿಕ್ಟರ್‌ ಎಂಬುವರುಪಿತ್ತಜನಕಾಂಗ ಕ್ಯಾನ್ಸರ್‌ ಚಿಕಿತ್ಸೆಗೆ ನಗರದ ಬಿಜಿಎಸ್ ಗ್ಲೇನಿಗಲ್ಸ್ ಗ್ಲೋಬಲ್ ಆಸ್ಪತ್ರೆಗೆ ದಾಖಲಾಗಿದ್ದರು. ಸೂಕ್ತ ದಾನಿ ಸಿಗದ ಹಿನ್ನೆಲೆಯಲ್ಲಿ ಪುತ್ರಡಾ.ಪಾಲ್ ಅಂಗಾಂಗ ದಾನಿ ಮಾಡಿದ್ದು, ಯಶಸ್ವಿ ಕಸಿ ಮಾಡಲಾಯಿತು.

‘ಮಧುಮೇಹ ಹಾಗೂ ಕ್ಯಾನ್ಸರ್‌ನಿಂದಾಗಿ ದೀರ್ಘಕಾಲದಿಂದ ರೋಗಿಯ ಸ್ಥಿತಿ ಗಂಭೀರವಾಗಿತ್ತು. ಪರೀಕ್ಷೆ ನಡೆಸಿದ ವೈದ್ಯರು ಕ್ಯಾನ್ಸರ್ ನಿಯಂತ್ರಣಕ್ಕೆ ಪಿತ್ತಜನಕಾಂಗದ ಕಸಿ ನಡೆಸಲು ನಿರ್ಧರಿಸಿದರು. ಇದಕ್ಕಾಗಿ ರೋಗಿಯ ಮಗನ ಪಿತ್ತಜನಕಾಂಗದ ಭಾಗವನ್ನು ಪಡೆದು‌, ಶಸ್ತ್ರಚಿಕಿತ್ಸೆ ನಡೆಸಲಾಯಿತು’ ಎಂದು ಆಸ್ಪತ್ರೆಯ ಎಚ್‍ಪಿಬಿ ಮತ್ತು ಬಹು ಅಂಗ ಕಸಿ ಶಸ್ತ್ರಚಿಕಿತ್ಸಕ ಡಾ. ವೇಣುಗೋಪಾಲ್ ಭಾಸ್ಕರ್ ಪಿಳ್ಳೈ ತಿಳಿಸಿದರು.

ADVERTISEMENT

‘ಮಧುಮೇಹದಿಂದಾಗಿ ರೋಗಿಗೆ ಹೃದಯ ಸಮಸ್ಯೆಯ ಲಕ್ಷಣಗಳೂ ಕಾಣಿಸಿಕೊಂಡಿದ್ದವು. ಕಸಿ ಚಿಕಿತ್ಸೆ ನಂತರ ಬಹುವಿಧ ಆರೈಕೆಯನ್ನು ನೀಡಲಾಯಿತು. ಈಗ ಆರೋಗ್ಯದಲ್ಲಿ ಸುಧಾರಣೆ ಕಂಡು ಬಂದಿದ್ದು, ಶೀಘ್ರವೇ ಬಿಡುಗಡೆ ಹೊಂದಲಿದ್ದಾರೆ’ ಎಂದರು.

ಆಸ್ಪತ್ರೆಯ ಬಹು ಅಂಗ ಕಸಿ ಸಲಹಾ ತಜ್ಞ ಡಾ. ಸುನಿಲ್ ಶೆನ್ವಿ ಮಾತನಾಡಿ, ‘ಜೀವಂತ ದಾನಿಯಿಂದ ಅಂಗಾಂಗ ಪಡೆದು, ಕಸಿ ಶಸ್ತ್ರಚಿಕಿತ್ಸೆ ನಡೆಸುವುದು ಸವಾಲಿನ ಕೆಲಸ. ಇದಕ್ಕೆ ಮೂರು ಹಂತಗಳಲ್ಲಿ ಚಿಕಿತ್ಸೆ ನಡೆಸಲಾಗುತ್ತದೆ. ದಾನಿಯಿಂದ ಅರ್ಧದಷ್ಟು ಪಿತ್ತಜನಕಾಂಗ ಹೊರತೆಗೆದು, ರೋಗಿಯಿಂದ ಹಾನಿಗೊಳಗಾದ ಪಿತ್ತಜನಕಾಂಗವನ್ನು ಹೊರತೆಗೆಯಬೇಕು. ನಂತರ ರೋಗಿಯ ದೇಹದಲ್ಲಿ ಹೊಸ ಅಂಗವನ್ನು ಜೋಡಿಸಬೇಕು. ರೋಗಿಗೆ ಕ್ಯಾನ್ಸರ್ ಇದ್ದುದರಿಂದ ಚಿಕಿತ್ಸೆ ಮತ್ತಷ್ಟು ಸವಾಲಿನಿಂದ ಕೂಡಿತ್ತು’ ಎಂದರು.

ಆಸ್ಪತ್ರೆಯ ಸಿಇಒಶೈಲಜಾ ಸುರೇಶ್, ‘ಅಂಗಾಂಗ ವೈಫಲ್ಯದಿಂದ ಬಳಲುತ್ತಿರುವ ರೋಗಿಗಳ ಜೀವನ ಉಳಿಸಲು ಅಂಗಾಂಗ ದಾನ ಸಹಕಾರಿಯಾಗಲಿದೆ. ಇದಕ್ಕೆ ದಾನಿಗಳು ಸ್ವಯಂಪ್ರೇರಿತರಾಗಿ ಮುಂದೆ ಬರಬೇಕು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.