ADVERTISEMENT

ಬೆಂಗಳೂರು: ಬೈಬಲ್‌ ಕಡ್ಡಾಯಕ್ಕೆ ಸಂಘಟನೆಗಳ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2022, 4:26 IST
Last Updated 26 ಏಪ್ರಿಲ್ 2022, 4:26 IST
   

ಬೆಂಗಳೂರು: ಇಲ್ಲಿನ ರಿಚರ್ಡ್ಸ್ ಟೌನ್‌ನ ಕ್ಲಾರೆನ್ಸ್‌ ಪ್ರೌಢಶಾಲೆಯಲ್ಲಿ ಬೈಬಲ್‌ ಅಧ್ಯಯನ ಕಡ್ಡಾಯಗೊಳಿಸಿದ್ದಾರೆ ಎಂದು ಕೆಲವು ಸಂಘಟನೆಗಳು ಆರೋಪಿಸಿವೆ.

ಕ್ರೈಸ್ತರಲ್ಲದ ವಿದ್ಯಾರ್ಥಿಗಳು ಬೈಬಲ್‌ ತರಗತಿಗಳಿಗೆ ಕಡ್ಡಾಯವಾಗಿ ಹಾಜರಾಗಬೇಕು ಮತ್ತು ಈ ಗ್ರಂಥವನ್ನು ತರಬೇಕು ಎಂದು ಒತ್ತಡ ಹೇರಲಾಗುತ್ತಿದೆ ಎಂದೂ ಸಂಘಟನೆಗಳು ದೂರಿವೆ.

‘ತರಗತಿಗಳಿಗೆಬೈಬಲ್‌ ಅನ್ನು ಕಡ್ಡಾಯವಾಗಿ ಕಳುಹಿಸಲಾಗುವುದು ಮತ್ತು ಬೈಬಲ್‌ ಕೊಂಡೊಯ್ಯಲು ಯಾವುದೇ ರೀತಿ ಆಕ್ಷೇಪ ಮಾಡುವುದಿಲ್ಲ’ ಎಂದು 2022–23ರ ಶೈಕ್ಷಣಿಕ ವರ್ಷದ ದಾಖಲಾತಿಯ ಅರ್ಜಿಯ ಜತೆಗೆ ಘೋಷಣಾ ಪತ್ರವನ್ನು ಪೋಷಕರು ಬರೆದುಕೊಡಬೇಕು ಎಂದು ಶಾಲೆಯ ಆಡಳಿತ ಮಂಡಳಿ ಒತ್ತಾಯಿಸುತ್ತಿದೆ. ಜತೆಗೆ, ಶಾಲೆಯ ಈ ನಿಯಮಾವಳಿಗಳಿಗೆ ಆಕ್ಷೇಪ ಮಾಡದವರು ಮಾತ್ರ ಪ್ರವೇಶ ಪಡೆಯಲು ಅವಕಾಶವಿದೆ. ಶಾಲೆಯ ವೆಬ್‌ಸೈಟ್‌ನಲ್ಲೂ ಈ ಬಗ್ಗೆ ಉಲ್ಲೇಖಿಸಲಾಗಿದೆ’ ಎಂದು ಹಿಂದೂ ಜನಜಾಗೃತಿ ಸಮಿತಿ ವಕ್ತಾರ ಮೋಹನ್‌ ಗೌಡ ದೂರಿದರು.

ADVERTISEMENT

‘ಕ್ರೈಸ್ತರಲ್ಲದ ವಿದ್ಯಾರ್ಥಿಗಳ ಮೇಲೆ ಬೈಬಲ್ ಗ್ರಂಥವನ್ನು ಬಲವಂತವಾಗಿ ಹೇರಲಾಗಿದೆ. ಮಕ್ಕಳ ಹಕ್ಕುಗಳ ರಕ್ಷಣೆಯ ಕಾಯ್ದೆಯ ಉಲ್ಲಂಘನೆಯೂ ಆಗಿದೆ. ಕ್ರೈಸ್ತ ಶಾಲೆಗಳು ಈ ರೀತಿ ಬಲವಂತವಾಗಿ ಧರ್ಮಪ್ರಚಾರ ಮಾಡುವುದರ ವಿರುದ್ಧಶಿಕ್ಷಣ ಇಲಾಖೆ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕು’ ಎಂದು ಒತ್ತಾಯಿಸಿದ್ದಾರೆ.

ಶಾಲೆಗೆ ಭೇಟಿ ನೀಡಿದ ಉತ್ತರ ವಲಯ–3ರ ಕ್ಷೇತ್ರ ಶಿಕ್ಷಣಾಧಿಕಾರಿ, ಆಡಳಿತ ಮಂಡಳಿಯಿಂದ ವರದಿ ಪಡೆದರು. ಮುನ್ನೆಚ್ಚರಿಕೆ ಕ್ರಮವಾಗಿ ಪುಲಿಕೇಶಿ ನಗರ ಠಾಣೆ ಪೊಲೀಸರು ಶಾಲೆಗೆ ಭದ್ರತೆ ಒದಗಿಸಿದ್ದರು.

‘ಕಾನೂನು ಪಾಲಿಸಲು ಬದ್ಧ’

‘ನಮ್ಮ ಶಾಲೆಯ ಒಂದು ನೀತಿಯ ಬಗ್ಗೆ ಕೆಲವರು ಅಸಮಾಧಾನ ಹೊಂದಿದ್ದಾರೆ ಎನ್ನುವುದು ಗೊತ್ತಾಗಿದೆ. ಶಾಂತಿ ಪ್ರಿಯರಾದ ನಾವು ಕಾನೂನು ಪಾಲಿಸಲು ಬದ್ಧರಾಗಿದ್ದೇವೆ’ ಎಂದು ಕ್ಲಾರೆನ್ಸ್ ಪ್ರೌಢಶಾಲೆಯ ಪ್ರಾಂಶುಪಾಲ ಜೆರ್ರಿ ಜಾರ್ಜ್ ಮ್ಯಾಥ್ಯೂ ಹೇಳಿದ್ದಾರೆ.

‘ಈ ವಿಷಯದ ಬಗ್ಗೆ ನಮ್ಮ ವಕೀಲರನ್ನು ಸಂಪರ್ಕಿಸಿದ್ದೇವೆ. ಅವರ ಸಲಹೆ ಪಡೆದು ಮುಂದಿನ ಕ್ರಮಗಳನ್ನು ಕೈಗೊಳ್ಳುತ್ತೇವೆ. ನಾವು ಈ ದೇಶದ ಕಾನೂನುಗಳನ್ನು ಉಲ್ಲಂಘಿಸುವುದಿಲ್ಲ’ ಎಂದು ತಿಳಿಸಿದ್ದಾರೆ.

‘ಬಲವಂತದ ಅಧ್ಯಯನಕ್ಕೆ ಅವಕಾಶ ಇಲ್ಲ’

‘ಯಾವುದೇ ಧಾರ್ಮಿಕ ಗ್ರಂಥವನ್ನು ಅಧ್ಯಯನ ಮಾಡುವಂತೆ ಶಿಕ್ಷಣ ಸಂಸ್ಥೆಗಳು ಒತ್ತಾಯಿಸಬಾರದು. ಇದಕ್ಕೆ ಅವಕಾಶವೂ ಇಲ್ಲ. ಈ ಬಗ್ಗೆ ಅಧಿಕೃತವಾಗಿ ಯಾವುದೇ ದೂರು ಸ್ವೀಕರಿಸಿಲ್ಲ. ಸಾಮಾಜಿಕ ಮಾಧ್ಯಮಗಳ ಮೂಲಕ ಮಾಹಿತಿ ದೊರೆತಿದೆ. ಅಧಿಕಾರಿಗಳಿಗೆ ಪರಿಶೀಲಿಸುವಂತೆ ಸೂಚಿಸಲಾಗಿದೆ’ ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.