ADVERTISEMENT

ಕಂಟೈನ್‌ಮೆಂಟ್‌ ಪ್ರದೇಶದಲ್ಲಿ ಕಾಂಪೌಂಡ್‌ ಹಾರಿ ಓಡಾಡಿದ ಯುವತಿಯರು; ವಿಡಿಯೊ ವೈರಲ್

​ಪ್ರಜಾವಾಣಿ ವಾರ್ತೆ
Published 11 ಮೇ 2020, 19:29 IST
Last Updated 11 ಮೇ 2020, 19:29 IST

ಬೆಂಗಳೂರು: ಕಂಟೈನ್‌ಮೆಂಟ್ ಪ್ರದೇಶವೆಂದು ಘೋಷಿಸಿ ಸೀಲ್‌ಡೌನ್ ಮಾಡಲಾಗಿರುವ ಪಾದರಾಯನಪುರದವರು ಎನ್ನಲಾದ ಯುವತಿಯರಿಬ್ಬರು ಕಾಂಪೌಂಡ್‌ ಹಾರಿ ಅಕ್ಕ–ಪಕ್ಕದ ಪ್ರದೇಶಗಳಿಗೆ ಹೋಗಿ ಬರುತ್ತಿದ್ದಾರೆ ಎನ್ನಲಾಗಿದ್ದು, ಇದರ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಪಾದರಾಯನಪುರದಲ್ಲಿ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದು, ಪ್ರಮುಖ ರಸ್ತೆಗಳಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಲಾಗಿದೆ. ಒಳಗಿದ್ದವರನ್ನು ಹೊರಗೆ ಬಿಡುತ್ತಿಲ್ಲ. ಇದೇ ಕಾರಣಕ್ಕೆ ಕೆಲ ಯುವಕ–ಯುವತಿಯರು, ಕಾಂಪೌಂಡ್ ಹಾರಿ ಸುತ್ತಾಡುತ್ತಿರುವ ಆರೋಪ ವ್ಯಕ್ತವಾಗಿದೆ.

ಸ್ಥಳೀಯ ನಿವಾಸಿಗಳು ಎನ್ನಲಾದ ಯುವತಿಯರಿಬ್ಬರು ಪೊಲೀಸರ ಕಣ್ತಪ್ಪಿಸಿ ರೈಲು ಹಳಿಯ ಕಾಂಪೌಂಡ್ ಹಾರಿ ಇತ್ತೀಚೆಗೆ ವಿಜಯನಗರಕ್ಕೆ ಬಂದಿದ್ದರು. ವಾಪಸು ಮನೆಗೆ ಹೋಗಲೆಂದು ಕಾಂಪೌಂಡ್‌ ಬಳಿ ಬಂದಿದ್ದ ಯುವತಿಯರು, ಕಾಂಪೌಂಡ್ ಹತ್ತಲು ಪ್ರಯತ್ನಿಸುತ್ತಿದ್ದರು. ಗಸ್ತಿನಲ್ಲಿದ್ದ ಪೊಲೀಸರು, ಯುವತಿಯರನ್ನು ಕಂಡು ವಿಚಾರಿಸಿದ್ದರು. ಪೊಲೀಸರ ಮಾತಿಗೂ ಕಿಮ್ಮತ್ತು ನೀಡದೇ ಅವರ ಎದುರೇ ಯುವತಿಯರು ಕಾಂಪೌಂಡ್ ಹಾರಿ ಪರಾರಿಯಾಗಿದ್ದಾರೆ.

ADVERTISEMENT

ಯುವತಿಯರೆಂಬ ಕಾರಣಕ್ಕೆ ಪೊಲೀಸರು ಹತ್ತಿರಕ್ಕೂ ಹೋಗಿಲ್ಲ. ಮೂಕ ಪ್ರೇಕ್ಷಕರಂತೆ ನಿಂತುಕೊಂಡು ಯುವತಿಯರು ಕಾಂಪೌಂಡ್ ಹಾರುವುದನ್ನು ನೋಡುತ್ತಿದ್ದರು. ಈ ದೃಶ್ಯವನ್ನು ಸ್ಥಳೀಯರೊಬ್ಬರು ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡಿದ್ದಾರೆ.

‘ಘಟನೆ ಬಗ್ಗೆ ಗಸ್ತಿನಲ್ಲಿದ್ದ ಸಿಬ್ಬಂದಿ ಮಾಹಿತಿ ನೀಡಿದ್ದಾರೆ. ಯುವತಿಯರು ಬುರ್ಖಾ ಧರಿಸಿದ್ದರಿಂದ ಗುರುತು ಪತ್ತೆಯಾಗಿಲ್ಲ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

ನಿರ್ದಾಕ್ಷಿಣ್ಯ ಕ್ರಮಕ್ಕೆ ಚರ್ಚೆ; ಘಟನೆ ಬಗ್ಗೆ ಟ್ವೀಟ್ ಮಾಡಿರುವ ಆರೋಗ್ಯ ಸಚಿವ ಬಿ.ಶ್ರೀರಾಮುಲು, ‘ಪಾದರಾಯನಪುರದಲ್ಲಿ ಕೆಲ ಮಹಿಳೆಯರು ಹೊರಗೆ ಹೋಗಿ ಬರುತ್ತಿರುವ ಬಗ್ಗೆ ತನಿಖೆಗೆ ಸೂಚಿಸಲಾಗಿದೆ. ನಾಡಿನ ಜನರ ಆರೋಗ್ಯದ ವಿಷಯದಲ್ಲಿ ಆಟವಾಡುವ ಇಂತಹ ಘಟನೆ ಸಹಿಸಲು ಅಸಾಧ್ಯ. ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕ್ಕಾಗಿ ಮುಖ್ಯಮಂತ್ರಿಯವರ ಜೊತೆ ಚರ್ಚೆ ನಡೆಸಲಾಗುವುದು’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.