ADVERTISEMENT

ಪಾದರಾಯನಪುರ: ಬಂಧಿತರ ಸಂಖ್ಯೆ 126ಕ್ಕೆ ಏರಿಕೆ

ಪ್ರಮುಖ ಆರೋಪಿಗಳೂ ಸೆರೆ; ಕೆಎಫ್‌ಡಿ ಇರ್ಫಾನ್‌ಗಾಗಿ ಪೊಲೀಸರಿಂದ ತೀವ್ರ ಶೋಧ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2020, 20:00 IST
Last Updated 21 ಏಪ್ರಿಲ್ 2020, 20:00 IST
ಬೆಂಗಳೂರಿನ ಪಾದರಾಯನಪುರ ಪಕ್ಕದಲ್ಲಿರುವ ಜೆಜೆ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬುಧವಾರ ಔಷಧ ಸಿಂಪಡಣೆ ಮಾಡಲಾಯಿತು
ಬೆಂಗಳೂರಿನ ಪಾದರಾಯನಪುರ ಪಕ್ಕದಲ್ಲಿರುವ ಜೆಜೆ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬುಧವಾರ ಔಷಧ ಸಿಂಪಡಣೆ ಮಾಡಲಾಯಿತು   

ಬೆಂಗಳೂರು: ಪಾದರಾಯನಪುರ ಗಲಾಟೆ ಸಂಬಂಧ ಇದುವರೆಗೆ 126 ಮಂದಿಯನ್ನು ಪೊಲೀಸರು ಬಂಧಿಸಿದ್ದು, ಅವರೆಲ್ಲರನ್ನೂ ರಾಮನಗರ ಜಿಲ್ಲಾ ಕಾರಾಗೃಹದಲ್ಲಿ ಇರಿಸಲಾಗಿದೆ.

‘ಕೋವಿಡ್–19’ ಸೋಂಕಿತರ ಜೊತೆ ದ್ವಿತೀಯ ಸಂಪರ್ಕವಿಟ್ಟುಕೊಂಡಿದ್ದವರನ್ನು ಕ್ವಾರಂಟೈನ್‌ ಮಾಡಲು ಬಿಬಿಎಂಪಿ, ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ಪೊಲೀಸರು ಪಾದರಾಯನಪುರದ ಅರ್ಫತ್ ನಗರಕ್ಕೆ ಭಾನುವಾರ ರಾತ್ರಿ ಹೋಗಿದ್ದರು. ಅವರ ಮೇಲೆ ಹಲ್ಲೆ ಮಾಡಲಾಗಿತ್ತು. ಆರೋಪಿಗಳು ಬ್ಯಾರಿಕೇಡ್, ಪೆಂಡಾಲ್ ಧ್ವಂಸ ಮಾಡಿದ್ದರು.

‘ಆರೋಪಿಗಳ ಬಂಧನಕ್ಕೆ ಭಾನುವಾರ ರಾತ್ರಿಯಿಂದಲೇ 18 ತಂಡಗಳು ಕಾರ್ಯಾಚರಣೆ ಆರಂಭಿಸಿವೆ. ಮಂಗಳವಾರ ರಾತ್ರಿಯವರೆಗೆ 126 ಮಂದಿಯನ್ನು ಬಂಧಿಸಲಾಗಿದೆ. ಕಾರ್ಯಾಚರಣೆ ಮುಂದುವರಿದಿದೆ’ ಎಂದು ಹೆಚ್ಚುವರಿ ಪೊಲೀಸ್ ಕಮಿಷನರ್ ಸೌಮೇಂದು ಮುಖರ್ಜಿ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ಪ್ರಮುಖ ಆರೋಪಿಗಳು ಸೆರೆ: ‘ಗಲಾಟೆಯ ಪ್ರಮುಖ ಆರೋಪಿ ವಜೀರ್‌ನನ್ನು ಬಂಧಿಸಲಾಗಿದೆ. ಈತ ಭಾನುವಾರ ಮಧ್ಯಾಹ್ನವೇ ಇತರೆ ಆರೋಪಿಗಳನ್ನು ಮನೆಗೆ ಕರೆಸಿಕೊಂಡು ಗಲಾಟೆ ನಡೆಸಲು ಸಂಚು ರೂಪಿಸಿದ್ದ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

‘ಗುಜರಿ ವ್ಯಾಪಾರಿ ಕಬೀರ್, ಗಲಾಟೆ ವೇಳೆ ಚಾಕು ಹಿಡಿದು ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದ. ಆತನ ಜೊತೆ ಇರ್ಷಾದ್ ಮಹಮ್ಮದ್ ಹಾಗೂ ತಳ್ಳುಗಾಡಿಯಲ್ಲಿ ತರಕಾರಿ ಮಾರುತ್ತಿದ್ದ ಮಹಿಳೆ ಫರ್ಜೂವಾ, ಗಲಾಟೆಗೆ ಪ್ರಚೋದನೆ ನೀಡಿದ್ದರು. ಇವರೆಲ್ಲ ಸಿಕ್ಕಿಬಿದ್ದಿದ್ದಾರೆ. ಕೆಎಫ್‌ಡಿ ಇರ್ಫಾನ್ ತಲೆಮರೆಸಿಕೊಂಡಿದ್ದಾನೆ’ ಎಂದರು.

ಮೊಟ್ಟೆ, ಮೀನಿಗಾಗಿ ಪ್ರತಿಭಟನೆ: ‘ಸೀಲ್‌ಡೌನ್‌ ಆದಾಗಿನಿಂದಲೇ ಪ್ರಮುಖ ಆರೋಪಿಗಳು, ಪಾದರಾಯನಪುರದಲ್ಲಿ ಶಾಂತಿ ಕದಡಲು ಹಾಗೂ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರಲು ಪ್ರಯತ್ನಿಸುತ್ತಿದ್ದರು. ನಾಲ್ಕು ದಿನಗಳ ಹಿಂದಷ್ಟೇ ಮೊಟ್ಟೆ, ಮಾಂಸ ಹಾಗೂ ಮೀನು ಬೇಕೆಂದು ಪ್ರತಿಭಟನೆ ಸಹ ಮಾಡಿದ್ದರು. ಸ್ಥಳಕ್ಕೆ ಬಂದಿದ್ದ ಪಾಲಿಕೆ ಸದಸ್ಯರು ಅವರೆಲ್ಲರಿತೆ ಬುದ್ದಿ ಹೇಳಿ ಪರಿಸ್ಥಿತಿ ತಿಳಿಗೊಳಿಸಿದ್ದರು’ ಎಂದು ಅಧಿಕಾರಿ ಹೇಳಿದರು.

19 ತಬ್ಲೀಗ್‌ ವಿರುದ್ಧ ಎಫ್‌ಐಆರ್‌

ಪ್ರವಾಸ ವೀಸಾದಡಿ ನಗರಕ್ಕೆ ಬಂದು ಪಾದರಾಯನಪುರದ ಸುಬಾನಿಯಾ ಮಸೀದಿಯಲ್ಲಿ ನೆಲೆಸಿದ್ದ 19 ವಿದೇಶಿ ತಬ್ಲೀಗ್‌ಗಳ ವಿರುದ್ಧ ಏ. 5ರಂದೇ ಜಗಜೀವನರಾಮ್ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿತ್ತು. ಪಾದರಾಯನಪುರ ಗಲಾಟೆ ಬಳಿಕ ಈ ಪ್ರಕರಣ ಹೆಚ್ಚು ಪ್ರಚಾರ ಪಡೆದುಕೊಂಡಿದೆ.

‘ಇಂಡೋನೇಷ್ಯಾ ಹಾಗೂ ಕಿರ್ಗಿಸ್ಥಾನದ ತಬ್ಲೀಗ್‌ಗಳು, ಜ. 5ರಂದು ಭಾರತಕ್ಕೆ ಬಂದಿದ್ದರು. ಇಲ್ಲಿ ಹಲವು ಧಾರ್ಮಿಕ ಪ್ರಚಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಕೊನೆಯಲ್ಲಿ, ಸುಬಾನಿಯಾ ಮಸೀದಿಗೆ ಬಂದು ಉಳಿದುಕೊಂಡಿದ್ದರು. ಸ್ಥಳೀಯ ಉಮರ್ ಇ ಫಾರೂಕಿಯಾ ಟ್ರಸ್ಟ್ ವತಿಯಿಂದ ಧಾರ್ಮಿಕ ಪ್ರಚಾರ ಕಾರ್ಯಕ್ರಮ ನಡೆಸುತ್ತಿದ್ದರು. ಅವರಿಗೆ ಕೊರೊನಾ ಸೋಂಕು ತಗುಲಿರುವ ಅನುಮಾನದ ಮೇರೆಗೆ ಮಾ. 30ರಂದು 19 ಮಂದಿಯನ್ನು ವಶಕ್ಕೆ ಪಡೆದು ಇಂದಿರಾನಗರದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಕೊಡಿಸಿ ಸಾರಾಯಿಪಾಳ್ಯದ ಹಜ್‌ ಭವನದಲ್ಲಿ ಬಿಡಲಾಗಿತ್ತು. ನಂತರವೇ ವಿದೇಶಿ ಕಾಯ್ದೆ ಉಲ್ಲಂಘಿಸಿದ ಆರೋಪದಡಿ ಅವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು’ ಎಂದು ಪೊಲೀಸ್ ಅಧಿಕಾರಿ ಹೇಳಿದರು.

ಪಾದರಾಯನಪುರ ಸಂಪೂರ್ಣ ನಿಯಂತ್ರಣದಲ್ಲಿದೆ. ವಿಪತ್ತು ನಿರ್ವಹಣಾ ಕಾಯ್ದೆ ಹಾಗೂ ಐಪಿಸಿ ಸೆಕ್ಷನ್‌ ಅಡಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ಕ್ರಮ ಕೈಗೊಳ್ಳಲಾಗಿದೆ ಎಂದುಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.