ADVERTISEMENT

ಚಿತ್ರಕಲೆ ಹಾಗೂ ಸಾಮಾನ್ಯ ಶಿಕ್ಷಣಕ್ಕೆ ನಿಕಟ ಸಂಬಂಧವಿದೆ: ಎಸ್‌.ಎಂ. ಕೃಷ್ಣ

ನಂಜುಂಡರಾವ್‌ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಎಸ್‌.ಎಂ.ಕೃಷ್ಣ ಬಣ್ಣನೆ

​ಪ್ರಜಾವಾಣಿ ವಾರ್ತೆ
Published 7 ಜನವರಿ 2023, 21:29 IST
Last Updated 7 ಜನವರಿ 2023, 21:29 IST
ಬೆಂಗಳೂರಿನ ಚಿತ್ರಕಲಾ ಪರಿಷತ್ತಿನಲ್ಲಿ ಭಾನುವಾರ ನಡೆಯುವ 20ನೇ ಚಿತ್ರಸಂತೆಗೆ ಕಾಲೇಜಿನ ವಿದ್ಯಾರ್ಥಿಗಳು ಕಾಲೇಜಿನ ಆವರಣವನ್ನು ರಂಗುರಂಗಾಗಿ ಅಲಂಕರಿಸುತ್ತಿರುವ ದೃಶ್ಯ ಶನಿವಾರ ಕಂಡುಬಂತು -ಪ್ರಜಾವಾಣಿ ಚಿತ್ರ/ ರಂಜು ಪಿ.
ಬೆಂಗಳೂರಿನ ಚಿತ್ರಕಲಾ ಪರಿಷತ್ತಿನಲ್ಲಿ ಭಾನುವಾರ ನಡೆಯುವ 20ನೇ ಚಿತ್ರಸಂತೆಗೆ ಕಾಲೇಜಿನ ವಿದ್ಯಾರ್ಥಿಗಳು ಕಾಲೇಜಿನ ಆವರಣವನ್ನು ರಂಗುರಂಗಾಗಿ ಅಲಂಕರಿಸುತ್ತಿರುವ ದೃಶ್ಯ ಶನಿವಾರ ಕಂಡುಬಂತು -ಪ್ರಜಾವಾಣಿ ಚಿತ್ರ/ ರಂಜು ಪಿ.   

ಬೆಂಗಳೂರು: ‘ಚಿತ್ರಕಲೆ ಹಾಗೂ ಸಾಮಾನ್ಯ ಶಿಕ್ಷಣಕ್ಕೆ ನಿಕಟ ಸಂಬಂಧವಿದೆ. ಈ ಸಂಬಂಧ ಮತ್ತಷ್ಟು ವೃದ್ಧಿ ಆಗಬೇಕಿದೆ’ ಎಂದು ಕರ್ನಾಟಕ ಚಿತ್ರಕಲಾ ಪರಿಷತ್‌ ಟ್ರಸ್ಟ್‌ನ ಅಧ್ಯಕ್ಷ ಎಸ್‌.ಎಂ. ಕೃಷ್ಣ ಹೇಳಿದರು.

ನಗರದ ಚಿತ್ರಕಲಾ ಪರಿಷತ್‌ನಲ್ಲಿ ಶನಿವಾರ ಸಾಧಕರಿಗೆ ಪ್ರೊ.ಎಂ.ಎಸ್‌.ನಂಜುಂಡರಾವ್‌ ರಾಷ್ಟ್ರೀಯ ಪ್ರಶಸ್ತಿ ಹಾಗೂ ಚಿತ್ರಕಲಾ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.

ಚಿತ್ರಕಲಾ ಮಹಾವಿದ್ಯಾಲಯಗಳ ಜತೆಗೆ ವಿಶ್ವವಿದ್ಯಾಲಯಗಳೂ ಕೈಜೋಡಿಸಬೇಕು. ಆಗ ಮಾತ್ರ ಕಲೆ ಹಾಗೂ ಕಲಾವಿದರ ಬೆಳವಣಿಗೆಗೆ ನೆರವಾಗಲಿದೆ ಎಂದು ಸಲಹೆ ನೀಡಿದರು.

ADVERTISEMENT

‘20 ವರ್ಷಗಳಿಂದ ನಡೆಯುತ್ತಿರುವ ಚಿತ್ರಸಂತೆಯು ಯಶೋಗಾಥೆಯನ್ನೇ ಬರೆದಿದೆ. ಚಿತ್ರಸಂತೆಗೆ ಉತ್ತಮ ಪ್ರತಿಕ್ರಿಯೆ ಲಭಿಸುತ್ತಿದೆ. ಜತೆಗೆ ಸ್ಥಳೀಯ ಕಲಾವಿದರಿಗೆ ವೇದಿಕೆ ಕಲ್ಪಿಸುತ್ತಿದೆ. ಕಲಾಕೃತಿಗಳನ್ನು ಖರೀದಿಸುವ ಮೂಲಕ ಕಲಾವಿದರಿಗೆ ಉತ್ತೇಜನ ನೀಡಬೇಕು’ ಎಂದು ಕರೆ ನೀಡಿದರು.

‘ಪರಿಷತ್‌ನ ಕಟ್ಟಡವು ನಗರದ ಹೃದಯ ಭಾಗದಲ್ಲಿ ಸ್ಥಾಪನೆ ಆಗಲು ಸಾಕಷ್ಟು ಮಹನೀಯರು ಶ್ರಮಿಸಿದ್ದಾರೆ. ದೇವರಾಜ ಅರಸು ಮುಖ್ಯಮಂತ್ರಿ ಹಾಗೂ ನಾನು ಸಚಿವನಾಗಿದ್ದ ಅವಧಿಯಲ್ಲಿ ಈ ಜಾಗವನ್ನು ಸರ್ಕಾರಿ ವಾಹನಗಳ ಚಾಲಕರ ವಸತಿಗೆ ನೀಡುವ ಪ್ರಸ್ತಾವ ಸಂಪುಟದ ಎದುರು ಬಂದಿತ್ತು. ಅಂದು ಪ್ರಸ್ತಾವ ತಡೆ ಹಿಡಿದು ಚಾಲಕರಿಗೆ ಪರ್ಯಾಯ ಜಾಗ ಕಲ್ಪಿಸಿ ಚಿತ್ರಕಲಾ ಪರಿಷತ್‌ಗೆ ಈ ಜಾಗ ನೀಡಲಾಯಿತು. 9 ಎಕರೆ ಪ್ರದೇಶದಲ್ಲಿ ಪರಿಷತ್‌ ಕಲಾ ಚಟುವಟಿಕೆಯ ತಾಣವಾಗಿದೆ’ ಎಂದು ಹೇಳಿದರು.

‘ಪರಿಷತ್‌ನಲ್ಲೂ ಅಸಮಾಧಾನವಿತ್ತು. ಈಗಿನ ಆಡಳಿತ ಮಂಡಳಿಯ ಪರಿಶ್ರಮ ಹಾಗೂ ಕರ್ತವ್ಯ ನಿಷ್ಠೆಯಿಂದ ಪರಿಷತ್‌ ಉತ್ತಮ ಕೆಲಸ ಮಾಡುತ್ತಿದೆ’ ಎಂದು ಶ್ಲಾಘಿಸಿದರು.

ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಸ್‌.ಎಂ.ಜಯಶಂಕರ್‌ ಮಾತನಾಡಿ, ‘ಹೊಸ ಶಿಕ್ಷಣ ನೀತಿಯಂತೆ ವಿಜ್ಞಾನದ ವಿದ್ಯಾರ್ಥಿಗಳೂ ಸಂಗೀತ ಹಾಗೂ ಚಿತ್ರಕಲೆ ಕಲಿಯಲು ಅವಕಾಶವಿದೆ. ಉತ್ತಮ ಚಿತ್ರಕಲೆ ಬಿಡಿಸುವವರು ಹೆಚ್ಚಿನ ವರ್ಷ ಜೀವಿಸುತ್ತಾರೆ. ಚಿತ್ರಕಲೆ, ಶಿಲ್ಪಕಲೆ ಮಾನವೀಯತೆ ಬೆಳೆಸುತ್ತದೆ. ಕಲೆಯಿಂದ ಸೃಜನಶೀಲತೆ ಬೆಳೆದು ಸ್ಫೂರ್ತಿ ತುಂಬಲಿದೆ. ಕಲಾ ಶಿಕ್ಷಣಕ್ಕೆ ಪರಿಷತ್‌ ಕೊಡುಗೆ ಅಪಾರ’ ಎಂದರು.

ಚಿತ್ರಕಲಾ ಪರಿಷತ್‌ನ ಅಧ್ಯಕ್ಷ ಬಿ.ಎಲ್‌.ಶಂಕರ್‌ ಮಾತನಾಡಿ, ‘ಪರಿಷತ್‌ ಕಟ್ಟಿ ಬೆಳೆಸಿದ ಮಹನೀಯರ ಹೆಸರಿನಲ್ಲಿ ಪ್ರಶಸ್ತಿ ನೀಡಲಾಗುತ್ತಿದೆ. ಕೋವಿಡ್‌ ಸಾಂಕ್ರಾಮಿಕದ ಸಂಕಷ್ಟದ ವೇಳೆಯೂ ಪರಿಷತ್‌ನ ಸಿಬ್ಬಂದಿಯ ವೇತನ ಕಡಿತ ಮಾಡಲಿಲ್ಲ’ ಎಂದರು.

‘ಚಿತ್ರಸಂತೆಯಲ್ಲಿ ಪಾಲ್ಗೊಳ್ಳಲು 2,500ರಷ್ಟು ಕಲಾವಿದರು ಉತ್ಸಾಹ ತೋರಿದ್ದರೂ ಸ್ಥಳದ ಕೊರತೆಯಿಂದ ಭಾನುವಾರ ನಡೆಯಲಿರುವ ಚಿತ್ರಸಂತೆಯಲ್ಲಿ 1,200 ಕಲಾವಿದರಿಗೆ ಅವಕಾಶ ಕಲ್ಪಿಸಲಾಗುತ್ತಿದೆ’ ಎಂದರು.

‘ಪರಿಷತ್‌ ಕಟ್ಟಡ ನಿರ್ಮಿಸಲು ದೇವರಾಜ ಅರಸು ಅವರು ಸ್ಥಳ ನೀಡಿ ಅನುದಾನ ನೀಡಿದ್ದರು. ದೇವೇಗೌಡ, ಸಿದ್ದರಾಮಯ್ಯ, ಯಡಿಯೂರಪ್ಪ ಅವರೂ ಪರಿಷತ್‌ ಕಾರ್ಯ ಚಟುವಟಿಕೆಗೆ ಅನುದಾನ ನೀಡಿದ್ದಾರೆ’ ಎಂದು ಹೇಳಿದರು.

ಪರಿಷತ್‌ನ ಪ್ರಧಾನ ಕಾರ್ಯದರ್ಶಿ ಎಸ್‌.ಎನ್‌.ಶಶಿಧರ್‌ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.