ADVERTISEMENT

ಈ ವರ್ಷದಿಂದ ಚಿತ್ರಕಲೆ ಸಮ್ಮೇಳನ: ಲಲಿತಕಲಾ ಅಕಾಡೆಮಿ ಅಧ್ಯಕ್ಷ ಪ.ಸ. ಕುಮಾರ್‌

​ಪ್ರಜಾವಾಣಿ ವಾರ್ತೆ
Published 18 ಜನವರಿ 2025, 15:48 IST
Last Updated 18 ಜನವರಿ 2025, 15:48 IST
‘ಮನೆಗೊಂದು ಕಲಾಕೃತಿ ಪ್ರದರ್ಶನ ಮತ್ತು ಮಾರಾಟ’ ಕಾರ್ಯಕ್ರಮದಲ್ಲಿ ಚಿತ್ರಕಲಾ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಶಶಿಧರ್ ಎಸ್.ಎನ್‌., ಅಕಾಡೆಮಿ ಮಾಜಿ ಅಧ್ಯಕ್ಷೆ ಕಮಲಾಕ್ಷಿ ಮತ್ತು ಅಕಾಡೆಮಿ ಅಧ್ಯಕ್ಷ ಪ.ಸ. ಕುಮಾರ್ ಕಲಾಕೃತಿಗಳನ್ನು ವೀಕ್ಷಿಸಿದರು  -ಪ್ರಜಾವಾಣಿ ಚಿತ್ರ
‘ಮನೆಗೊಂದು ಕಲಾಕೃತಿ ಪ್ರದರ್ಶನ ಮತ್ತು ಮಾರಾಟ’ ಕಾರ್ಯಕ್ರಮದಲ್ಲಿ ಚಿತ್ರಕಲಾ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಶಶಿಧರ್ ಎಸ್.ಎನ್‌., ಅಕಾಡೆಮಿ ಮಾಜಿ ಅಧ್ಯಕ್ಷೆ ಕಮಲಾಕ್ಷಿ ಮತ್ತು ಅಕಾಡೆಮಿ ಅಧ್ಯಕ್ಷ ಪ.ಸ. ಕುಮಾರ್ ಕಲಾಕೃತಿಗಳನ್ನು ವೀಕ್ಷಿಸಿದರು  -ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಸಾಹಿತ್ಯ ಸಮ್ಮೇಳನದ ಮಾದರಿಯಲ್ಲಿ ಚಿತ್ರಕಲೆ ಮತ್ತು ವಾಸ್ತುಶಿಲ್ಪ ಸಮ್ಮೇಳನವನ್ನು ಈ ವರ್ಷ ಆರಂಭಿಸಲಾಗುವುದು’ ಎಂದು ಕರ್ನಾಟಕ ಲಲಿತಕಲಾ ಅಡಾಡೆಮಿ ಅಧ್ಯಕ್ಷ ಪ.ಸ. ಕುಮಾರ್‌ ಶನಿವಾರ ಹೇಳಿದರು.

ಅಕಾಡೆಮಿಯ ಕಲಾಶಿಬಿರ ಮತ್ತು ಕಾರ್ಯಾಗಾರಗಳಲ್ಲಿ ವಿವಿಧ ಕಲಾವಿದರು ರಚಿಸಿದ ಕಲಾಕೃತಿಗಳ ಪ್ರದರ್ಶನ ಮತ್ತು ಮಾರಾಟ ಉದ್ದೇಶದ ‘ಮನೆಗೊಂದು ಕಲಾಕೃತಿ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಇತ್ತೀಚೆಗೆ ಮಂಡ್ಯದಲ್ಲಿ ನಡೆದ ಸಾಹಿತ್ಯ ಸಮ್ಮೇಳನಕ್ಕೆ ₹ 30 ಕೋಟಿ ವೆಚ್ಚ ಮಾಡಲಾಗಿದೆ. ನಮಗೆ ಅಷ್ಟೆಲ್ಲ ಹಣ ಬೇಡ. ಸಮ್ಮೇಳನ ನಡೆಸಲು ₹2 ಕೋಟಿ ಅನುದಾನವನ್ನು ಸರ್ಕಾರ ಒದಗಿಸಬೇಕು’ ಎಂದು ಆಗ್ರಹಿಸಿದರು.

ADVERTISEMENT

‘ಒಂದು ಕಾಲದಲ್ಲಿ ಕಲಾಶಿಬಿರಗಳಲ್ಲಿ ಕೆಲಸ ಮಾಡುವುದು ಗೌರವದ ದ್ಯೋತಕವಾಗಿತ್ತು. ಕಲಾವಿದರು ಪೂರ್ಣ ತಯಾರಿ ಮಾಡಿಕೊಂಡು ಶಿಬಿರಗಳಲ್ಲಿ ಭಾಗವಹಿಸುತ್ತಿದ್ದರು. ಈಗ ಹೇಗೋ ಮಾಡಿದರಾಯಿತು ಎಂಬ ಮನೋಭಾವದಿಂದ, ಕೆಲಸ ಮಾಡುವುದೇ ಹೆಚ್ಚಾಗಿದೆ. ಅದಕ್ಕಾಗಿ ಲಲಿತಕಲಾ ಅಕಾಡೆಮಿಯಿಂದ ನನ್ನ ಅವಧಿಯಲ್ಲಿ ಶಿಬಿರ ಮಾಡುವುದಿಲ್ಲ. ಅದರ ಬದಲು ಕಲಾ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿ ಬೆಳೆಸುವ ಕಾರ್ಯ ಮಾಡಲಾಗುವುದು’ ಎಂದರು.

ಕರ್ನಾಟಕ ಚಿತ್ರಕಲಾ ಪರಿಷತ್‌ ಅಧ್ಯಕ್ಷ ಬಿ.ಎಲ್‌. ಶಂಕರ್ ಮಾತನಾಡಿ, ‘ಯಾವುದೇ ದೇಶವನ್ನು ಅಲ್ಲಿನ ಕಟ್ಟಡಗಳು, ಭೌತಿಕ ವಸ್ತುಗಳಿಂದ ಅಳೆಯಬಾರದು. ಕಲೆ, ಸಂಸ್ಕೃತಿಯನ್ನು ನೋಡಿ ಅಳೆಯಬೇಕು. ವಿದೇಶಗಳಲ್ಲಿ ಪ್ರವಾಸಿಗರನ್ನು ಕಲಾ ಮ್ಯೂಸಿಯಂಗಳಿಗೆ ಕರೆದುಕೊಂಡು ಹೋಗುವ ಪದ್ಧತಿ ಇದೆ. ನಮ್ಮಲ್ಲಿಯೂ ಅಂಥ ಸಂಸ್ಕೃತಿ ಬೆಳೆಯಬೇಕು’ ಎಂದು ಪ್ರತಿಪಾದಿಸಿದರು.

ಚಿತ್ರಕಲಾ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಶಶಿಧರ್‌ ಎಸ್‌.ಎನ್‌., ಕಲಾವಿದೆ ಕಮಲಾಕ್ಷಿ, ಲಲಿತಕಲಾ ಅಕಾಡೆಮಿ ರಿಜಿಸ್ಟ್ರಾರ್‌ ನೀಲಮ್ಮ ಬಿ. ಭಾಗವಹಿಸಿದ್ದರು.

700 ಕಲಾಕೃತಿ ಪ್ರದರ್ಶನ

‘ಮನೆಗೊಂದು ಕಲಾಕೃತಿ’ ಯೋಜನೆಯಡಿ ಚಿತ್ರಕಲಾ ಪರಿಷತ್ತಿನ ಏಳು ಗ್ಯಾಲರಿಗಳಲ್ಲಿ 700 ಕಲಾಕೃತಿಗಳನ್ನು ಪ್ರದರ್ಶಿಸಲಾಗಿದೆ. ಕಲಾಕೃತಿಗಳಿಗೆ ಕನಿಷ್ಠ ₹ 2000ದಿಂದ ಗರಿಷ್ಠ ₹ 30000 ವರೆಗೆ ಬೆಲೆ ನಿಗದಿಪಡಿಸಲಾಗಿದ್ದು ಉದ್ಘಾಟನೆಯ ದಿನವೇ ಹಲವು ಕಲಾಕೃತಿಗಳು ಮಾರಾಟವಾದವು. ಸಮಕಾಲೀನ (ಕಂಟೆಂಪರರಿ) ಕಲಾಕೃತಿಗಳು ಹೆಚ್ಚು ಗಮನ ಸೆಳೆದವು. ಸುರಪುರ ಶೈಲಿ ಲ್ಯಾಂಡ್‌ಸ್ಕೇಪ್‌ ಪೋರ್ಟಲ್‌ ಫಿಗರಿಟಿಕಲ್‌ ರಿಯಲಿಸ್ಟಿಕ್‌ ಗ್ರಾಫಿಕ್‌ ಡ್ರಾಯಿಂಗ್‌ ಪೇಂಟ್‌ಗಳು ಗ್ಯಾಲರಿಯ ಗೋಡೆಗಳನ್ನು ಅಲಂಕರಿಸಿದ್ದವು. ಜ.21ರ ಸಂಜೆವರೆಗೆ ‘ಮನೆಗೊಂದು ಕಲಾಕೃತಿ’ ಪ್ರದರ್ಶನ ಇರಲಿದೆ ಎಂದು ಲಲಿತಕಲಾ ಅಕಾಡೆಮಿ ರಿಜಿಸ್ಟ್ರಾರ್‌ ನೀಲಮ್ಮ ಬಿ. ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.