ADVERTISEMENT

ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಪಾಕಿಸ್ತಾನದ ಯುವತಿ ಬಂಧನ

ಡೇಟಿಂಗ್‌ ಆ್ಯಪ್‌ ಮೂಲಕ ಪರಿಚಯವಾಗಿ ಮದುವೆ | ಹೆಸರು ಬದಲಾಯಿಸಿ ಪಾಸ್‌ಪೋರ್ಟ್‌ಗೆ ಅರ್ಜಿ

​ಪ್ರಜಾವಾಣಿ ವಾರ್ತೆ
Published 23 ಜನವರಿ 2023, 1:27 IST
Last Updated 23 ಜನವರಿ 2023, 1:27 IST
   

ಬೆಂಗಳೂರು: ನೇಪಾಳದ ಗಡಿ ಮೂಲಕ ದೇಶದೊಳಗೆ ಅಕ್ರಮವಾಗಿ ನುಸುಳಿ ಬೆಂಗಳೂರಿನಲ್ಲಿ ವಾಸವಿದ್ದ ಪಾಕಿಸ್ತಾನದ ಯುವತಿ ಇಕ್ರಾ ಜೀವನಿ (19) ಎಂಬುವರನ್ನು ಬೆಳ್ಳಂದೂರು ಪೊಲೀಸರು ಬಂಧಿಸಿದ್ದಾರೆ.

‘ಪಾಕಿಸ್ತಾನದ ನಿವಾಸಿ ಇಕ್ರಾ, ಡೇಟಿಂಗ್ ಆ್ಯಪ್‌ ಮೂಲಕ ಉತ್ತರ ಪ್ರದೇಶದ ಮುಲಾಯಂ ಸಿಂಗ್ (25) ಅವರನ್ನು ಪರಿಚಯ ಮಾಡಿ ಕೊಂಡಿದ್ದರು. ಅವರಿಬ್ಬರ ನಡುವೆ ಪ್ರೀತಿ ಹುಟ್ಟಿಕೊಂಡಿತ್ತು. 2022ರಲ್ಲಿ ನೇಪಾಳದ ಗಡಿ ಮೂಲಕ ದೇಶದೊಳಗೆ ನುಸುಳಿದ್ದ ಇಕ್ರಾ, ಮುಲಾಯಂಸಿಂಗ್ ಅವರನ್ನು ಮದುವೆಯಾಗಿದ್ದರು’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಮುಲಾಯಂ ಸಿಂಗ್, ಕೆಲಸ ಹುಡುಕಿಕೊಂಡು 2022ರ ನವೆಂಬರ್‌ ನಲ್ಲಿ ಬೆಂಗಳೂರಿಗೆ ಬಂದಿದ್ದರು. ತಮ್ಮ ಜೊತೆ ಇಕ್ರಾ ಅವರನ್ನು ಕರೆತಂದಿದ್ದರು. ಇವರಿಬ್ಬರು ಜುನ್ನಸಂದ್ರ ಅಯ್ಯಪ್ಪಸ್ವಾಮಿ ದೇವಸ್ಥಾನ ಬಳಿಯ ಮನೆಯೊಂದರಲ್ಲಿ ಬಾಡಿಗೆಗೆ ವಾಸವಿದ್ದರು’ ಎಂದು ತಿಳಿಸಿವೆ.

ADVERTISEMENT

‘ಇಕ್ರಾ ಅವರು ಇತ್ತೀಚೆಗೆ ಪಾಕಿಸ್ತಾನದಲ್ಲಿರುವ ತಮ್ಮ ಪೋಷಕರನ್ನು ಸಂಪರ್ಕಿಸಲು ಯತ್ನಿಸಿದ್ದರು. ಈ ಸಂಗತಿಯನ್ನು ಪತ್ತೆ ಮಾಡಿದ್ದ ಕೇಂದ್ರ ಗುಪ್ತದಳದ ಸಿಬ್ಬಂದಿ, ಬೆಂಗಳೂರು ಪೊಲೀಸರಿಗೆ ಮಾಹಿತಿ ನೀಡಿದ್ದರು.’

‘ವಿಶೇಷ ತಂಡ ರಚಿಸಿ ಮನೆ ಮೇಲೆ ಶುಕ್ರವಾರ (ಜ. 20) ದಾಳಿ ಮಾಡಲಾಗಿತ್ತು. ಇಕ್ರಾ ಹಾಗೂ ಮುಲಾಯಂ ಸಿಂಗ್ ಅವರನ್ನು ವಿಚಾರಣೆ ನಡೆಸಲಾಯಿತು. ಅವಾಗಲೇ ಇಕ್ರಾ, ಪಾಕಿಸ್ತಾನ ನಿವಾಸಿ ಎಂಬುದು ತಿಳಿಯಿತು. ಬಳಿಕವೇ ಅವರನ್ನು ಬಂಧಿಸಲಾಯಿತು’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಬಂಧನದ ಬಗ್ಗೆ ವಿದೇಶಿಗರ ಪ್ರಾದೇಶಿಕ ನೋಂದಣಿ ಕಚೇರಿಗೆ (ಎಫ್‌ಆರ್‌ಆರ್‌ಒ) ಮಾಹಿತಿ ನೀಡಲಾಗಿದೆ. ಸದ್ಯ ಇಕ್ರಾ ಅವರನ್ನು ಮಹಿಳಾ ಪುನರ್ವಸತಿ ಕೇಂದ್ರದಲ್ಲಿರಿಸಲಾಗಿದೆ. ಮುಲಾಯಂ ಸಿಂಗ್ ಅವರನ್ನೂ ವಶಕ್ಕೆ ಪಡೆಯಲಾಗಿದೆ’ ಎಂದು ತಿಳಿಸಿವೆ.

ಹೆಸರು ಬದಲಾಯಿಸಿ ಪಾಸ್‌ಪೋರ್ಟ್‌ಗೆ ಅರ್ಜಿ: ‘ರಾವಾ ಯಾದವ್ ಎಂಬುದಾಗಿ ಹೆಸರು ಬದಲಾಯಿಸಿಕೊಂಡಿದ್ದ ಇಕ್ರಾ, ಮುಲಾಯಂ ಸಿಂಗ್ ಪತ್ನಿಯೆಂದು ಆಧಾರ್ ಮಾಡಿಸಿಕೊಂಡಿದ್ದರು. ಅದನ್ನು ಬಳಸಿಕೊಂಡು ಪಾಸ್‌ಪೋರ್ಟ್‌ಗೂ ಅರ್ಜಿ ಸಲ್ಲಿಸಿದ್ದರು’ ಎಂದು ಪೊಲೀಸ್ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.