ಬೆಂಗಳೂರು: ‘ಕನ್ನಡ ಸಾಹಿತ್ಯ ಪರಿಷತ್ತಿನ (ಕಸಾಪ) ಆವರಣದಲ್ಲಿ ಸ್ಥಾಪಿಸಲಾಗುತ್ತಿರುವ ‘ಆದಿಕವಿ ಪಂಪನ ಪುತ್ಥಳಿ’ಯನ್ನು ಜುಲೈನಲ್ಲಿ ಅನಾವರಣಗೊಳಿಸಲಾಗುವುದು’ ಎಂದು ಕಸಾಪ ಅಧ್ಯಕ್ಷ ಮಹೇಶ ಜೋಶಿ ತಿಳಿಸಿದ್ದಾರೆ.
‘ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರು ಈ ಪ್ರತಿಮೆ ಅನಾವರಣಗೊಳಿಸಲು ಒಪ್ಪಿಗೆ ನೀಡಿದ್ದಾರೆ. ಶೀಘ್ರದಲ್ಲಿಯೇ ದಿನಾಂಕವನ್ನು ಗೊತ್ತುಪಡಿಸಲಾಗುವುದು. ಪುತ್ಥಳಿ ಅನಾವರಣ ದಿನದಂದು ಪಂಪನ ಕಾವ್ಯ ವಾಚನ, ವಿಶೇಷ ಉಪನ್ಯಾಸ, ವಿಚಾರಗೋಷ್ಠಿ ಸೇರಿ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು’ ಎಂದು ಹೇಳಿದ್ದಾರೆ.
‘ಕನ್ನಡದ ಅನೇಕ ಕವಿಗಳು ಪಂಪನ ಪ್ರಭಾವಕ್ಕೆ ಒಳಗಾಗಿದ್ದಾರೆ. ಪಂಪನ ಪುತ್ಥಳಿಗೆ ಹೊಂದಿಕೊಂಡು ‘ಮನುಷ್ಯ ಜಾತಿ ತಾನೊಂದೆ ವಲಂ’ ಎನ್ನುವ ಸಾರ್ವಕಾಲಿಕ ಮಹತ್ವದ ಪಂಪವಾಣಿಯನ್ನೂ ಅಳವಡಿಸಿಲಾಗುವುದು. ಈ ಮೂಲಕ ಕನ್ನಡ ಸಾರಸ್ವತ ಪರಂಪರೆಯ ಹಿರಿಮೆಯನ್ನು ಗೌರವಿಸಲಾಗುತ್ತಿದೆ’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.