ADVERTISEMENT

ಪಂಚಮಸಾಲಿ ಹೋರಾಟ: ಶಕ್ತಿ ಪ್ರದರ್ಶನಕ್ಕೆ ಉದ್ಯಾನ ನಗರಿ ಸಜ್ಜು

300 ಗಣ್ಯರಿಗೆ ಆಸನ ವ್ಯವಸ್ಥೆ; ಉತ್ತರ ಕರ್ನಾಟಕದಿಂದ ಹೆಚ್ಚು ಜನ ಪಾಲ್ಗೊಳ್ಳುವ ನಿರೀಕ್ಷೆ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2021, 19:58 IST
Last Updated 20 ಫೆಬ್ರುವರಿ 2021, 19:58 IST
ನಗರದಲ್ಲಿ ಭಾನುವಾರ ನಡೆಯಲಿರುವ ಮಹಾರ‍್ಯಾಲಿಗೆ ಸಿದ್ಧಗೊಂಡಿರುವ ಅರಮನೆ ಮೈದಾನ ಪ್ರಜಾವಾಣಿ ಚಿತ್ರ
ನಗರದಲ್ಲಿ ಭಾನುವಾರ ನಡೆಯಲಿರುವ ಮಹಾರ‍್ಯಾಲಿಗೆ ಸಿದ್ಧಗೊಂಡಿರುವ ಅರಮನೆ ಮೈದಾನ ಪ್ರಜಾವಾಣಿ ಚಿತ್ರ   

ಬೆಂಗಳೂರು: ನಗರದ ಅರಮನೆ ಮೈದಾನದಲ್ಲಿ ಪಂಚಮಸಾಲಿ ಮಹಾರ‍್ಯಾಲಿಯ ಸಿದ್ಧತೆ ಪೂರ್ಣಗೊಂಡಿದ್ದು, ಭಾನುವಾರ ಲಕ್ಷಾಂತರ ಜನ ಭಾಗವಹಿಸುವ ನಿರೀಕ್ಷೆ ಇದೆ. ‘ಪಂಚಮಸಾಲಿ ಸಮುದಾಯದ ಮಕ್ಕಳಿಗೆ ಶಿಕ್ಷಣ, ಯುವಜನರ ಉದ್ಯೋಗಕ್ಕಾಗಿ ಮೀಸಲಾತಿ ಹೋರಾಟ ಒಂದೇ ಮಾರ್ಗ’ ಎಂಬ ಘೋಷವಾಕ್ಯದೊಂದಿಗೆ ರ‍್ಯಾಲಿ ನಡೆಯಲಿದೆ.

ಪಂಚಮಸಾಲಿ ಶಾಸಕರು, ಸಂಸದರು, ಮಠಾಧೀಶರೂ ಸೇರಿದಂತೆ 2ಎ ಮೀಸಲಾತಿ ಹೋರಾಟಕ್ಕೆ ಬೆಂಬಲ ನೀಡುತ್ತಿರುವ ಇತರೆ ಸಮುದಾಯಗಳ ಮುಖಂಡರು ಕೂಡ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ.

300 ಗಣ್ಯರಿಗೆ ವ್ಯವಸ್ಥೆ: ಮಠಾಧೀಶರೂ ಒಳಗೊಂಡಂತೆ ವೇದಿಕೆಯಲ್ಲಿ 300 ಗಣ್ಯರ ಆಸನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. 2ಎ ಮೀಸಲು ಹೋರಾಟ ಸಮಿತಿಯಿಂದ 10 ಸಾವಿರ ಚದರಡಿ ವಿಸ್ತೀರ್ಣದಲ್ಲಿ ಬೃಹತ್‌ ವೇದಿಕೆ ನಿರ್ಮಿಸಲಾಗಿದೆ. ಮಠಾಧೀಶರು, ವಿಶೇಷ ಆಹ್ವಾನಿತ ಗಣ್ಯರಿಗೆ ಮೈದಾನದ ಮೊದಲನೇ ದ್ವಾರದಿಂದ ಕರೆತರಲು ಸಮಿತಿ ನಿರ್ಧರಿಸಿದ್ದು, ಮೈದಾನದ ಹಿಂಬದಿಯ (ದೂರದರ್ಶನ) ದ್ವಾರವನ್ನು ಸಮಾವೇಶದಲ್ಲಿ ಭಾಗವಹಿಸುವ ಜನರಿಗಾಗಿ ಮೀಸಲಿಡಲಾಗಿದೆ.

ADVERTISEMENT

ಉತ್ತರ ಕರ್ನಾಟಕದಿಂದ ಹೆಚ್ಚು ಜನ:ಪಂಚಮಸಾಲಿ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿರುವ ಉತ್ತರ ಕರ್ನಾಟಕದ ಜಿಲ್ಲೆಗಳಿಂದ ಭಾರಿ ಸಂಖ್ಯೆಯಲ್ಲಿ ಜನ ಬರುವ ನಿರೀಕ್ಷೆ ಇದೆ. ಈ ಭಾಗದ ಜನರಿಗೆ ಅನುಕೂಲವಾಗುವಂತೆ ಬಸ್ ಹಾಗೂ ಇನ್ನಿತರೆ ವಾಹನಗಳ ವ್ಯವಸ್ಥೆ ಮಾಡಲಾಗಿದೆ. ಸ್ವಯಂಪ್ರೇರಿತರಾಗಿ ಸಮಾವೇಶದಲ್ಲಿ ಭಾಗವಹಿಸಲು ಆಗಮಿಸಲು ಇಚ್ಛಿಸುವವರನ್ನು ಕರೆತರುವ ಜವಾಬ್ದಾರಿಯನ್ನು ಉತ್ತರ ಕರ್ನಾಟಕ ಪ್ರದೇಶದ ಪಂಚಮಸಾಲಿ ಸಮುದಾಯದ ಶಾಸಕರು, ಸಂಸದರು, ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಪದಾಧಿಕಾರಿಗಳು ಮತ್ತು ಸಮಾಜದ ಪ್ರಭಾವಿ ಮುಖಂಡರಿಗೆ ವಹಿಸಲಾಗಿದೆ.

ಭೋಜನ ವ್ಯವಸ್ಥೆ:ಮೈದಾನದ ಹಿಂಭಾಗದ ದೂರದರ್ಶನ ದ್ವಾರದ ಬಳಿ ಸಾರ್ವಜನಿಕರ ಭೋಜನಕ್ಕೆ ವ್ಯವಸ್ಥೆ ಮಾಡಲಾಗಿದೆ. ರೊಟ್ಟಿ, ಪಲ್ಯ, ಪಲಾವ್, ಮಜ್ಜಿಗೆ ವಿತರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. 500ಕ್ಕೂ ಹೆಚ್ಚು ಸ್ವಯಂಪ್ರೇರಿತ ಕಾರ್ಯಕರ್ತರು ಉಟದ ವ್ಯವಸ್ಥೆ ನೋಡಿಕೊಳ್ಳಲಿದ್ದಾರೆ. ಅಡುಗೆ ಸಾಮಗ್ರಿಗಳ ಸಂಗ್ರಹಕ್ಕೆ ಪ್ರತ್ಯೇಕವಾಗಿ 3 ದಾಸ್ತಾನುಗಳನ್ನು ನಿರ್ಮಿಸಲಾಗಿದೆ.

ಸಿದ್ಧತೆ ಪರಿಶೀಲನೆ
ಬಹಿರಂಗ ಸಮಾವೇಶಕ್ಕೆ ನಡೆದಿರುವ ಸಿದ್ಧತೆಗಳನ್ನು ಜಯಮೃತ್ಯುಂಜಯ ಸ್ವಾಮೀಜಿಯವರು ಶನಿವಾರ ವೀಕ್ಷಿಸಿದರು. ಪಂಚಮಸಾಲಿ ಮುಖಂಡರೊಂದಿಗೆ ಸಭೆ ನಡೆಸಿ ಭಾನುವಾರ ನಡೆಯುವ ಸಮಾವೇಶದ ರೂಪರೇಷೆ ಕುರಿತು ಚರ್ಚಿಸಿದರು.

‘ಸಮಾವೇಶದ ನಂತರ ವಿಧಾನಸೌಧಕ್ಕೆ ಮುತ್ತಿಗೆ ಹಾಕುವ ತೀರ್ಮಾನವನ್ನು ಸಚಿವ ಸಿ.ಸಿ. ಪಾಟೀಲ ಮನವಿ ಮೇರೆಗೆ ಕೈಬಿಡಲಾಗಿದೆ. ವಿಧಾನಸೌಧ ಮುಂಭಾಗದಲ್ಲಿ ಧರಣಿ ನಡೆಯಲಿದೆ’ ಎಂದು ಸ್ವಾಮೀಜಿ ಮಾಹಿತಿ ನೀಡಿದರು.

ಮುಂಬೈನಿಂದಅಂಗರಕ್ಷಕರು
ಮಹಾರ‍್ಯಾಲಿಯ ನೇತೃತ್ವ ವಹಿಸಿರುವ ಜಯಮೃತ್ಯುಂಜಯ ಸ್ವಾಮೀಜಿ ಹಾಗೂ ವಚನಾನಂದ ಸ್ವಾಮೀಜಿ ಅವರ ಭದ್ರತೆಗಾಗಿ ಸೊಲ್ಲಾಪುರ ಮತ್ತು ಮುಂಬೈನಿಂದ 20 ಮಂದಿ ಖಾಸಗಿ ಅಂಗರಕ್ಷಕರನ್ನು ಕರೆತರಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.