ಪನೀರ್
ಬೆಂಗಳೂರು: ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಅಧಿಕಾರಿಗಳು ರಾಜ್ಯದಾದ್ಯಂತ 163 ಪನೀರ್ ಮಾದರಿಗಳನ್ನು ಸಂಗ್ರಹಿಸಿ, ಪ್ರಯೋಗಾಲಯ ಪರೀಕ್ಷೆಗೆ ಒಳಪಡಿಸಿದ್ದಾರೆ.
ಇವುಗಳಲ್ಲಿ 17 ಮಾದರಿಗಳ ವರದಿ ಬಂದಿದ್ದು, ಎರಡು ಮಾದರಿಗಳು ಅಸುರಕ್ಷಿತ ಎನ್ನುವುದನ್ನು ಪ್ರಯೋಗಾಲಯದ ವರದಿ ದೃಢಪಡಿಸಿದೆ. ರಾಸಾಯನಿಕ ಅಂಶದ ಜತೆಗೆ ಸೂಕ್ಷ್ಮಾಣು ಜೀವಿಗಳು ಸಹ ಪತ್ತೆಯಾಗಿದ್ದು, ಕ್ಯಾಲ್ಸಿಯಂ ಮತ್ತು ಪ್ರೋಟೀನ್ ಅಂಶ ಕಡಿಮೆ ಇರುವುದು ವರದಿಯಿಂದ ತಿಳಿದು ಬಂದಿದೆ.
ಇಲಾಖೆ ಅಧಿಕಾರಿಗಳು ವಿವಿಧ ಐಸ್‌ಕ್ರೀಂ, ತಂಪು ಪಾನೀಯ ತಯಾರಿಕಾ ಘಟಕಗಳ ಮೇಲೂ ದಾಳಿ ನಡೆಸಿದ್ದು, ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ.
‘ಪನೀರ್ ಮಾದರಿಗಳ ಪರೀಕ್ಷಾ ವರದಿ ಬಗ್ಗೆ ಮಾಹಿತಿ ಇಲ್ಲ. ಶೀಘ್ರವೇ ವರದಿ ತರಿಸಿಕೊಂಡು, ಪರಿಶೀಲಿಸಲಾಗುವುದು. ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಪ್ರತಿ ತಿಂಗಳು ವಿವಿಧ ಆಹಾರಗಳ ಗುಣಮಟ್ಟ ಪರೀಕ್ಷೆ ನಡೆಸುತ್ತಿದೆ. ಈಗಾಗಲೇ ಕೆಲ ಆಹಾರ ಪದಾರ್ಥಗಳಲ್ಲಿ ಕಲಬೆರಕೆ ಆಗಿರುವುದು ಪ್ರಯೋಗಾಲಯ ಪರೀಕ್ಷೆಯಿಂದ ದೃಢಪಟ್ಟಿದೆ’ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.