ADVERTISEMENT

ಕೈದಿಯನ್ನು ಕೊಂದರಾ ಜೈಲು ಸಿಬ್ಬಂದಿ...?

ಗಾಂಜಾ ಮಾರಾಟ ಪ್ರಕರಣದಲ್ಲಿ ಬಂಧಿತನಾಗಿದ್ದ ಫಿರೋಜ್ * ನ್ಯಾಯಾಂಗ ವಿಚಾರಣಾ ವರದಿ ಆಧರಿಸಿ ಎಫ್‌ಐಆರ್‌

​ಪ್ರಜಾವಾಣಿ ವಾರ್ತೆ
Published 20 ಮೇ 2019, 1:43 IST
Last Updated 20 ಮೇ 2019, 1:43 IST
   

ಬೆಂಗಳೂರು: ವಿಚಾರಣಾಧೀನ ಕೈದಿ ಸೈಯದ್ ಫಿರೋಜ್ ಅಲಿಯಾಸ್ ಫಿರೋಜ್ (21) ಎಂಬಾತ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದ ಪ್ರಕರಣ ಹೊಸ ತಿರುವು ಪಡೆದುಕೊಂಡಿದ್ದು, ಆತನನ್ನು ಕೊಲೆ ಮಾಡಿರುವ ಆರೋಪದಡಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಅಧಿಕಾರಿಗಳು ಹಾಗೂ ಸಿಬ್ಬಂದಿ ವಿರುದ್ಧ ಇದೀಗ ಎಫ್‌ಐಆರ್ ದಾಖಲಾಗಿದೆ.

‘ಸಾವಿನ ಸಂಬಂಧ ವಿಚಾರಣೆ ನಡೆಸಿದ್ದ 57ನೇ ಎಸಿಎಂಎಂ ನ್ಯಾಯಾಲಯದ ವರದಿ ಆಧರಿಸಿ, ಜೈಲಿನ ಅಧಿಕಾರಿಗಳು ಹಾಗೂ ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಪರಪ್ಪನ ಅಗ್ರಹಾರ ಠಾಣೆಯ ಪೊಲೀಸರು ಹೇಳಿದರು.

‘ಜೈಲಿನ ಅಧಿಕಾರಿಗಳು ಹಾಗೂ ಸಿಬ್ಬಂದಿಯಿಂದ ಹಲ್ಲೆಗೀಡಾಗಿ ಫಿರೋಜ್‌ ಮೃತಪಟ್ಟಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಈ ಪ್ರಕರಣದ ಬಗ್ಗೆ ಕೂಲಂಕಷ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ’ ಎಂದು ವರದಿಯಲ್ಲಿ ಸೂಚಿಸಲಾಗಿತ್ತು’ ಎಂದು ವಿವರಿಸಿದರು.

ADVERTISEMENT

ಏನಿದು ಪ್ರಕರಣ? ‘ಗಾಂಜಾ ಮಾರಾಟ ಪ್ರಕರಣ ಸಂಬಂಧಡಿ.ಜೆ.ಹಳ್ಳಿ ಠಾಣೆಯ ಪೊಲೀಸರು ಫಿರೋಜ್‌ನನ್ನು ಬಂಧಿಸಿದ್ದರು. ಜನವರಿ 9ರಂದು ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಅಂದಿನಿಂದ ಆತ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿದ್ದ’ ಎಂದು ಪೊಲೀಸರು ಹೇಳಿದರು.

‘ಅನುಮಾನಾಸ್ಪದ ರೀತಿಯಲ್ಲಿ ಅಸ್ವಸ್ಥಗೊಂಡಿದ್ದ ಆತನನ್ನು ಜ. 21ರಂದು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೇ 23ರಂದು ಮೃತಪಟ್ಟಿದ್ದ. ಆ ಬಗ್ಗೆ ದೂರು ನೀಡಿದ್ದ ಜೈಲಿನ ಮುಖ್ಯ ಅಧೀಕ್ಷಕ ಎಂ.ಸೋಮಶೇಖರ್, ‘ಕಾಯಿಲೆಯಿಂದ ಬಳಲುತ್ತಿದ್ದ ಫಿರೋಜ್, ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾನೆ’ ಎಂದು ಹೇಳಿದ್ದರು.’

‘ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದ ಫಿರೋಜ್ ಸಂಬಂಧಿಕರು, ‘ಜೈಲಿನ ಅಧಿಕಾರಿಗಳು ಹಾಗೂ ಸಿಬ್ಬಂದಿಯವರು ಫಿರೋಜ್‌ ಮೇಲೆ ಹಲ್ಲೆ ಮಾಡಿ ಕೊಂದಿದ್ದಾರೆ. ಈ ಸಾವಿಗೆ ಅವರೇ ಕಾರಣ’ ಎಂದು ಆರೋಪಿಸಿದ್ದರು. ಆ ಬಗ್ಗೆ ನ್ಯಾಯಾಧೀಶರ ಎದುರೂ ಹೇಳಿಕೆ ನೀಡಿದ್ದರು.’

‘ಸಂಬಂಧಿಕರ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿದ್ದ ನ್ಯಾಯಾಧೀಶರು, ನ್ಯಾಯಾಂಗ ವಿಚಾರಣೆ ನಡೆಸಿದ್ದರು. ಜೈಲು ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ವಿಚಾರಣೆಗೆ ಒಳಪಡಿಸಿ ಹೇಳಿಕೆ ಪಡೆಯಲಾಗಿತ್ತು. ಫಿರೋಜ್ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿದ್ದ ವೈದ್ಯರ ಹೇಳಿಕೆಯನ್ನೂ ಪಡೆದು ವಿಚಾರಣಾ ವರದಿ ಸಿದ್ಧಪಡಿಸಲಾಗಿತ್ತು’ ಎಂದು ಪೊಲೀಸರು ವಿವರಿಸಿದರು.

‘ಮರಣೋತ್ತರ ಪರೀಕ್ಷೆ ವರದಿ ನೀಡಿದ್ದ ವೈದ್ಯರು, ‘ಫಿರೋಜ್‌ನ ಮೈಮೇಲೆ ಗಾಯದ ಗುರುತುಗಳಿದ್ದವು. ಹಲ್ಲೆಯಿಂದಲೇ ಆತ ಮೃತಪಟ್ಟಿದ್ದಾನೆ’ ಎಂದು ಹೇಳಿಕೆ ನೀಡಿದ್ದರು. ಸದ್ಯ ಆರೋಪಿಗಳ ವಿರುದ್ಧ ಅಪರಾಧ ಸಂಚು (ಐಪಿಸಿ 34),ಹತ್ಯೆಯ ಸಂಚು (ಐಪಿಸಿ 120ಬಿ) ಹಾಗೂ ಕೊಲೆ (ಐಪಿಸಿ 302) ಆರೋಪದಡಿ ಎಫ್‌ಐಆರ್‌ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.