ADVERTISEMENT

ಪರಪ್ಪನ ಅಗ್ರಹಾರ: ಜೈಲಿನಲ್ಲೇ ಫೋಟೊಶೂಟ್‌, ಎಲ್‌ಇಡಿ ಟಿ.ವಿ ವ್ಯವಸ್ಥೆ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2025, 0:45 IST
Last Updated 10 ಅಕ್ಟೋಬರ್ 2025, 0:45 IST
ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ 
ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ    

ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ವಿಚಾರಣಾಧೀನ ಕೈದಿ, ರೌಡಿಶೀಟರ್‌​ ಗುಬ್ಬಚ್ಚಿ ಸೀನ ಹಾಗೂ ಆತನ ಸಹಚರಿಗೆ ವಿಶೇಷ ಸೌಲಭ್ಯ ಕಲ್ಪಿಸಿರುವ ಮತ್ತಷ್ಟು ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಜೈಲಿನಲ್ಲಿ ಗುಬ್ಬಚ್ಚಿ ಸೀನನ ಜನ್ಮದಿನ ಆಚರಣೆಗೆ ನೆರವು ನೀಡಿದ್ದ ಆರೋಪದ ಅಡಿ ಕಾರಾಗೃಹದ ಮುಖ್ಯ ವೀಕ್ಷಕ ಹಾಗೂ ವೀಕ್ಷಕನನ್ನು ಅಮಾನತು ಮಾಡಿ ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಇಲಾಖೆಯ ಮಹಾನಿರ್ದೇಶಕ ಬಿ.ದಯಾನಂದ ಅವರು ಬುಧವಾರ ಆದೇಶಿಸಿದ್ದರು. ಜನ್ಮದಿನಾಚರಣೆ ಹಾಗೂ ವಿಶೇಷ ಸೌಲಭ್ಯಕ್ಕೆ ಸಂಬಂಧಿಸಿದ ಮತ್ತಷ್ಟು ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ವಿಚಾರಣಾಧೀನ ಕೈದಿಗಳಿಗೆ ಎಲ್‌ಇಡಿ ಟಿ.ವಿ ಸೌಲಭ್ಯದ ಜೊತೆಗೆ ಅಡುಗೆ ಮಾಡಿಕೊಳ್ಳಲು ಸ್ಟೌ, ಪಾತ್ರೆಗಳೂ ಸಿಗುತ್ತಿವೆ. ಬ್ಯಾರಕ್‌ನಲ್ಲೇ ಪ್ರತ್ಯೇಕವಾಗಿ ಅಡುಗೆ ಮಾಡಿಕೊಳ್ಳಲು ಚಿಕನ್‌ ಸಹ ಪೂರೈಸಲಾಗುತ್ತಿದೆ. ಪಾರ್ಟಿ ನಡೆಸಲು ಸ್ಪೀಕರ್ ವ್ಯವಸ್ಥೆಯನ್ನೂ ಮಾಡಲಾಗುತ್ತಿದೆ ಎಂಬ ಆರೋಪವಿದೆ. ಹಣದಾಸೆಗೆ ಕೈದಿಗಳ ಜೊತೆ ಜೈಲಾಧಿಕಾರಿಗಳು ಮತ್ತು ಸಿಬ್ಬಂದಿ ಶಾಮೀಲಾಗಿದ್ದಾರೆ ಎಂಬ ಆರೋಪವಿದ್ದು, ಪ್ರಕರಣದ ತನಿಖೆ ನಡೆಸಲಾಗುತ್ತಿದೆ ಎಂದು ಮೂಲಗಳು ಹೇಳಿವೆ.

ADVERTISEMENT

ಗುಬ್ಬಚ್ಚಿ ಸೀನ ಮತ್ತು ಸಹಚರರು ಗ್ರೂಪ್ ಫೋಟೊಶೂಟ್​ ನಡೆಸಿದ್ದಾರೆ. ಪಾರಿವಾಳ ಹಿಡಿದುಕೊಂಡು ಜೈಲಿನ ಒಳಗೆ ಫೋಟೊ ತೆಗೆಸಿಕೊಂಡಿದ್ದಾರೆ. ಅದರ ಫೋಟೊಗಳು ಲಭಿಸಿದ್ದು ಪರಿಶೀಲನೆ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಜನ್ಮದಿನ ಆಚರಣೆಯ ಫೋಟೊಗಳನ್ನು ಗುಬ್ಬಚ್ಚಿ ಸೀನನ ಸಹಚರ, ಕೊಲೆ ಆರೋಪಿ ಅರವಿಂದ್, ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ. ಜೈಲಿನ ಒಳಗಿಂದಲೇ ಫೋಟೊಗಳನ್ನು ಅಪ್‌ಲೋಡ್ ಮಾಡಿರುವುದು ಗೊತ್ತಾಗಿದೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.

ಗುಬ್ಬಚ್ಚಿ ಸೀನನ ಜನ್ಮದಿನ ಆಚರಣೆ ನಡೆಸಿದ್ದ ವಿಡಿಯೊ ಹಾಗೂ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಬಳಿಕ ಇಲಾಖೆಯ ಮಹಾನಿರ್ದೇಶಕ ಬಿ.ದಯಾನಂದ ಅವರು ಪ್ರಕರಣದ ತನಿಖೆಗೆ ಆದೇಶಿಸಿದ್ದರು.

ಇಲಾಖೆಯ ಉಪ ಮಹಾನಿರೀಕ್ಷಕಿ ಕೆ.ಸಿ.ದಿವ್ಯಾ ಅವರು (ದಕ್ಷಿಣ ವಲಯ) ಅ.10ರಂದು ಪರಪ್ಪನ ಅಗ್ರಹಾರ ಕಾರಾಗೃಹಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಘಟನೆ ಕುರಿತು ಪ್ರಾಥಮಿಕ ವಿಚಾರಣೆ ನಡೆಸಿ ತನಿಖಾ ವರದಿಯನ್ನು ಬಿ.ದಯಾನಂದ ಅವರಿಗೆ ಸಲ್ಲಿಸಿದ್ದರು.

‘ಅ.5ರಂದು ಆರನೇ ಬ್ಯಾರಕ್‌ನ ಏಳನೇ ಕೊಠಡಿಯಲ್ಲಿ ಮಧ್ಯಾಹ್ನದ ವೇಳೆ ಕೈದಿಗಳು ಸೇರಿಕೊಂಡು ಜನ್ಮದಿನ ಆಚರಣೆ ನಡೆಸಿದ್ದಾರೆ’ ಎಂಬುದು ತನಿಖೆಯಿಂದ ಗೊತ್ತಾಗಿದೆ.

‘ಕೈದಿಗಳಿಗೆ ಹೇಗೆ ಮೊಬೈಲ್‌ ದೊರೆಯಿತು? ಯಾರು ಮೊಬೈಲ್‌ ಪೂರೈಸಿದ್ದರು? ಯಾವಾಗಿನಿಂದ ಕೈದಿಗಳು ಮೊಬೈಲ್‌ ಬಳಸುತ್ತಿದ್ದಾರೆ ಎಂಬುದರ ಕುರಿತೂ ತನಿಖೆ ಮುಂದುವರಿದಿದೆ’ ಎಂದು ಮೂಲಗಳು ಹೇಳಿವೆ.

ಜೈಲಿನಲ್ಲಿ ಜನ್ಮದಿನ ಆಚರಣೆ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.