ADVERTISEMENT

ಪರೀಕ್ಷಾ ಪೆ ಚರ್ಚಾ: ಬೆಂಗಳೂರಿನ ವಿದ್ಯಾರ್ಥಿಗಳಿಗೆ ಅವಕಾಶ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2022, 16:35 IST
Last Updated 30 ಮಾರ್ಚ್ 2022, 16:35 IST

ಬೆಂಗಳೂರು: ಏಪ್ರಿಲ್ 1ರಂದು ಪ್ರಧಾನಿ ನರೇಂದ್ರ ಮೋದಿ ನಡೆಸಲಿರುವ ‘‍ಪರೀಕ್ಷಾ ಪೆ ಚರ್ಚಾ’ ಕಾರ್ಯಕ್ರಮದಲ್ಲಿ ಬೆಂಗಳೂರಿನ ಆಯ್ದ ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜೆ. ಮಂಜುನಾಥ್ ತಿಳಿಸಿದರು.

‘ಬೆಳಿಗ್ಗೆ 11 ಗಂಟೆಗೆ ನಡೆಯಲಿರುವ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳುರಾಜಭವನದಲ್ಲಿ ರಾಜ್ಯಪಾಲರ ಜತೆ ವರ್ಚುವಲ್ ವೇದಿಕೆ ಮೂಲಕ ಪಾಲ್ಗೊಳ್ಳಲಿದ್ದಾರೆ’ ಎಂದು ಅವರು ಸುದ್ದಿಗೋಷ್ಠಿಯಲ್ಲಿ ಬುಧವಾರ ವಿವರಿಸಿದರು.

‘ವಿದ್ಯಾರ್ಥಿಗಳು ಪರೀಕ್ಷಾ ಸಂದರ್ಭದಲ್ಲಿ ಎದುರಿಸುವ ಸಮಸ್ಯೆ, ಸವಾಲು ಮತ್ತು ಆತಂಕಗಳ ಬಗ್ಗೆ ಪ್ರಧಾನ ಮಂತ್ರಿ ಚರ್ಚಿಸಲಿದ್ದಾರೆ. ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಸ್ವತಃ ಪ್ರಧಾನಿ ಅವರೇ ಉತ್ತರ ನೀಡಲಿದ್ದಾರೆ’ ಎಂದು ಹೇಳಿದರು.

ADVERTISEMENT

‘2021ರ ಡಿಸೆಂಬರ್ ‌8ರಿಂದ 2022ರ ಫೆಬ್ರುವರಿ 3ರವರೆಗೆ ವಿದ್ಯಾರ್ಥಿಗಳ ಆತಂಕದ ಬಗ್ಗೆ ಪ್ರಬಂಧ ಸ್ಪರ್ಧೆಯಲ್ಲಿ 15.7 ಲಕ್ಷ ಜನ ಭಾಗವಹಿಸಿದ್ದರು. ಕರ್ನಾಟಕದಿಂದ 84 ಜನ ಆಯ್ಕೆಯಾಗಿದ್ದು, ಅವರಲ್ಲಿ 60 ವಿದ್ಯಾರ್ಥಿಗಳು, 12 ಪೋಷಕರು ಮತ್ತು 12 ಶಿಕ್ಷಕರು ಇದ್ದಾರೆ’ ಎಂದು ಪ್ರೆಸ್ ಇನ್‌ಫರ್ಮೇಷನ್ ಬ್ಯೂರೊ ಉಪನಿರ್ದೇಶಕಿ ಜಯಂತಿ ತಿಳಿಸಿದರು.

ಒತ್ತುವರಿ ತೆರವು: 365 ಎಕರೆ ವಶಕ್ಕೆ

‘ಬೆಂಗಳೂರು ನಗರ ಜಿಲ್ಲೆಯಲ್ಲಿ ಒತ್ತುವರಿಯಾಗಿದ್ದ ಸರ್ಕಾರಿ ಕೆರೆ, ಗೋಮಾಳ, ಗುಂಡುತೋಪುಗಳ ತೆರವು ಕಾರ್ಯಾಚರಣೆ ನಿರಂತರವಾಗಿ ನಡೆಯುತ್ತಿದ್ದು, ಕಳೆದ ಎಂಟು ತಿಂಗಳಲ್ಲಿ 365 ಎಕರೆ ಸ್ವಾಧೀನಕ್ಕೆ ಪಡೆಯಲಾಗಿದೆ’ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.

2021ರ ಜುಲೈ 31ರಿಂದ 2022ರ ಮಾರ್ಚ್ 19ರವರೆಗೆ ಒಟ್ಟು 332 ಪ್ರಕರಣಗಳಲ್ಲಿ ತೆರವು ಕಾರ್ಯಾಚರಣೆ ನಡೆಸಲಾಗಿದೆ. ವಶಕ್ಕೆ ಪಡೆದಿರುವುದರಲ್ಲಿ ಕೆರೆ ಜಾಗವೇ ಹೆಚ್ಚು. 272 ಎಕರೆ ವಶಕ್ಕೆ ಪಡೆಯಲಾಗಿದೆ. ಸರ್ಕಾರಿ ಖರಾಬು 10 ಎಕರೆ, ಸರ್ಕಾರಿ ಗೋಮಾಳ 58 ಎಕರೆ ಮತ್ತು ಗುಂಡುತೋಪು 57 ಎಕರೆ ಸ್ವಾಧೀನಕ್ಕೆ ಪಡೆಯಲಾಗಿದೆ ಎಂದು ವಿವರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.