ADVERTISEMENT

ರಾಜರಾಜೇಶ್ವರಿನಗರ: ಉದ್ಯಾನ, ಆಟದ ಮೈದಾನ ಕಬಳಿಸಲು ಸಂಚು

ಬೇಲಿ ಕತ್ತರಿಸಿ ರಸ್ತೆ ನಿರ್ಮಾಣ; ಕ್ರಮ ಕೈಗೊಳ್ಳದ ಬಿಬಿಎಂಪಿ ಅಧಿಕಾರಿಗಳು

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2025, 15:39 IST
Last Updated 18 ಫೆಬ್ರುವರಿ 2025, 15:39 IST
ಉದ್ಯಾನದ ಮಧ್ಯೆ ರಸ್ತೆ ನಿರ್ಮಾಣ
ಉದ್ಯಾನದ ಮಧ್ಯೆ ರಸ್ತೆ ನಿರ್ಮಾಣ   

ರಾಜರಾಜೇಶ್ವರಿನಗರ: ಉದ್ಯಾನ ಮತ್ತು ಆಟದ ಮೈದಾನದ ಬೇಲಿಯನ್ನು ಕತ್ತರಿಸಿ, ರಸ್ತೆ ನಿರ್ಮಿಸಿ, ಒತ್ತುವರಿ ಮಾಡಿಕೊಳ್ಳಲಾಗಿದೆ. ಸ್ಥಳೀಯರು ದೂರು ನೀಡಿ ತಿಂಗಳಾದರೂ ಬಿಬಿಎಂಪಿ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ.

ಜ್ಞಾನಭಾರತಿ ಬಡಾವಣೆಯ ಬೈರವನಗರದ ಜ್ಞಾನಬೋಧಿನಿ ಶಾಲೆಯ ಎದುರಿಗಿರುವ ಉದ್ಯಾನ ಮತ್ತು ಆಟದ ಮೈದಾನದ ಬೇಲಿಯನ್ನು ತೆರವುಗೊಳಿಸಿ, ವಾಹನ ನಿಲ್ದಾಣ, ವಾಹನ ರಿಪೇರಿ, ಗುಜರಿ, ತ್ಯಾಜ್ಯ ಸುರಿಯುವ ಸ್ಥಳವನ್ನಾಗಿಸಿಕೊಳ್ಳಲಾಗಿದೆ. ಜಾಗವನ್ನು ಕಬಳಿಸಲು ಭೂಗಳ್ಳರು ಪ್ರಯತ್ನಿಸುತ್ತಿದ್ದಾರೆ.

ಉದ್ಯಾನದ ಮಧ್ಯೆ ರಸ್ತೆ ನಿರ್ಮಾಣ ಮಾಡಿ ಒತ್ತುವರಿ ಮಾಡಿಕೊಂಡು, ಅದನ್ನೂ ಕಬಳಿಸಲು ಹೊಂಚು ಹಾಕುತ್ತಿದ್ದಾರೆ. ಈ ಬಗ್ಗೆ ಬಿಬಿಎಂಪಿ ಅಧಿಕಾರಿಗಳಿಗೆ ದೂರು ನೀಡಿದ್ದರೂ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.

ADVERTISEMENT

‘ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದವರು (ಬಿಡಿಎ) ಜ್ಞಾನಭಾರತಿ ಬಡಾವಣೆ ನಿರ್ಮಾಣ ಮಾಡುವಾಗಲೇ ಉದ್ಯಾನ, ಆಟದ ಮೈದಾನಕ್ಕಾಗಿ ಮೀಸಲಿಟ್ಟಿರುವ ಜಾಗವನ್ನು ಪೂರ್ಣವಾಗಿ ಅಭಿವೃದ್ಧಿಪಡಿಸರಲಿಲ್ಲ. ಬಿಬಿಎಂಪಿಗೆ ಬಡಾವಣೆ ಹಸ್ತಾಂತರವಾದ ಮೇಲೂ ಅದರ ನಿರ್ವಹಣೆ ಆಗಿರಲಿಲ್ಲ. ಆದರೆ, ಬೇಲಿಯನ್ನು ಹಾಕಲಾಗಿತ್ತು. ರಾತ್ರೋರಾತ್ರಿ ಬೇಲಿಯನ್ನೇ ಕತ್ತರಿಸಿ ಒತ್ತುವರಿ ಮಾಡಲಾಗಿದೆ’ ಎಂಬುದು ಸ್ಥಳೀಯರ ಆರೋಪ. 

‘ಉದ್ಯಾನದಲ್ಲಿ ತ್ಯಾಜ್ಯ ಸುರಿಯುವುದಷ್ಟೇ ಅಲ್ಲದೇ, ಆ ರಸ್ತೆಯ ಬದಿ ಬೆಳೆಸಿದ್ದ ಮರ–ಗಿಡಗಳನ್ನು ಕಡಿದು ಹಾಕಲಾಗಿದೆ. ಮರದ ಬೇರು ಮತ್ತು ಕಾಂಡಗಳು ಕಾಣದಂತೆ ನೆಲಸಮ ಮಾಡಿದ್ದರೂ ಬಿಬಿಎಂಪಿಯ ಅರಣ್ಯ ಇಲಾಖೆಯ ಸಿಬ್ಬಂದಿ ಕ್ರಮ ಕೈಗೊಂಡಿಲ್ಲ’ ಎಂದು ವಾಯುವಿಹಾರಿಗಳು ದೂರಿದರು.

‘ಉದ್ಯಾನ ಮತ್ತು ಆಟದ ಮೈದಾನದ ಒತ್ತುವರಿ ತೆರವುಗೊಳಿಸುವಂತೆ ಬಿಡಿಎ ಅಧಿಕಾರಿಗಳಿಗೆ ಪತ್ರ ಬರೆಯಲಾಗಿತ್ತು. ಬಡಾವಣೆಯನ್ನು ಬಿಬಿಎಂಪಿಗೆ ಹಸ್ತಾಂತರಿಸಿರುವುದರಿಂದ ಅವರು ಪತ್ರವನ್ನು ಬಿಬಿಎಂಪಿಗೆ ವರ್ಗಾಯಿಸಿದ್ದರು. ವಲಯ ಆಯುಕ್ತರು, ಕಾರ್ಯಪಾಲಕ ಎಂಜಿನಿಯರ್‌ಗಳು ತಮ್ಮ ಕೆಳಸ್ತರದ ಅಧಿಕಾರಿಗಳಿಗೆ ಪತ್ರ ಬರೆದಿರುವುದನ್ನು ಬಿಟ್ಟರೆ ಯಾವ ಕಾರ್ಯವನ್ನೂ ಮಾಡಿಲ್ಲ. ಒತ್ತುವರಿ ಕಣ್ಣಮುಂದೆ ಇದ್ದರೂ ಅದನ್ನು ತೆರವುಗೊಳಿಸಲು ಮುಂದಾಗಿಲ್ಲ. ಪಟ್ಟಭದ್ರ ಹಿತಾಸಕ್ತಿಗಳಿಗೆ ಅಧಿಕಾರಿಗಳು ಮಣೆ ಹಾಕಿದ್ದಾರೆ’ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.

ವಲಯ ಆಯುಕ್ತರು ಪತ್ರ ಬರೆದಿದ್ದಷ್ಟೇ

‘ಉದ್ಯಾನದ ಮಧ್ಯಭಾಗದಲ್ಲಿದ್ದ ತಂತಿಬೇಲಿ ಕತ್ತರಿಸಿ ಗೇಟ್ ಅಳವಡಿಸಿಕೊಂಡಿರುವವರ ಮೇಲೆ ಕ್ರಮ ಕೈಗೊಳ್ಳಬೇಕು’ ಎಂದು ಷರಾ ಬರೆದ ಬಿಡಿಎ ಪಶ್ಚಿಮ ಉಪವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್, ತಮಗೆ ಬಂದಿದ್ದ ನಾಗರಿಕರು ದೂರನ್ನು ಬಿಬಿಎಂಪಿ ಅಧಿಕಾರಿಗಳಿಗೆ ಒಂದು ತಿಂಗಳ ಹಿಂದೆ ವರ್ಗಾಯಿಸಿದ್ದರು. ನಂತರ ಬಿಬಿಎಂಪಿಯ ರಾಜರಾಜೇಶ್ವರಿನಗರದ ವಲಯ ಆಯುಕ್ತ ಬಿ.ಸಿ. ಸತೀಶ್‌ ಅವರು, ‘ಕಾನೂನು ರೀತಿ ಕ್ರಮ ಕೈಗೊಂಡು, ಉದ್ಯಾನ ಮತ್ತು ಆಟದ ಮೈದಾನ ನಿರ್ಮಿಸಿ’ ಎಂದು ಕೆಂಗೇರಿ ವಿಭಾಗದ ಕಾರ್ಯಪಾಲಕ ಎಂಜಿನಿಯರ್‌ಗೆ ಪತ್ರ ಬರೆದಿದ್ದಾರೆ.‌ 

ಇದಾದ ನಂತರ, ಕಾರ್ಯಪಾಲಕ ಎಂಜಿನಿಯರ್‌ ಕೆ.ಜಿ.ಗಂಗಾಧರಯ್ಯ ಅವರು, ‘ಜಾಗ ರಕ್ಷಣೆ ಮಾಡಿ, ಉದ್ಯಾನ, ಆಟದ ಮೈದಾನ ನಿರ್ಮಿಸಿ, ತಂತಿಬೇಲಿಯನ್ನು ಹಾಕಿ’ ಎಂದು ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ಗೆ ಸೂಚಿಸಿದ್ದಾರೆ. ಆದರೆ, ಇನ್ನೂ ಯಾವುದೇ ಕ್ರಮ ಆಗಿಲ್ಲ.

ಉದ್ಯಾನ ಜಾಗದ ಪಕ್ಕದಲ್ಲಿಯೇ ಹಾದುಹೋಗಿರುವ ರಸ್ತೆಯಲ್ಲಿರುವ ಮರಗಳ ಮಾರಣಹೋಮ
ಉದ್ಯಾನದ ಜಾಗದಲ್ಲಿ ಹಳೆಯ ಟೈರು ಗುಜರಿ ವಸ್ತುಗಳನ್ನು ಬಿಸಾಡಿದ್ದಾರೆ
ಉದ್ಯಾನದ ಜಾಗದಲ್ಲಿ ವಾಹನಗಳ ನಿಲುಗಡೆ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.