ADVERTISEMENT

ಅಣಕು ಸಂಸತ್ ಅಧಿವೇಶನ, ವಿದ್ಯಾರ್ಥಿಗಳ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 8 ಜುಲೈ 2025, 16:30 IST
Last Updated 8 ಜುಲೈ 2025, 16:30 IST
ಅಣಕು ಸಂಸತ್ ಅಧಿವೇಶನದಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿಗಳು
ಅಣಕು ಸಂಸತ್ ಅಧಿವೇಶನದಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿಗಳು   

ಬೆಂಗಳೂರು: ಯುವ ಸಮುದಾಯದಲ್ಲಿ ನಾಯಕತ್ವ ಗುಣ ಬೆಳೆಸುವ ಉದ್ದೇಶದಿಂದ ವಿಧಾನಸೌಧದಲ್ಲಿ ಹಮ್ಮಿಕೊಳ್ಳಲಾದ ಎರಡು ದಿನಗಳ ಯುವ ಭಾರತೀಯ ಸಂಸತ್ (ವೈಐಪಿ) ಅಧಿವೇಶನಕ್ಕೆ ಮಂಗಳವಾರ ಚಾಲನೆ ದೊರೆಯಿತು. ಈ ಅಣಕು ಸಂಸತ್ ಅಧಿವೇಶನದಲ್ಲಿ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡು ಸಂಭ್ರಮಿಸಿದರು. 

ಈ ಅಧಿವೇಶನದಲ್ಲಿ ನಗರದ 15 ಶಾಲೆಗಳಿಂದ 200 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಸಂಸತ್ ಅಧಿವೇಶನದಲ್ಲಿ ನಡೆಯುವ ಚರ್ಚೆ, ಪ್ರಶ್ನೋತ್ತರ, ಶೂನ್ಯ ವೇಳೆ ಮತ್ತಿತರ ಕಲಾಪಗಳು ನಡೆದವು. ಶಾಸನ ರಚನೆಯಲ್ಲಿ ಚರ್ಚೆ ನಡೆಸಿದ ಬಳಿಕ ಸಭಾಧ್ಯಕ್ಷರು ವಿಧೇಯಕವನ್ನು ಮತಕ್ಕೆ ಹಾಕಿ, ಅನುಮೋದನೆ ಪಡೆದುಕೊಳ್ಳುವ ಬಗ್ಗೆಯೂ ಅಣಕು ಪ್ರದರ್ಶನ ನಡೆಯಿತು. ಅಧಿವೇಶನದ ಸಮಾರೋಪ ಸಮಾರಂಭ ಬುಧವಾರ ನಡೆಯಲಿದ್ದು, ವಿಧಾನಸಭೆ ಅಧ್ಯಕ್ಷ ಯು.ಟಿ.ಖಾದರ್ ಭಾಗವಹಿಸುತ್ತಾರೆ.

‘ವಿಧಾನಸೌಧಕ್ಕೆ ಇದೇ ಮೊದಲ ಬಾರಿ ಭೇಟಿ ನೀಡಿದ್ದು, ಸಂಸತ್ ಅಧಿವೇಶನ ಹೇಗೆ ನಡೆಯುತ್ತದೆ ಎನ್ನುವುದನ್ನು ತಿಳಿದುಕೊಂಡಿದ್ದೇನೆ. ದೇಶವನ್ನು ಕಾಡುತ್ತಿರುವ ವಿವಿಧ ಸಮಸ್ಯೆಗಳಿಗೆ ಪರಿಹಾರೋಪಾಯದ ಬಗ್ಗೆಯೂ ಚರ್ಚಿಸಿದೆವು’ ಎಂದು ಮಾಲ್ಗುಡಿ ವಿದ್ಯಾನಿಕೇತನದ 9ನೇ ತರಗತಿಯ ವಿದ್ಯಾರ್ಥಿ ತರುಣ್ ಯು.ಎಂ. ಹೇಳಿದರು. ಶಿಶು ಗೃಹಶಾಲೆಯ 11ನೇ ತರಗತಿಯ ವಿದ್ಯಾರ್ಥಿ ಪ್ರೀತಂ ಗೌಡ ಅವರು ಉಪ ಪ್ರಧಾನಿ ಜವಾಬ್ದಾರಿ ನಿರ್ವಹಿಸಿದರು.

ADVERTISEMENT

ಸಿಐಐ ವೈಐ ಬೆಂಗಳೂರು ವಿಭಾಗದ ಅಧ್ಯಕ್ಷೆ ಪೂಜಿತಾ ಪ್ರಸಾದ್, ‘ಮಕ್ಕಳಲ್ಲಿ ನಾಯಕತ್ವ ಗುಣ ಬೆಳೆಸಲು ಇದು ಉತ್ತಮ ವೇದಿಕೆಯಾಗಿದೆ. ಸಾರ್ವಜನಿಕ ಸೇವೆಯ ಮಹತ್ವವನ್ನು ಮನವರಿಕೆ ಮಾಡಿಸಿ, ಮುಂದಿನ ತಲೆಮಾರನ್ನು ನಿರ್ಮಾಣ ಮಾಡುವುದು ಈ ಅಧಿವೇಶನದ ಉದ್ದೇಶ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.