ADVERTISEMENT

‘ಪರ್ವ’ದ ವಿಶೇಷ ಪ್ರದರ್ಶನ ಸಂಪನ್ನ: ಎರಡನೇ ದಿನವೂ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2021, 20:30 IST
Last Updated 24 ಅಕ್ಟೋಬರ್ 2021, 20:30 IST
ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಮೈಸೂರು ರಂಗಾಯಣದ ಕಲಾವಿದರು ‘ಪರ್ವ’ ನಾಟಕವನ್ನು ಭಾನುವಾರ ಪ್ರಸ್ತುತ ಪಡಿಸಿದರು – ಪ್ರಜಾವಾಣಿ ಚಿತ್ರ
ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಮೈಸೂರು ರಂಗಾಯಣದ ಕಲಾವಿದರು ‘ಪರ್ವ’ ನಾಟಕವನ್ನು ಭಾನುವಾರ ಪ್ರಸ್ತುತ ಪಡಿಸಿದರು – ಪ್ರಜಾವಾಣಿ ಚಿತ್ರ   

ಬೆಂಗಳೂರು: ‌ಎರಡು ದಿನ ಇಲ್ಲಿನ ರವೀಂದ್ರ ಕಲಾಕ್ಷೇತ್ರದಲ್ಲಿ ಮೈಸೂರು ರಂಗಾಯಣದ ಕಲಾವಿದರು ಪ್ರದರ್ಶಿಸಿದ ‘ಪರ್ವ’ ನಾಟಕ ಭಾನುವಾರ ಸಂಪನ್ನಗೊಂಡಿತು.

ಎರಡನೇ ದಿನ ಕೂಡ ನಗರದ ಜನತೆಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಕಲಾಕ್ಷೇತ್ರದ ಎಲ್ಲ ಆಸನಗಳು ಭರ್ತಿಯಾಗಿದ್ದವು. ಪ್ರವೇಶ ದ್ವಾರದಲ್ಲಿಯೇ ‘ಆಸನಗಳು ಭರ್ತಿಯಾಗಿವೆ. ಟಿಕೆಟ್‌ಗಳು ಲಭ್ಯವಿಲ್ಲ’ ಎಂಬ ಫಲಕವನ್ನು ಹಾಕಲಾಗಿತ್ತು. ಹೀಗಾಗಿ, ಮುಂಚಿತವಾಗಿ ಟಿಕೆಟ್ ಖರೀದಿಸದ ಕೆಲವರು ನಾಟಕ ವೀಕ್ಷಿಸಲಾಗದೆಯೇ ಮನೆಗೆ ಮರಳಬೇಕಾಯಿತು. ಇನ್ನೂ ಕೆಲವರು ಟಿಕೆಟ್ ಸಿಗಬಹುದೆಂದು 10 ಗಂಟೆಯವರೆಗೂ ಕಾದು, ನಿರಾಸೆ ಅನುಭವಿಸಿದರು.

ಸಾಹಿತಿ ಎಸ್.ಎಲ್.ಭೈರಪ್ಪ ಅವರ ಕಾದಂಬರಿ ಆಧಾರಿತ8 ಗಂಟೆಯಷ್ಟು ಸುದೀರ್ಘ ಅವಧಿಯ ಈ ನಾಟಕವನ್ನುಎರಡು ದಿನಗಳ ಅವಧಿಯಲ್ಲಿ 1,600ಕ್ಕೂ ಅಧಿಕ ಮಂದಿ ವೀಕ್ಷಿಸಿದರು. ಮೊದಲ ದಿನದ ಪ್ರೇಕ್ಷಕರಲ್ಲಿ ಹೆಚ್ಚಿನವರು ಹಿರಿಯ ನಾಗರಿಕರಿದ್ದರೇ, ಎರಡನೇ ದಿನದ ಪ್ರೇಕ್ಷಕರಲ್ಲಿ ಬಹುತೇಕರು ಯುವಜನರೇ ಇದ್ದರು. ರಂಗಕರ್ಮಿ, ಕಿರುತೆರೆ ಕಲಾವಿದರು ಕೂಡ ಪ್ರೇಕ್ಷಕರ ಸಾಲಿನಲ್ಲಿ ಕಾಣಿಸಿಕೊಂಡರು.

ADVERTISEMENT

ಖುಷಿ ನೀಡಿದ ಸ್ಪಂದನೆ: ‘ಎರಡು ದಿನಗಳ ಪ್ರದರ್ಶನ ಸಂಪೂರ್ಣ ತೃಪ್ತಿ ತಂದಿದೆ. ಬೆಳಿಗ್ಗೆ 10ರಿಂದ ಸಂಜೆ 6.45ರವರೆಗೆ ನಡೆದ ಪ್ರದರ್ಶನದಲ್ಲಿ ಒಬ್ಬರು ಕೂಡ ಮಧ್ಯದಲ್ಲಿ ಎದ್ದು ಹೋಗಲಿಲ್ಲ. ಪ್ರೇಕ್ಷಕರ ಸ್ಪಂದನೆ ಖುಷಿ ನೀಡಿದೆ. ಎರಡು ದಿನಗಳಲ್ಲಿ ಟಿಕೆಟ್‌ಗಳಿಂದ ₹ 5 ಲಕ್ಷ ಸಂಗ್ರಹವಾಗಿದೆ. 40 ಕಲಾವಿದರು ಸೇರಿದಂತೆ 50 ಜನರ ತಂಡಕ್ಕೆ ವಸತಿ, ಊಟದ ‍ವ್ಯವಸ್ಥೆ, ಪ್ರಯಾಣ ಸೇರಿದಂತೆ ವಿವಿಧ ವೆಚ್ಚಗಳನ್ನು ಭರಿಸಬೇಕಾಗುತ್ತದೆ’ ಎಂದು ರಂಗಾಯಣದ ನಿರ್ದೇಶಕ ಅಡ್ಡಂಡ ಸಿ. ಕಾರ್ಯಪ್ಪ ತಿಳಿಸಿದರು.

‘ಬೆಂಗಳೂರಿನ ಪ್ರದರ್ಶನದ ಯಶಸ್ಸು ಸರ್ಕಾರಕ್ಕೆ ಸಂದೇಶವಾಗಿದೆ. ಬಜೆಟ್‌ನಲ್ಲಿಘೋಷಿಸಿದ ₹ 1 ಕೋಟಿ ಅನುದಾನವು ಬಿಡುಗಡೆಯಾದ ಬಳಿಕ ಹೊರ ರಾಜ್ಯಗಳಲ್ಲಿಯೂ ಪ್ರದರ್ಶನ ಏರ್ಪಡಿಸಲಾಗುತ್ತದೆ. ವಾರಾಣಸಿ, ಗುಜರಾತ್, ದೆಹಲಿ, ಮುಂಬೈ ಹಾಗೂ ಚಂಡೀಗಡದಲ್ಲಿ ಪ್ರದರ್ಶನಗಳನ್ನು ಏರ್ಪಡಿಸಲು ಯೋಜನೆ ರೂಪಿಸಲಾಗಿದೆ’ ಎಂದು ವಿವರಿಸಿದರು.

ರಾಜ್ಯದಲ್ಲಿ ಒಟ್ಟು 50 ಪ್ರದರ್ಶನ ಹಾಗೂ ಇತರ ಐದು ರಾಜ್ಯಗಳಲ್ಲಿ 10 ಪ್ರದರ್ಶನ ಆಯೋಜಿಸಲು ಮೈಸೂರು ರಂಗಾಯಣ ಮುಂದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.