ADVERTISEMENT

ಕುವೈತ್‌ಗೆ ಹೊರಟಿದ್ದ ಪ್ರಯಾಣಿಕನ ಬಂಧನ: ಪಿಸ್ತೂಲ್, ಜೀವಂತ ಗುಂಡುಗಳ ವಶ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2022, 19:14 IST
Last Updated 27 ನವೆಂಬರ್ 2022, 19:14 IST
   

ಬೆಂಗಳೂರು: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಕುವೈತ್‌ಗೆ ಹೊರಟಿದ್ದ ಪ್ರಯಾಣಿಕ ಎನ್‌. ಶ್ರೀನಿವಾಸ್ ಅವರನ್ನು ಪೊಲೀಸರು ಬಂಧಿಸಿದ್ದು, ಅವರಿಂದ ಪಿಸ್ತೂಲ್ ಹಾಗೂ 5 ಜೀವಂತ ಗುಂಡುಗಳನ್ನು ಜಪ್ತಿ ಮಾಡಿದ್ದಾರೆ.

‘ನಗರದ ನಿವಾಸಿ ಎನ್ನಲಾದ ಶ್ರೀನಿವಾಸ್, ಕುವೈತ್‌ಗೆ ಹೋಗಲು ಜೆ9–432 ವಿಮಾನದಲ್ಲಿ ಟಿಕೆಟ್ ಕಾಯ್ದಿರಿಸಿದ್ದ. ನಿಗದಿಯಂತೆ ಕುವೈತ್‌ಗೆ ಹೋಗಲೆಂದು ನ. 18ರಂದು ರಾತ್ರಿ ವಿಮಾನ ನಿಲ್ದಾಣಕ್ಕೆ ಬಂದಿದ್ದ. ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ಎಫ್‌) ಸಿಬ್ಬಂದಿ, ಪ್ರವೇಶ ದ್ವಾರದಲ್ಲಿ ಶ್ರೀನಿವಾಸ್‌ನನ್ನು ತಡೆದು ಪರಿಶೀಲನೆ ನಡೆಸಿದ್ದರು’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಶ್ರೀನಿವಾಸ್ ಬಳಿ 6.35 ಎಂಎಂ ಪಿಸ್ತೂಲ್ ಪತ್ತೆಯಾಗಿತ್ತು. ಅದನ್ನು ಜಪ್ತಿ ಮಾಡಿ ಪರಿಶೀಲಿಸಿದಾಗ, ಅದರೊಳಗೆ ಐದು ಗುಂಡುಗಳಿದ್ದವು. ಪಿಸ್ತೂಲ್ ಬಗ್ಗೆ ವಿಚಾರಿಸಿದಾಗ ಆರೋಪಿ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಜೊತೆಗೆ, ಪಿಸ್ತೂಲ್ ಹೊಂದಲು ಪರವಾನಗಿಯೂ ಆತನ ಬಳಿ ಇರಲಿಲ್ಲ. ಶ್ರೀನಿವಾಸ್‌ನನ್ನು ವಶಕ್ಕೆ ಪಡೆದಿದ್ದ ಸಿಐಎಸ್‌ಎಫ್‌ ಸಿಬ್ಬಂದಿ, ಪೊಲೀಸರ ಸುಪರ್ದಿಗೆ ಒಪ್ಪಿಸಿದ್ದಾರೆ’ ಎಂದು ತಿಳಿಸಿವೆ.

ADVERTISEMENT

‘ಸಿಐಎಸ್‌ಎಫ್‌ ಅಧಿಕಾರಿಗಳು ನೀಡಿರುವ ದೂರು ಆಧರಿಸಿ ಶ್ರೀನಿವಾಸ್ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆರೋಪಿ ಶ್ರೀನಿವಾಸ್, ಹಿನ್ನೆಲೆ ಏನು ಎಂಬುದನ್ನು ತಿಳಿಯಲು ತನಿಖೆ ಮುಂದುವರಿಸಲಾಗಿದೆ’ ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.