ADVERTISEMENT

ಪಟಾಲಮ್ಮ ದೇವಿ ರಥೋತ್ಸವಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ

ಮೂರು ವರ್ಷಕ್ಕೊಮ್ಮೆ ನಡೆಯುವ ರಥೋತ್ಸವಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ

​ಪ್ರಜಾವಾಣಿ ವಾರ್ತೆ
Published 7 ಮೇ 2025, 14:45 IST
Last Updated 7 ಮೇ 2025, 14:45 IST
ಪಟಾಲಮ್ಮ ದೇವಿ ಪಲ್ಲಕ್ಕಿ ರಥೋತ್ಸವಕ್ಕೆ ಸಿದ್ದರಾಮಯ್ಯ ಚಾಲನೆ ನೀಡಿದರು
ಪ್ರಜಾವಾಣಿ ಚಿತ್ರ
ಪಟಾಲಮ್ಮ ದೇವಿ ಪಲ್ಲಕ್ಕಿ ರಥೋತ್ಸವಕ್ಕೆ ಸಿದ್ದರಾಮಯ್ಯ ಚಾಲನೆ ನೀಡಿದರು ಪ್ರಜಾವಾಣಿ ಚಿತ್ರ   

ಬೆಂಗಳೂರು: ಜಯನಗರ 2ನೇ ಬ್ಲಾಕ್‌ನಲ್ಲಿ ಪಟಾಲಮ್ಮ ದೇವಿ ಮಹೋತ್ಸವ, ಹೂವಿನ ಪಲ್ಲಕ್ಕಿ ರಥೋತ್ಸವ ಬುಧವಾರ ವಿಜೃಂಭಣೆಯಿಂದ ನೆರವೇರಿತು.

ಕನಕಪಾಳ್ಯ, ಸಿದ್ದಾಪುರ, ಭೈರಸಂದ್ರ, ಯಡಿಯೂರು ಹಾಗೂ ನಾಗಸಂದ್ರ ಗ್ರಾಮಗಳ ಅಧಿದೇವತೆ ಪಟಾಲಮ್ಮ ದೇವಿ ಮಹೋತ್ಸವ ಪ್ರತಿ ಮೂರು ವರ್ಷಕ್ಕೊಮ್ಮೆ ನಡೆಯುತ್ತದೆ. ಐದು ಗ್ರಾಮಗಳ ಊರಹಬ್ಬದ ನಂತರ ಪಟಾಲಮ್ಮ ದೇವಿ ಮಹೋತ್ಸವ ನಡೆಯಿತು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ ಬೆಳಿಗ್ಗೆ ಜಯನಗರದಲ್ಲಿ ಪಟಾಲಮ್ಮ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ನಂತರ, ಹೂವಿನ ಪಲ್ಲಕ್ಕಿ ರಥೋತ್ಸವಕ್ಕೆ ಚಾಲನೆ ನೀಡಿದರು. 

ADVERTISEMENT

ವೀರಗಾಸೆ, ಬೀಸು ಕಂಸಾಳೆ, ಪಟದ ಕುಣಿತ, ಸೋಮನ ಕುಣಿತ, ನಂದಿ ಧ್ವಜ, ಗೊರವರ ಕುಣಿತ, ನಗಾರಿ, ಜಗ್ಗಲಿಗೆ, ಕರಗ ಕೋಲಾಟ, ಕಂಗಿಲ್‌ ಕುಣಿತ, ಯಕ್ಷ ಗೊಂಬೆಯಾಟ, ಕೀಲು ಕುದುರೆ, ಮರಗಾಲು ಕುಣಿತ ಸೇರಿದಂತೆ ರಾಜ್ಯದ ನಾನಾ ಭಾಗಗಳ 35ಕ್ಕೂ ಹೆಚ್ಚು ಸಾಂಸ್ಕೃತಿಕ ಹಾಗೂ ಜಾನಪದ ತಂಡಗಳು ಪಲ್ಲಕ್ಕಿ ರಥೋತ್ಸವದಲ್ಲಿ ಭಾಗವಹಿಸಿದ್ದವು.

ಕನಕಪಾಳ್ಯ ಗ್ರಾಮದಲ್ಲಿ ಊರಹಬ್ಬದ ಅಂಗವಾಗಿ ಆಂಜನೇಯ ಸ್ವಾಮಿ, ಕನಕೇಶ್ವರಸ್ವಾಮಿ, ಯಲ್ಲಮ್ಮದೇವಿ, ಜೆರಸಲಮ್ಮ, ಕುನ್ನಾಲಘಟ್ಟಮ್ಮ, ನಾಡಮ್ಮ, ಮಿಟ್ಲಿಮರದ ಮುನೇಶ್ವರ, ಚಪಲಮ್ಮ, ಪ್ಲೇಗಮ್ಮ, ಗೋಣಿಮರದ ಮುನೇಶ್ವರ ಸ್ವಾಮಿಗೆ ಮೇ 5ರಿಂದ ಆರತಿ, ಪೂಜೆಯನ್ನು ಗ್ರಾಮಸ್ಥರು ನೆರವೇರಿಸಿದರು.

ಲಾಲ್‌ಬಾಗ್‌ ಸಿದ್ದಾಪುರ ಗ್ರಾಮದ ಕಲ್ಯಾಣಿ ಮಹಾಗಣಪತಿ, ಸೋಮೇಶ್ವರ ಸ್ವಾಮಿ, ರಾಮದೇವರು, ಗ್ರಾಮದೇವತೆ ಪೂಜಮ್ಮ, ಯಲ್ಲಮ್ಮ, ಪಿಳ್ಳೆಕಮ್ಮ ದೇವರ ಉತ್ಸವ ಆಚರಿಸಲಾಯಿತು.

ಭೈರಸಂದ್ರ ಗ್ರಾಮದಲ್ಲಿ ವಿನಾಯಕ, ಆಂಜನೇಯ, ಈಶ್ವರ ಸ್ವಾಮಿಗೆ ಅಭಿಷೇಕ, ಕಾಟುಮರಾಯ ದೇವರಿಗೆ ಬೆಲ್ಲದ ಆರತಿ ನಡೆಯಿತು. ಯಡಿಯೂರು ಗ್ರಾಮದಲ್ಲಿ ಆಂಜನೇಯ ಸ್ವಾಮಿ, ಬಸವಣ್ಣ ದೇವರು, ಮದ್ದೂರಮ್ಮ, ಪಿಳೇಕಮ್ಮ, ಚಪ್ಪಲಮ್ಮ, ಸಲ್ಲಾಪುರದಮ್ಮ, ಗಾಂಧಮ್ಮ ವಿಶೇಷ ಪೂಜೆಗಳು ನಡೆದವು. ನಾಗಸಂದ್ರ ಗ್ರಾಮದ ಆಂಜನೇಯ ಸ್ವಾಮಿ, ಉಪ್ಪಮ್ಮ ದೇವಿ, ಮುನೇಶ್ವರ ಸ್ವಾಮಿ, ಪ್ಲೇಗಮ್ಮ, ದಾಳಮ್ಮ, ಗಂಗಮ್ಮ, ಸಪಲಮ್ಮ, ಚಪ್ಪರದಮ್ಮ ದೇವರಿಗೆ ಆರತಿ, ಪೂಜೆಗಳನ್ನು ನೆರವೇರಿಸಿ ಮೇ 5ರಿಂದ ಊರಹಬ್ಬ ಆಚರಿಸಲಾಯಿತು.

ಈ ಐದು ಗ್ರಾಮಗಳ ಊರಹಬ್ಬದ ನಂತರ, ಅಧಿದೇವತೆ ಪಟಾಲಮ್ಮ ದೇವಿಯ ರಥೋತ್ಸವ ಬುಧವಾರ ನಡೆಯಿತು. ಪಟಾಲಮ್ಮ ದೇವಿಗೆ ಎಲ್ಲ ಊರುಗಳಿಂದ ಮುತ್ತೈದೆಯರು, ಬಾಲಕಿಯರು ಮೆರವಣಿಗೆಯಲ್ಲಿ ಆರತಿಗಳನ್ನು ತಂದು, ದೇವಸ್ಥಾನದ ಬೆಂಕಿ ಕೊಂಡವನ್ನು ಹಾಯ್ದರು ಎಂದು ಶ್ರೀ ಪಟಾಲಮ್ಮ ದೇವಸ್ಥಾನ ಟ್ರಸ್ಟ್‌ನ ಅಧ್ಯಕ್ಷ ಕೆ.ಎಂ. ನಾಗರಾಜ್‌ ಮಾಹಿತಿ ನೀಡಿದರು.

ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್‌, ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ, ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಚ್‌.ಎಂ. ರೇವಣ್ಣ, ವಿಧಾನಪರಿಷತ್‌ನ ಮಾಜಿ ಸದಸ್ಯ ಪಿ.ಆರ್‌. ರಮೇಶ್‌ ಭಾಗವಹಿಸಿದ್ದರು.

ಪಟಾಲಮ್ಮ ಪಲ್ಲಕ್ಕಿ... ಜಯನಗರದ 2ನೇ ಬ್ಲಾಕ್‌ನಲ್ಲಿ ಪಟಾಲಮ್ಮ ಹೂವಿನ ಪಲ್ಲಕ್ಕಿ ರಥೋತ್ಸವ ವಿಜೃಂಭಣೆಯಿಂದ ಬುಧವಾರ ನೆರವೇರಿತು ಪ್ರಜಾವಾಣಿ ಚಿತ್ರ:ರಂಜು ಪಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.