ADVERTISEMENT

ಕಳಪೆ ಮೂಲಸೌಕರ್ಯ– ಜೆ.ಪಿ. ನಗರಚದ ನಿವಾಸಿಗಳ ಸಾತ್ವಿಕ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 27 ಜೂನ್ 2019, 19:30 IST
Last Updated 27 ಜೂನ್ 2019, 19:30 IST
ಜೆಪಿನಗರದ 24ನೇ ಮುಖ್ಯರಸ್ತೆಯಲ್ಲಿ ವಾಹನಗಳು
ಜೆಪಿನಗರದ 24ನೇ ಮುಖ್ಯರಸ್ತೆಯಲ್ಲಿ ವಾಹನಗಳು   

24 ಗಂಟೆಯೂ ವಾಹನಗಳ ಗದ್ದಲ, ಸಂಚಾರ ದಟ್ಟಣೆ, ಕಮರ್ಷಿಯಲ್‌ ಕಟ್ಟಡಗಳು, ಅಲ್ಲಲ್ಲಿ ಗುಂಡಿ ಬಿದ್ದಿರುವ ರಸ್ತೆ, ಎಲ್ಲೆಂದರಲ್ಲಿ ವಾಹನಗಳ ಪಾರ್ಕಿಂಗ್‌, ಫುಟ್‌ಪಾತ್‌ನಲ್ಲಿ ಮುಗಿಯದ ಬೀದಿಬದಿ ವ್ಯಾಪಾರ...

ಈ ಎಲ್ಲದರಿಂದ ಜೆ.ಪಿ ನಗರದ 24ನೇ ಮುಖ್ಯರಸ್ತೆಯ ನಿವಾಸಿಗಳುಬೇಸತ್ತು ಹೋಗಿದ್ದಾರೆ. ಸಹನೆ ಕಳೆದುಕೊಂಡಿಲ್ಲ. ಆದರೆ, ಎಲ್ಲಿಯವರೆಗೆ ಸುಮ್ಮನಿರುವುದು? ಅವರೀಗ ಸಮಸ್ಯೆಗೆ ಪರಿಹಾರ ಬಯಸುತ್ತಿದ್ದಾರೆ. ಶಾಂತಿಯುತ ಪ್ರತಿಭಟನೆಗೆ ಮುಂದಾಗಿದ್ದಾರೆ.

15–20 ವರ್ಷಗಳ ಹಿಂದೆ ಈ ರಸ್ತೆಯಲ್ಲಿ ಮನೆಗಳೇ ಹೆಚ್ಚು ಇದ್ದವು. ಆದರೆ ಮಹಾನಗರದ ಅಭಿವೃದ್ಧಿ ಓಟಕ್ಕೆ ಹಳೆ ಚಹರೆಗಳು ಮಾಯವಾಗಿ ಕಮರ್ಷಿಯಲ್‌ ಕಟ್ಟಡಗಳೇ ಕಾಣುತ್ತಿವೆ.

ADVERTISEMENT

ಜೆ.ಪಿ ನಗರದಬ್ರಿಗೇಡ್‌ ಮಿಲೇನಿಯಮ್‌ ಆರ್ಚ್‌ನಿಂದ ನಂದಿನಿ ಹೋಟೆಲ್‌ ತನಕ ರಸ್ತೆ ಇದೆ. 15 ಸಾವಿರಕ್ಕೂ ಹೆಚ್ಚಿರುವ ಇಲ್ಲಿನ ನಿವಾಸಿಗಳು ದಿನನಿತ್ಯದ ಓಡಾಟಕ್ಕಾಗಿ ಈ ರಸ್ತೆಯನ್ನೇ ಅವಲಂಭಿಸಿದ್ದಾರೆ. ಒಂದೂವರೆ ಕಿಲೋಮೀಟರ್‌ನಷ್ಟು ದೂರ ಹೋಗಬೇಕಾದರೆ ಇಲ್ಲಿ 40ರಿಂದ 45 ನಿಮಿಷ ಬೇಕು.ರಸ್ತೆ ದಾಟಬೇಕಾದರೆ ಕನಿಷ್ಠ 4 ನಿಮಿಷ ಕಾಯಲೇಬೇಕು.

ಕಳಪೆ ಮೂಲಸೌಕರ್ಯ, ಮುಗಿಯದ ಸಂಚಾರ ದಟ್ಟಣೆ, ಪಾರ್ಕಿಂಗ್‌ ಸಮಸ್ಯೆ, ಅಸಮರ್ಪಕ ತ್ಯಾಜ್ಯ ವಿಲೇವಾರಿ ವಿರುದ್ಧ ಇಲ್ಲಿನ ನಿವಾಸಿಗಳುಜೂನ್‌ 29ಕ್ಕೆ ಎಂಎಲ್‌ಆರ್‌ ಜಂಕ್ಷನ್‌ನಿಂದ ನಂದಿನಿ ಹೋಟೆಲ್‌ವರೆಗೆ ಶಾಂತಿಯುತ ಮೆರವಣಿಗೆ ಮಾಡಲಿದ್ದಾರೆ.

‘ಈ ರಸ್ತೆಯಲ್ಲಿ ರೆಸ್ಟೊರೆಂಟ್‌, ಕಮರ್ಷಿಯಲ್‌ ಕಟ್ಟಡಗಳು, ಫಿಟ್‌ನೆಸ್‌ ಸೆಂಟರ್‌ಗಳು, ಸೂಪರ್‌ಮಾರ್ಕೆಟ್‌ಗಳುಅಧಿಕವಾಗಿವೆ. ಇಲ್ಲಿ 15ಕ್ಕೂ ಹೆಚ್ಚು ರೆಸ್ಟೊರೆಂಟ್‌ಗಳಿವೆ. ಇಲ್ಲಿಗೆ ಬರುವ ಗ್ರಾಹಕರು ರಸ್ತೆಯಲ್ಲೇ ಅಡ್ಡಾದಿಡ್ಡಿ ಗಾಡಿ ನಿಲ್ಲಿಸುತ್ತಾರೆ. ಕಿರಿದಾದ ರಸ್ತೆಯಲ್ಲಿಎರಡೂ ಕಡೆಯಿಂದ ವಾಹನಗಳು ಓಡಾಡುತ್ತವೆ.ಅಗಲೀಕರಣ, ಫುಟ್‍ಪಾತ್‌ ಸರಿಪಡಿಸುವುದು ಅಂತೆಲ್ಲ ರಸ್ತೆಯನ್ನು ಆಗಾಗ ಅಗೆದು ಹಾಕುವುದು ಇಲ್ಲಿ ಮಾಮೂಲು. ಎಲ್ಲಕ್ಕಿಂತ ಮುಖ್ಯವಾಗಿ ಇಲ್ಲಿ ಟ್ರಾಫಿಕ್‌ನದೇ ಸಮಸ್ಯೆ’ ಎಂದು ವಿವರಣೆ ನೀಡಿದರು ಇಲ್ಲಿನ ನಿವಾಸಿ ರೂಪಾ ಶ್ರೀಧರ್‌.

ಈ ರಸ್ತೆ ಕನಕಪುರ ಹಾಗೂ ಬನ್ನೇರುಘಟ್ಟ ಮುಖ್ಯರಸ್ತೆಗೆ ಹೋಗಲು ಕಾಲುದಾರಿಯಾಗಿರುವುದು ಇಲ್ಲಿ ಟ್ರಾಫಿಕ್‌ ಹೆಚ್ಚಾಗಲು ಕಾರಣ. ಜೆ.ಪಿ ನಗರದ ಮುಖ್ಯರಸ್ತೆ ಹಾಗೂ ಬನಶಂಕರಿ ಜಂಕ್ಷನ್‌ನಲ್ಲಿನಸಂಚಾರದಟ್ಟಣೆಯನ್ನು ತಪ್ಪಿಸುವ ಸಲುವಾಗಿ ಜನರುಈ ರಸ್ತೆ ಮೂಲಕ ಅರಕೆರೆ– ಮೈಕೋಲೇಔಟ್‌ ಮೂಲಕ ಬನ್ನೇರುಘಟ್ಟ ರಸ್ತೆ ಹಾಗೂ ಕನಕಪುರ ರಸ್ತೆಗೆ ತೆರಳುತ್ತಾರೆ. ಹಾಗಾಗಿ ಪೀಕ್‌–ಅವರ್‌ನಲ್ಲಿ ಇಲ್ಲಿ ಸಂಚಾರದಟ್ಟಣೆ ಉಂಟಾಗುತ್ತದೆ.

ಎಸ್‌ಎಲ್‌ವಿ ಜಂಕ್ಷನ್‌ ಸಮೀಪ ರಸ್ತೆ ಕಿರಿದಾಗಿದ್ದು, ಖಾಸಗಿ ಬಸ್‌ಗಳು ಇಲ್ಲಿ ಓಡಾಡುತ್ತವೆ. ಇತ್ತೀಚೆಗೆ ಈ ರಸ್ತೆ ಹೆದ್ದಾರಿಯಂತಾಗಿದ್ದು, ಖಾಸಗಿ ವಾಹನ, ಭಾರಿ ವಾಹನಗಳೂ ಓಡಾಟ ಆರಂಭಿಸಿವೆ. ಈ ಏರಿಯಾದಲ್ಲಿ ಎರಡು ದೊಡ್ಡ ಕನ್ವೆನ್ಷನ್‌ ಸೆಂಟರ್‌ಗಳಿದ್ದು, ಆ ಕಟ್ಟಡದಲ್ಲಿ ಪಾರ್ಕಿಂಗ್‌ ವ್ಯವಸ್ಥೆ ಇಲ್ಲ ಎಂದು ನಿವಾಸಿಗಳು ಸಂಕಷ್ಟ ತೋಡಿಕೊಳ್ಳುತ್ತಾರೆ.

‘ಶಾಲೆಯಿಂದ 100 ಮೀಟರ್‌ ಸುತ್ತಮುತ್ತ ಮದ್ಯದಂಗಡಿಗಳು ಇರುವಂತಿಲ್ಲ. ಆದರೆ ಇಲ್ಲಿ ಶಾಲೆ ಸಮೀಪವೇ ಬಾರ್‌ ಮತ್ತು ರೆಸ್ಟೊರೆಂಟ್‌ಗಳಿವೆ’ ಎಂಬುದು ಪ್ರಫುಲ್‌ ದಂಬಲ್‌ ಅವರ ಆತಂಕ.

ಉತ್ತಮ ರಸ್ತೆ, ರಸ್ತೆಯ ಎರಡೂ ಕಡೆ ಪಾರ್ಕಿಂಗ್‌ ನಿಷೇಧ, ತ್ಯಾಜ್ಯ ವಿಲೇವಾರಿ, ಬೀದಿಬದಿ ವ್ಯಾಪಾರಕ್ಕೆ ನಿಯಂತ್ರಣ– ಇವು ಈ ಏರಿಯಾದ ನಿವಾಸಿಗಳ ಬೇಡಿಕೆ. ಶಾಂತಿಯುತ ಮೆರವಣಿಗೆ ಮಾಡುವುದರಿಂದ ಅಧಿಕಾರಿಗಳು ಇತ್ತ ಗಮನಹರಿಸಿ ಸಮಸ್ಯೆಯನ್ನು ಕೊಂಚ ಬಗೆಹರಿಸಬಹುದು, ಇಲ್ಲಿನ ಕೆಲ ಅಪಾಯಕಾರಿ ಅಡ್ಡರಸ್ತೆಗಳಲ್ಲಿ ಸಂಚಾರ ಪೊಲೀಸರನ್ನು ನೇಮಕ ಮಾಡಬಹುದು ಎಂಬ ನಿರೀಕ್ಷೆ ಈ ನಿವಾಸಿಗಳದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.