ADVERTISEMENT

ಇತಿಹಾಸದ ಪುಟ ಸೇರಿದ ಸುರಂಗ ಮಾರ್ಗಗಳು...

ಕತ್ತಲೆಯ ಗವಿಯಾದವು ಪಾದಚಾರಿ ಕೆಳಸೇತುವೆ l ಅವ್ಯವಸ್ಥೆಯ ಗೂಡಾಗಿರುವ ಸಬ್‌ವೇಗಳು

ವಿಜಯಕುಮಾರ್ ಎಸ್.ಕೆ.
Published 1 ಸೆಪ್ಟೆಂಬರ್ 2019, 19:42 IST
Last Updated 1 ಸೆಪ್ಟೆಂಬರ್ 2019, 19:42 IST
ಮಹಾರಾಣಿ ಕಾಲೇಜು ಮುಂಭಾಗದಲ್ಲಿರುವ ಶೇಷಾದ್ರಿ ರಸ್ತೆಯ ಪಾದಚಾರಿ ಸುರಂಗ ಮಾರ್ಗದ ಚಾವಣಿಯ ಹೊದಿಕೆ ಹಾರಿ ಹೋಗಿರುವುದು
ಮಹಾರಾಣಿ ಕಾಲೇಜು ಮುಂಭಾಗದಲ್ಲಿರುವ ಶೇಷಾದ್ರಿ ರಸ್ತೆಯ ಪಾದಚಾರಿ ಸುರಂಗ ಮಾರ್ಗದ ಚಾವಣಿಯ ಹೊದಿಕೆ ಹಾರಿ ಹೋಗಿರುವುದು   

ಬೆಂಗಳೂರು: ‘ಒಂದಾನೊಂದು ಕಾಲದಲ್ಲಿ ಬೆಂಗಳೂರಿನಲ್ಲಿ ರಸ್ತೆಗಳನ್ನು ದಾಟಲು ಜನ ಸುರಂಗ ಮಾರ್ಗಗಳನ್ನು ಬಳಸುತ್ತಿದ್ದರು...!’

ಬಿಬಿಎಂಪಿ ವ್ಯಾಪ್ತಿಯ ಪಾದಚಾರಿ ಸುರಂಗಗಳ ಕುರಿತು ಈ ರೀತಿಯಾಗಿ ಮುಂದಿನ ಪೀಳಿಗೆಗೆ ಪರಿಚಯ ಮಾಡಿಸುವ ಕಾಲ ದೂರ ಇಲ್ಲ. ಏಕೆಂದರೆ ನಗರದಲ್ಲಿರುವ ಬಹುತೇಕ ಪಾದಚಾರಿ ಸುರಂಗಗಳು ಈಗಾಗಲೇ ಇತಿಹಾಸದ ಪುಟ ಸೇರಿದ ಸ್ಥಿತಿ ತಲುಪಿವೆ. ಕೋಟಿಗಟ್ಟಲೆ ರೂಪಾಯಿ ವೆಚ್ಚ ಮಾಡಿ ನಿರ್ಮಿಸಿರುವ ಈ ಸುರಂಗಗಳು ಜನಬಳಕೆಯಲ್ಲಿಲ್ಲ. ಬಹುತೇಕ ಸುರಂಗಗಳಿಗೆ ಬಿಬಿಎಂಪಿ ಬೀಗ ಜಡಿದಿದೆ.

ಮೈಮೇಲೆ‌ ನುಗ್ಗುವ ವಾಹನಗಳ ನಡುವೆ ರಸ್ತೆ ದಾಟಲು ಪಾದಚಾರಿಗಳು ಪರದಾಡುವುದನ್ನು ತಪ್ಪಿಸಲು ನಿರ್ಮಿಸಿದ ಈ ಸುರಂಗ ಮಾರ್ಗಗಳು ಅಕ್ಷರಶಃ ಕಗ್ಗತ್ತಲೆಯ ಗೂಡಾಗಿವೆ.

ADVERTISEMENT

ಒಂದಿಲ್ಲೊಂದು ಕಾರಣಕ್ಕೆ ಒಂದೆಡೆಯಿಂದ ಮತ್ತೊಂದೆಡೆಗೆ ಸಂಚರಿಸಲು ಸಿಲಿಕಾನ್ ಸಿಟಿಯ ಜನರು ನಿತ್ಯ ತಿಣುಕಾಡುತ್ತಾರೆ. ವಾಹನ ಸವಾರರಿಗೆ ತಮ್ಮ ಗುರಿ ತಲುಪುವ ಅವಸರವಾದರೆ, ಪಾದಚಾರಿಗಳಿಗೆ ರಸ್ತೆ ದಾಟುವ ಧಾವಂತ.

ವಾಹನ ಸಂಚಾರ ಕಡಿಮೆ ಇರುವಾಗ ಧೈರ್ಯ ಮಾಡಿ ರಸ್ತೆ ದಾಟೋಣವೆಂದರೆ ಅದಕ್ಕೂ ಅಡ್ಡಿಗಳಿವೆ. ರಸ್ತೆ ವಿಭಜಕಗಳನ್ನು ಎಲ್ಲೆಡೆ ಎದೆ ಮಟ್ಟಕ್ಕೆ ಎತ್ತರಿಸಲಾಗಿದೆ. ಅವುಗಳನ್ನು ದಾಟುವುದು ಅಸಾಧ್ಯ. ರಸ್ತೆ ದಾಟಲು ಝಿಬ್ರಾ ಕ್ರಾಸಿಂಗ್‌ ತಲುಪಲು ಕಿಲೋ ಮೀಟರ್‌ಗಟ್ಟಲೆ ನಡೆದು ಹೋಗಬೇಕು. ಹಸಿರು ದೀಪ ಮಿನುಗುವವರೆಗೆ ಅಲ್ಲಿ ಕಾದು ನಿಲ್ಲಬೇಕು.

ಪಾದಚಾರಿ ದಾಟಲು ಹಸಿರು ದೀಪ ಇದ್ದರೂ, ವಾಹನಗಳು ನಿಲ್ಲುವುದೇ ಇಲ್ಲ. ನಿಂತರೂ ಪಾದಚಾರಿ ದಾಟಲು ಇರುವ ಜೀಬ್ರಾ ಕ್ರಾಸಿಂಗ್ ಮೇಲೆಯೇ ನಿಲ್ಲುತ್ತವೆ. ಹೀಗಾಗಿ ಪಾದಚಾರಿಯ ಪರದಾಟ ಹೇಳ ತೀರದು. ಪಾದಚಾರಿಗಳಿಗೆ, ವಾಹನ ಸವಾರರಿಗೆ ಕಿರಿಕಿರಿ ಆಗದಂತೆ ಪಾಲಿಕೆ ಅಲ್ಲಲ್ಲಿ ಪಾದಚಾರಿ ಸುರಂಗ ಮಾರ್ಗಗಳನ್ನು (ಸಬ್‌ವೇ) ನಿರ್ಮಿಸಿತ್ತು.

ಸರಿಯಾದ ನಿರ್ವಹಣೆ ಇಲ್ಲದೇ ಈ ಸುರಂಗ ಮಾರ್ಗಗಳು ಅವ್ಯವಸ್ಥೆಯ ಗೂಡಾಗಿವೆ. ರಾಜಭವನ ರಸ್ತೆ, ರೇಸ್‌ಕೋರ್ಸ್ ರಸ್ತೆ, ಬಸವೇಶ್ವರರಸ್ತೆ, ಕೆ.ಆರ್. ವೃತ್ತ, ನೃಪತುಂಗ ರಸ್ತೆಯಲ್ಲಿರುವ ಸುರಂಗ ಮಾರ್ಗಗಳಿಗೆ ಬೀಗ ಹಾಕಿ ವರ್ಷಗಳೇ ಕಳೆದಿವೆ. ಹಾಗಾಗಿ ರಸ್ತೆ ದಾಟಲು ಜನರು ಮತ್ತೆ ಸಿಗ್ನಲ್‌ಗಳ ಬಳಿ ಕಾದು ನಿಲ್ಲುವ ಪರಿಸ್ಥಿತಿ ಎದುರಾಗಿದೆ.

ಮಹಾರಾಣಿ ಕಾಲೇಜು ಮುಂಭಾಗದ ಪಾದಚಾರಿ ಸುರಂಗ ಮಾರ್ಗಕ್ಕೆ ಬೀಗ ಹಾಕಿರುವುದು

ಕೆಲವು ಸುರಂಗ ಮಾರ್ಗಗಳಿಗೆ ಪಾಲಿಕೆ ಇನ್ನೂ ಬೀಗ ಹಾಕಿಲ್ಲ. ಆದರೆ, ಅವು ಗಬ್ಬು ನಾರುತ್ತಿದ್ದು, ಜನಬಳಕೆಗೆ ಯೋಗ್ಯವಾಗಿಲ್ಲ. ಸದ್ಯ ಇವುಗಳು ಪಾದಚಾರಿಗಳಿಗೆ ‌ಅನುಕೂಲ ಕಲ್ಪಿಸುವುದಕ್ಕಿಂತ ಕಳ್ಳಕಾಕರಿಗೆ ಮತ್ತು ಅನೈತಿಕ ಚಟುವಟಿಕೆ ನಡೆಸುವವರಿಗೆ ಹೇಳಿ ಮಾಡಿಸಿದ ಸ್ಥಳಗಳಾ ಮಾರ್ಪಟ್ಟಿವೆ.

ಇವುಗಳ ನಿರ್ವಹಣೆ ಬಗ್ಗೆ ಆರಂಭದಲ್ಲಿ ಆಸಕ್ತಿ ತೋರಿದ್ದ ಬಿಬಿಎಂಪಿ ಕ್ರಮೇಣ ಇವು ತನ್ನ ಸ್ವತ್ತು ಎಂಬುದನ್ನೇ ಮರೆತಿದೆ. ಯಮನ ರೂಪದಲ್ಲಿ ನುಗ್ಗುವ ವಾಹನಗಳ ನಡುವೆ ಜೀವ ಕೈಯಲ್ಲಿ ಹಿಡಿದು ರಸ್ತೆಯನ್ನು ಪಾದಚಾರಿಗಳು ದಾಟುತ್ತಿದ್ದಾರೆ. ಮಹಿಳೆಯರು, ವೃದ್ಧರು, ಅಂಗವಿಕಲರು ಮತ್ತು ಮಕ್ಕಳ ರಸ್ತೆ ದಾಟಲು ಹರಸಾಹಸವನ್ನೇ ಪಡ
ಬೇಕಿದೆ. ನಗರದಲ್ಲಿ ಹೊಸತಾಗಿ ನೂರಾರು ಸ್ಕೈವಾಕ್‌ಗಳನ್ನು ನಿರ್ಮಿಸಲು ಆಸಕ್ತಿ ತೋರುವ ಪಾಲಿಕೆಗೆ ತಾನೇ ನಿರ್ಮಿಸಿದ ಪಾದಚಾರಿ ಸುರಂಗ ಮಾರ್ಗಗಳನ್ನು ಮರೆತಿರುವುದು ವಿಪರ್ಯಾಸ ಎನ್ನುತ್ತಾರೆ ಸಾರ್ವಜನಿಕರು.

‘ಸುಸ್ಥಿತಿಯಲ್ಲಿಟ್ಟರೆ ಜನ ಬಳಸುತ್ತಾರೆ’

ಪಾದಚಾರಿ ಸುರಂಗ ಮಾರ್ಗಗಳನ್ನು ಚೆನ್ನಾಗಿ ನಿರ್ವಹನೆ ಮಾಡಿದರೆ ಜನ ಅವುಗಳನ್ನು ಬಳಸುತ್ತಾರೆ ಎಂಬುದಕ್ಕೆ ಕೆ.ಆರ್‌.ಮಾರುಕಟ್ಟೆ ಬಳಿಯ ಸುರಂಗ ಮಾರ್ಗವೇ ಸಾಕ್ಷಿ. ‘ಈ ಪಾದಚಾರಿ ಸುರಂಗ ಮಾರ್ಗವು ಕಸದ ತೊಟ್ಟಿಯಂತಿತ್ತು. ಮೇಯರ್‌ ಆದ ಬಳಿಕ ಇಲ್ಲಿಗೆ ಭೇಟಿ ನೀಡಿ ಪರಿಶೀಲಿಸಿದ್ದ ಗಂಗಾಂಬಿಕೆ ಅವರು ಸುರಂಗ ಮಾರ್ಗವನ್ನು ಸುಸ್ಥಿತಿಯಲ್ಲಿಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು. ಅಷ್ಟಕ್ಕೇ ಬಿಡದೆ ಆಗಾಗ್ಗೆ ದಿಢೀರ್‌ ಭೇಟಿ ನೀಡಿ ಪರಿಶೀಲಿಸಿದ್ದರು. ಹಾಗಾಗಿ ಈ ಸುರಂಗವೂ ಸ್ವಚ್ಛತೆ ಕಾಣುವಂತಾಯಿತು. ‘ಈಗ ಈ ಸುರಂಗವನ್ನು ಹಿಂದಿಗಿಂತ ಹೆಚ್ಚು ಸಂಖ್ಯೆಯಲ್ಲಿ ಜನ ಬಳಸುತ್ತಾರೆ’ ಎನ್ನುತ್ತಾರೆ ವ್ಯಾಪಾರಿ ಇರ್ಷಾದ್‌.

ಮರು ಚಾಲನೆಗೆ ಸೂಚನೆ

‘ಬಾಗಿಲು ಮುಚ್ಚಿರುವ ಪಾದಚಾರಿ ಸುರಂಗ ಮಾರ್ಗಗಳ ಮರು ಚಾಲನೆಗೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ’ ಎಂದು ಮೇಯರ್ ಗಂಗಾಂಬಿಕೆ ತಿಳಿಸಿದರು.

‘ದುರ್ಬಳಕೆ ಆಗಬಾರದು ಎಂಬ ಕಾರಣಕ್ಕೆ ಇವುಗಳನ್ನು ಮುಚ್ಚಲಾಗಿದೆ. ಎಷ್ಟು ಕಡೆ ಮುಚ್ಚಲಾಗಿದೆ ಎಂಬುದನ್ನು ಪಟ್ಟಿ ಮಾಡಿ ವಿದ್ಯುತ್ ದೀಪ, ಸಿಸಿಟಿವಿ ಕ್ಯಾಮರಾ ಅಳವಡಿಸಲು ಪ್ರಧಾನ ರಸ್ತೆ ವಿಭಾಗದ ಮುಖ್ಯ ಎಂಜಿನಿಯರ್‌ಗೆ ತಿಳಿಸಿದ್ದೇನೆ’ ಎಂದು ‘ಪ್ರಜಾವಾಣಿ’ಗೆ ವಿವರಿಸಿದರು.

ಅಂಬೇಡ್ಕರ್ ಬೀದಿಯಲ್ಲಿ ಬಾಗಿಲು ಮುಚ್ಚಿರುವ ಪಾದಚಾರಿ ಸುರಂಗ ಮಾರ್ಗ–ಪ್ರಜಾವಾಣಿ ಚಿತ್ರ /ರಂಜು ಪಿ.

‘ಪಾದಚಾರಿಗಳಿಗೆ ಅನುಕೂಲ ಆಗಬೇಕೆ ಹೊರತು ದುರ್ಬಳಕೆ ಆಗಬಾರದು. ಇವುಗಳ ಕಾವಲಿಗೆ ಬಿಬಿಎಂಪಿಯಿಂದ ಭದ್ರತಾ ಸಿಬ್ಬಂದಿಯನ್ನೂ ನಿಯೋಜಿಸಲಾಗುವುದು’ ಎಂದರು.

ಅನೈತಿಕ ಚಟುವಟಿಕೆಯ ತಾಣ

ಮಹಾರಾಣಿ ಕಾಲೇಜು ಬಳಿ ಇರುವ ಸುರಂಗ ಮಾರ್ಗ ಮುಚ್ಚಿದ್ದರೂ, ಅನೈತಿಕ ಚಟುವಟಿಕೆಯ ತಾಣವಾಗಿ ಮಾರ್ಪಟ್ಟಿದೆ. ಸುರಂಗ ಮಾರ್ಗದ ಛಾವಣಿಯ ಹೊದಿಕೆ ಮಳೆ, ಗಾಳಿಗೆ ಹಾರಿ ಹೋಗಿದೆ. ಅನೈತಿಕ ಚಟುವಟಿಕೆ ನಡೆಸುವವರು ಇದನ್ನೇ ಕೆಲವರು ಕಳ್ಳಗಿಂಡಿಯನ್ನಾಗಿ ಮಾಡಿಕೊಂಡು ಸುರಂಗದೊಳಗೆ ಇಳಿಯುತ್ತಿದ್ದಾರೆ ಎನ್ನುತ್ತಾರೆ ಪಾದಚಾರಿಗಳು. ಈ ರಸ್ತೆಯಲ್ಲಿ ಸದಾ ವಾಹನ ದಟ್ಟಣೆ ಇರುತ್ತದೆ. ಸುರಂಗ ಮಾರ್ಗವನ್ನು ಸಮರ್ಪಕವಾಗಿ ನಿರ್ವಹಣೆ ಮಾಡಿದರೆ ಜನ ಬಳಸಿಕೊಳ್ಳುತ್ತಾರೆ ಎಂಬುದು ಪಾದಚಾರಿಗಳ ಅಭಿಪ್ರಾಯ.

ಸುರಂಗ ಮಾರ್ಗಗಳಿರುವ ಪ್ರಮುಖ ಸ್ಥಳಗಳು

* ರಾಜಭವನ ರಸ್ತೆಯ ಬಸವೇಶ್ವರ ವೃತ್ತ

* ಬಸವೇಶ್ವರ ರಸ್ತೆ

* ಕೆ.ಆರ್.ವೃತ್ತದ ವಿಶ್ವೇಶ್ವರಯ್ಯ ಎಂಜಿನಿಯರಿಂಗ್ ಕಾಲೇಜು

* ನೃಪತುಂಗ ರಸ್ತೆಯ ಸರಕಾರಿ ವಿಜ್ಞಾನ ಕಾಲೇಜು

* ನೃಪತುಂಗ ರಸ್ತೆಯ ಸೇಂಟ್‌ ಮಾರ್ಥಾಸ್ ಆಸ್ಪತ್ರೆ

* ಶೇಷಾದ್ರಿ ರಸ್ತೆಯ ಮಹಾರಾಣಿ ಕಾಲೇಜು ಬಳಿ

* ಅಂಬೇಡ್ಕರ್ ಬೀದಿಯಲ್ಲಿನ ಬಹುಮಹಡಿ ಕಟ್ಟಡ ಸಮೀಪ

* ಕಬ್ಬನ್‌ಪಾರ್ಕ್ ರಸ್ತೆ

* ಮಿಲ್ಲರ್ಸ್‌ ರಸ್ತೆ

* ವಿಜಯನಗರ ಬಸ್ ನಿಲ್ದಾಣ

* ಹೆಬ್ಬಾಳ

* ಆನಂದನಗರ, ಬಳ್ಳಾರಿ ರಸ್ತೆ

* ಮೆಜೆಸ್ಟಿಕ್ ಬಸ್ ನಿಲ್ದಾಣ

* ಕೆ.ಆರ್.ಮಾರುಕಟ್ಟೆ

*ಪುರಭವನದ ಎದುರು

* ಮಲ್ಲೇಶ್ವರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.