ADVERTISEMENT

ಜಯದೇವ:ಹೃದಯ ಕಾಯಿಲೆಯಿಂದ ಬಳಲುತ್ತಿದ್ದ ಫಿಲಿಪ್ಪೀನ್ಸ್‌ ಮಗುವಿಗೆ ಶಸ್ತ್ರಚಿಕಿತ್ಸೆ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2025, 16:10 IST
Last Updated 26 ನವೆಂಬರ್ 2025, 16:10 IST
ಮಗು ಹಾಗೂ ಆಕೆಯ ತಾಯಿಗೆ ವೈದ್ಯರ ತಂಡ ಶುಭಹಾರೈಸಿತು. ಸಂಸ್ಥೆಯ ನಿರ್ದೇಶಕ ಡಾ.ಬಿ. ದಿನೇಶ್ ಉಪಸ್ಥಿತರಿದ್ದರು
ಮಗು ಹಾಗೂ ಆಕೆಯ ತಾಯಿಗೆ ವೈದ್ಯರ ತಂಡ ಶುಭಹಾರೈಸಿತು. ಸಂಸ್ಥೆಯ ನಿರ್ದೇಶಕ ಡಾ.ಬಿ. ದಿನೇಶ್ ಉಪಸ್ಥಿತರಿದ್ದರು   

ಬೆಂಗಳೂರು: ಜನ್ಮಜಾತ ಹೃದಯ ಕಾಯಿಲೆಯಿಂದ ಬಳಲುತ್ತಿದ್ದ ಫಿಲಿಪ್ಪೀನ್ಸ್‌ನ ಎರಡು ವರ್ಷದ ಮಗುವಿಗೆ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಯಶಸ್ವಿ ತೆರೆದ ಹೃದಯ ಶಸ್ತ್ರಚಿಕಿತ್ಸೆ ನಡೆಸಲಾಗಿದೆ.

ಅವಿಯನ್ನೈನ್ ಜೇಡ್ ಅಮೊರೊಸೊ ರೆ ಹೆಸರಿನ ಮಗುವು ‘ಟೆಟ್ರಾಲಜಿ ಆಫ್ ಫಲ್ಲಾಟ್ (ಟಿಒಎಫ್)’ ರೋಗದಿಂದ ಬಳಲುತ್ತಿತ್ತು. ಫಿಲಿಪ್ಪೀನ್ಸ್‌ ಹಾರ್ಟ್ ಸೆಂಟರ್‌ನಲ್ಲಿ ನಡೆಸಲಾದ ತಪಾಸಣೆಯಲ್ಲಿ ಈ ರೋಗ ದೃಢಪಟ್ಟಿತ್ತು. ಅಲ್ಲಿ ಅಗತ್ಯ ಚಿಕಿತ್ಸಾ ಸೌಲಭ್ಯ ಲಭ್ಯವಿರದ ಕಾರಣ, ರೋಟರಿ ಸಂಸ್ಥೆಯ ನೆರವಿನಿಂದ ಮಗುವನ್ನು ಇಲ್ಲಿಗೆ ಕರೆತರಲಾಗಿತ್ತು. ರಿಯಾಯಿತಿ ದರದಲ್ಲಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ ಎಂದು ಸಂಸ್ಥೆ ತಿಳಿಸಿದೆ.  

‘ಸಂಸ್ಥೆಗೆ ದಾಖಲಾದ ಸಂದರ್ಭದಲ್ಲಿ ಮಗು ತೀವ್ರ ಉಸಿರಾಟದ ಸಮಸ್ಯೆ, ಸೈನೋಸಿಸ್ ಹಾಗೂ ತೀವ್ರ ದಣಿವಿನಿಂದ ಬಳಲಿತ್ತು. ವೈದ್ಯಕೀಯ ತಪಾಸಣೆ ವೇಳೆ ರಕ್ತದಲ್ಲಿನ ಆಮ್ಲಜನಕ ಪ್ರಮಾಣ ಶೇ 75 ರಷ್ಟಿತ್ತು. ನ.1ರಂದು ದಾಖಲಾದ ಮಗುವಿಗೆ ಅಗತ್ಯ ಪರೀಕ್ಷೆಗಳನ್ನು ನಡೆಸಿ, ನ.10ರಂದು ತೆರೆದ ಹೃದಯ ಶಸ್ತ್ರಚಿಕಿತ್ಸೆ ನಡೆಸಲಾಯಿತು. ಚಿಕಿತ್ಸೆ ನಂತರ ಮಗುವಿನ ಆರೋಗ್ಯ ಸಂಪೂರ್ಣ ಸುಧಾರಿಸಿದ್ದು, ನ.26ರಂದು ಸಂಸ್ಥೆಯಿಂದ ಮಗು ತೆರಳಿದೆ’ ಎಂದು ಸಂಸ್ಥೆಯ ನಿರ್ದೇಶಕ ಡಾ.ಬಿ. ದಿನೇಶ್ ಹೇಳಿದ್ದಾರೆ. 

ADVERTISEMENT

‘ರೋಟರಿ ಬೆಂಗಳೂರು ಮಿಡ್‌ಟೌನ್, ರೋಟರಿ ನೀಡಿ ಹಾರ್ಟ್ ಫೌಂಡೇಷನ್ ಮತ್ತು ಸಂಸ್ಥೆಯ ಸಹಯೋಗದಲ್ಲಿ ರಿಯಾಯಿತಿ ದರದಲ್ಲಿ ಮಗುವಿಗೆ ಚಿಕಿತ್ಸೆ ನೀಡಲಾಗಿದೆ’ ಎಂದು ತಿಳಿಸಿದ್ದಾರೆ.

ಮಕ್ಕಳ ಹೃದ್ರೋಗ ತಜ್ಞರಾದ ಡಾ. ಜಯರಂಗನಾಥ, ಡಾ.ಪಿ.ಕೆ. ಸುನೀಲ್, ಡಾ. ರಶ್ಮಿ ಎ. ಕೋಟೆಚಾ, ಡಾ. ಹರೀಶ್ ಮಹಾಬಲ ಮುಖ್ರಿ ಹಾಗೂ ಹೃದಯದ ಅರಿವಳಿಕೆ ತಜ್ಞೆ ಡಾ. ಪರಿಮಳ ಪ್ರಸನ್ನ ಸಿಂಹ ಅವರನ್ನು ಒಳಗೊಂಡು ವೈದ್ಯರ ತಂಡ ಈ ಶಸ್ತ್ರಚಿಕಿತ್ಸೆ ನಡೆಸಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.