ADVERTISEMENT

ದಾಸರಹಳ್ಳಿ: ಮರ ಕಡಿಯಬೇಡಿ, ವಿದ್ಯಾರ್ಥಿಗಳಿಂದ ಅಪ್ಪಿಕೊ ಚಳವಳಿ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2021, 16:34 IST
Last Updated 9 ಸೆಪ್ಟೆಂಬರ್ 2021, 16:34 IST
ರಸ್ತೆ ವಿಸ್ತರಣೆಗಾಗಿ ಮರ ಕಡಿಯಬಾರದು ಎಂದು ಒತ್ತಾಯಿಸಿ ಅಬ್ಬಿಗೆರೆ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಅಪ್ಪಿಕೊ ಚಳವಳಿ ನಡೆಸಿದರು 
ರಸ್ತೆ ವಿಸ್ತರಣೆಗಾಗಿ ಮರ ಕಡಿಯಬಾರದು ಎಂದು ಒತ್ತಾಯಿಸಿ ಅಬ್ಬಿಗೆರೆ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಅಪ್ಪಿಕೊ ಚಳವಳಿ ನಡೆಸಿದರು    

ದಾಸರಹಳ್ಳಿ: ಅಬ್ಬಿಗೆರೆಯಿಂದ ಚಿಕ್ಕಬಾಣಾವರ ನಡುವಿನ ಮುಖ್ಯ ರಸ್ತೆ ವಿಸ್ತರಣೆಗಾಗಿ ಮರಗಳನ್ನು ಕಡಿಯಬಾರದು ಎಂದು ಅಬ್ಬಿಗೆರೆ ಶಾಲಾ ವಿದ್ಯಾರ್ಥಿಗಳು ಮರಗಳನ್ನು ತಬ್ಬಿಕೊಳ್ಳುವ ಮೂಲಕ (ಅಪ್ಪಿಕೊ ಚಳವಳಿ) ಪ್ರತಿಭಟನೆ ನಡೆಸಿದರು.

ಬಿಬಿಎಂಪಿಯ ಶೆಟ್ಟಿಹಳ್ಳಿ ವಾರ್ಡ್‌ನ ವ್ಯಾಪ್ತಿಯಲ್ಲಿರುವ ಅಬ್ಬಿಗೆರೆ ಸರ್ಕಾರಿ ಶಾಲೆಯ ಆವರಣದಲ್ಲಿನ ಮರಗಳನ್ನು ಕಡಿಯಲು ಬಿಬಿಎಂಪಿ ಸಿಬ್ಬಂದಿ ಮುಂದಾದಾಗ ಮರಗಳನ್ನು ಅಪ್ಪಿಕೊಂಡ ವಿದ್ಯಾರ್ಥಿಗಳು ಅವುಗಳನ್ನು ಕಡಿಯದಂತೆ ತಡೆದರು. ಶಾಲಾ ಮಕ್ಕಳಿಗಾಗಿ ಮೀಸಲಿಟ್ಟಿರುವ ಮೈದಾನವನ್ನು ಯಾವುದೇ ಕಾರಣಕ್ಕೂ ರಸ್ತೆ ಅಭಿವೃದ್ಧಿಗೆ ಬಳಸಬಾರದು ಎಂದು ಒತ್ತಾಯಿಸಿದರು.

‘ಶಾಲೆ ಆವರಣದಲ್ಲಿ ನೂರಾರು ಮರಗಳಿವೆ. ನಮ್ಮ ಹಿರಿಯ ವಿದ್ಯಾರ್ಥಿಗಳು ಮೈಲು ದೂರದಿಂದ ನೀರು ಹೊತ್ತು ತಂದು ಇವುಗಳನ್ನು ಬೆಳೆಸಿದ್ದಾರೆ. ಈಗ ರಸ್ತೆ ವಿಸ್ತರಣೆಗಾಗಿ ಅವುಗಳನ್ನು ಕಡಿಯದಂತೆ ಅಧಿಕಾರಿಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸೂಚನೆ ನೀಡಬೇಕು’ ಎಂದು ವಿದ್ಯಾರ್ಥಿಗಳು ಮನವಿ ಮಾಡಿದರು.

ADVERTISEMENT

‘ಶಾಲಾ ಆವರಣದಲ್ಲಿರುವ ಮರಗಳನ್ನು ತೆರವುಗೊಳಿಸುವ ಕುರಿತು ಶಿಕ್ಷಣ ಇಲಾಖೆಯಾಗಲಿ ಅಥವಾ ಅರಣ್ಯ ಇಲಾಖೆಯಾಗಲಿ ಯಾವುದೇ ಸೂಚನೆ ಅಥವಾ ನೋಟಿಸ್ ನೀಡಿಲ್ಲ’ ಎಂದು ಶಿಕ್ಷಕರು ತಿಳಿಸಿದರು.

‘ಈ ಬಗ್ಗೆ ಪಾಲಿಕೆ ಅಧಿಕಾರಿಗಳನ್ನು ಸಂಪರ್ಕಿಸಿದರೂ ಯಾವುದೇ ಸ್ಪಂದನೆ ನೀಡಲಿಲ್ಲ’ ಎಂದು ಅಸಮಧಾನ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.