ADVERTISEMENT

ಪೇಜಾವರ ಶ್ರೀಗೆ ನುಡಿನಮನ

ಸ್ವಾಮೀಜಿ ಬದುಕಿನ ವಿವಿಧ ಘಟನೆಗಳನ್ನು ನೆನಪಿಸಿದ ಛಾಯಾಚಿತ್ರ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 11 ಜನವರಿ 2020, 22:05 IST
Last Updated 11 ಜನವರಿ 2020, 22:05 IST
ಕಾರ್ಯಕ್ರಮದಲ್ಲಿ (ಎಡದಿಂದ) ಬಾಬಾ ರಾಮ್‌ದೇವ್, ಬಿ.ಎಸ್‌.‌ ಯಡಿಯೂರಪ್ಪ, ಸಚಿವ ವಿ.ಸೋಮಣ್ಣ, ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಶಾಸಕ ಉದಯ್ ಗರುಡಾಚಾರ್ ಮತ್ತು ವಜುಭಾಯಿ ವಾಲಾ ಅವರು ವಿಶ್ವೇಶತೀರ್ಥ ಶ್ರೀಪಾದರಿಗೆ ಪುಷ್ಪ ನಮನ ಸಲ್ಲಿಸಿದರು - –ಪ್ರಜಾವಾಣಿ ಚಿತ್ರ
ಕಾರ್ಯಕ್ರಮದಲ್ಲಿ (ಎಡದಿಂದ) ಬಾಬಾ ರಾಮ್‌ದೇವ್, ಬಿ.ಎಸ್‌.‌ ಯಡಿಯೂರಪ್ಪ, ಸಚಿವ ವಿ.ಸೋಮಣ್ಣ, ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಶಾಸಕ ಉದಯ್ ಗರುಡಾಚಾರ್ ಮತ್ತು ವಜುಭಾಯಿ ವಾಲಾ ಅವರು ವಿಶ್ವೇಶತೀರ್ಥ ಶ್ರೀಪಾದರಿಗೆ ಪುಷ್ಪ ನಮನ ಸಲ್ಲಿಸಿದರು - –ಪ್ರಜಾವಾಣಿ ಚಿತ್ರ   

ಬೆಂಗಳೂರು: ಪೇಜಾವರದವಿಶ್ವೇಶ ತೀರ್ಥ ಸ್ವಾಮೀಜಿ ಜತೆಗಿನ ಒಡನಾಟವನ್ನು ನೆನಪಿಸಿಕೊಂಡ ಯತಿಗಳು, ಹಿಂದೂ ಸಮಾಜಕ್ಕೆ ಅವರ ಕೊಡುಗೆಗಳ ಬಗ್ಗೆ ಗುಣಗಾನ ಮಾಡಿದರು.

ನಗರದಲ್ಲಿ ಶನಿವಾರ ಆಯೋಜಿಸಿದ್ದ ‘ವಿಶ್ವೇಶತೀರ್ಥ ಶ್ರೀಪಾದರಿಗೆ ಗುರುನಮನ’ ಕಾರ್ಯಕ್ರಮದಲ್ಲಿ ದೇಶದ ವಿವಿಧ ಭಾಗಗಳಿಂದ ಬಂದಿದ್ದ ಯತಿಗಳು ಶ್ರೀಗಳ ಕುರಿತು ಮನದಾಳದ ಮಾತುಗಳನ್ನು ಹಂಚಿಕೊಂಡರು. ಕಾರ್ಯಕ್ರಮಕ್ಕೂ ಮುನ್ನ ವಿದ್ಯಾಭೂಷಣ ಅವರು ನಡೆಸಿಕೊಟ್ಟ ಭಕ್ತಿಗೀತೆಗಳ ಗಾಯನ ನೆರೆದಿದ್ದವರು ಭಕ್ತಿಪರವಶರಾಗುವಂತೆ ಮಾಡಿತು. ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾದ ಬಳಿಕ ಪ್ರಥಮ ಬಾರಿಗೆ ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ ರಾಜ್ಯಪಾಲ ವಜುಭಾಯಿ ವಾಲಾ, ಶ್ರೀಗಳ ಭಾವಚಿತ್ರಕ್ಕೆ ನಮನ ಸಲ್ಲಿಸಿದರು. ಪೇಜಾವರಶ್ರೀಗೆ ಸಂಬಂಧಿಸಿದ ಛಾಯಾಚಿತ್ರಗಳ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು.

ಉತ್ತರದ ನಂಟು: ಯೋಗಗುರು ಬಾಬಾ ರಾಮ್‌ದೇವ್, ‘ಪೇಜಾವರಶ್ರೀ ಯೋಗ ಪುರುಷರಾಗಿದ್ದರು. ಅವರು ಅರ್ಥಪೂರ್ಣವಾಗಿ ಬದುಕಿ ತೋರಿಸಿದ್ದಾರೆ. ಧರ್ಮಕ್ಕಾಗಿ ಪರಿತಪಿಸುತ್ತಿದ್ದ ಅವರು, ಭಗವಂತನ ಅನುಗ್ರಹಕ್ಕೆ ಭಾಜನರಾಗಿದ್ದಾರೆ.ಮಹಾಪುರುಷರ ಶರೀರ ಅಸ್ತಂಗತವಾದ ಬಳಿಕವೂ ಅವರ ಸಾಧನೆಗಳು ಮರೆಯಾಗುವುದಿಲ್ಲ. ತಪೋಶಕ್ತಿಗಳಿಂದಾಗಿ ಅವರು ಯಾವಾಗಲೂ ನಮ್ಮೊಂದಿಗೆ ಇರುತ್ತಾರೆ. ಆಧುನಿಕ ಭಾರತದಲ್ಲಿ ಉತ್ತರ ಹಾಗೂ ದಕ್ಷಿಣದ ಭಾಗವನ್ನು ಒಂದುಗೂಡಿಸಿದ ಶ್ರೇಯಸ್ಸು ಅವರದ್ದಾಗಿದೆ. ಉತ್ತರ ಭಾರತದ ಸಂತರು ಉಡುಪಿ ಸ್ವಾಮೀಜಿ ಎಂದೇ ಅವರನ್ನು ಗುರುತಿಸುತ್ತಾರೆ’ ಎಂದು ತಿಳಿಸಿದರು.

ADVERTISEMENT

ಬೇಲಿ ಮಠದಶಿವರುದ್ರ ಸ್ವಾಮೀಜಿ, ‘ಸಮಾಜದ ಅಂಕು ಡೊಂಕುಗಳನ್ನು ತಿದ್ದಿದ ಸಂತ ಇಂದು ನಮ್ಮೊಂದಿಗೆ ಇಲ್ಲ. ಅವರ ನೆನಪು, ಕಳೆದ ಕ್ಷಣ ಯಾವತ್ತಿಗೂ ಸ್ಫೂರ್ತಿದಾಯಕ ಎಂದರು.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ‘ಪೇಜಾವರಶ್ರೀ ಅವರಿಂದ ಮಾರ್ಗದರ್ಶನವನ್ನು ಪಡೆದುಕೊಳ್ಳುತ್ತಿದ್ದೆ.ದಲಿತರು ಮತ್ತು ಶೋಷಿತರ ಒಳಿತಿಗಾಗಿ ಪೇಜಾವರಶ್ರೀ ಶ್ರಮಿಸಿದರು. ಶಿಕ್ಷಣ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದು, ಅವರ ನಡೆ ನುಡಿ ಪಾಲಿಸಿದರೆ ಅದೇ ಅವರಿಗೆ ನಾವು ಸಲ್ಲಿಸುವ ಶ್ರದ್ಧಾಂಜಲಿ’ ಎಂದು ಹೇಳಿದರು.

‘ದೇಶದ ಧಾರ್ಮಿಕ ಪುರುಷರು’
ಸುಪ್ರೀಂ ಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಂ.ಎನ್.ವೆಂಕಟಾಚಲಯ್ಯ, ‘ಸಮಾಜದ ಎಲ್ಲರ ಹಾಗೂ ಎಲ್ಲ ರೀತಿಯ ಸೇವೆ ಮಾಡುವ ಮೂಲಕ ಭಕ್ತರಲ್ಲಿ ಶಾಶ್ವತ ಸ್ಥಾನವನ್ನು ಪ್ರೇಜಾವರಶ್ರೀ ಪಡೆದುಕೊಂಡಿದ್ದಾರೆ. ಅವರನ್ನುಭಾರತದ ಧಾರ್ಮಿಕ ಪುರುಷ ಎಂದರೂ ತಪ್ಪಾಗಲಾರದು. ಯಾವಾಗಲೂ ಅವರ ಭಾವಚಿತ್ರ ನನ್ನ ಕಣ್ಣ ಮುಂದೆ ಇರುತ್ತದೆ’ ಎಂದು ತಿಳಿಸಿದರು.

*
ಗುರುಗಳು ಈ ಸಮಾಜವನ್ನು ಪ್ರೀತಿಸಿದ್ದಕ್ಕೆ ಪ್ರತಿಯಾಗಿ , ಸಮಾಜ ಇಂತಹ ಗೌರವನ್ನು ಅವರಿಗೆ ಸಲ್ಲಿಸುತ್ತಿದೆ. ಆಸ್ಪತ್ರೆಗೆ ದಾಖಲಾದಾಗಿನಿಂದ ಇಲ್ಲಿಯವರೆಗೆ ಸರ್ಕಾರ ಎಲ್ಲ ವ್ಯವಸ್ಥೆ ಮಾಡಿಕೊಟ್ಟಿತು
–ವಿಶ್ವಪ್ರಸನ್ನ ಸ್ವಾಮೀಜಿ, ಪೇಜಾವರ ಮಠ

*
ಭೌತಿಕವಾಗಿ ಪೇಜಾವರಶ್ರೀ ನಮ್ಮೊಂದಿಗಿಲ್ಲ. ಧಾರ್ಮಿಕ ವಿಚಾರದ ಯಾವುದೇ ವೇದಿಕೆಯಲ್ಲೂ ಶ್ರೀಗಳ ಉಪಸ್ಥಿತಿ ಸಭೆಗೆ ಶೋಭೆ ತರುತ್ತಿತ್ತು.
-ನಿರ್ಮಲಾನಂದನಾಥ ಸ್ವಾಮೀಜಿ, ಆದಿ ಚುಂಚನಗಿರಿ ಮಠದ ಪೀಠಾಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.