ಬೆಂಗಳೂರು: ಐದು ವರ್ಷಗಳ ಹಿಂದೆ ಬಿಡುಗಡೆಯಾದ ಬಿಎಸ್–6 ಆಟೊಗಳಿಗೆ ಸಾರಿಗೆ ಇಲಾಖೆ ಪರವಾನಗಿ ನೀಡಲು ಕ್ರಮ ಕೈಗೊಳ್ಳದೇ ದಂಡ ವಿಧಿಸುತ್ತಿರುವುದು ಸರಿಯಲ್ಲ ಎಂದು ಆಮ್ ಆದ್ಮಿ ಪಾರ್ಟಿ ಸದಸ್ಯರು ಸಾರಿಗೆ ಸಚಿವ ರಾಮಲಿಂಗಾರೆಡ್ಡಿಗೆ ಸಲ್ಲಿಸಿರುವ ಮನವಿಯಲ್ಲಿ ತಿಳಿಸಿದ್ದಾರೆ.
ಕೋವಿಡ್ ಕಾಲದಲ್ಲಿ ಬಿಎಸ್–6 ಆಟೊಗಳು ಬಿಡುಗಡೆಯಾಗಿದ್ದವು. ಆಗ ಯಾವುದೇ ಸಾಲ ಸೌಲಭ್ಯಗಳು ಸಿಗದಿದ್ದ ಕಾರಣ ಅನೇಕರು ಕಡಿಮೆ ದರದ ಬಿಎಸ್–6 ಆಟೊಗಳನ್ನು ಖರೀದಿಸಿ ಜೀವನ ನಡೆಸುತ್ತಿದ್ದರು. ಪರವಾನಗಿಗಾಗಿ ಸಾರಿಗೆ ಇಲಾಖೆಗೆ ಹಲವು ಬಾರಿ ಅಲೆದರೂ ದೊರೆತಿರಲಿಲ್ಲ. ಈಗ ಈ ಆಟೊಗಳನ್ನು ಪತ್ತೆ ಹಚ್ಚಿ ದಂಡ ವಿಧಿಸಲಾಗುತ್ತಿದೆ ಎಂದು ಎಎಪಿ ರಾಜ್ಯ ಆಟೊ ಘಟಕದ ಅಧ್ಯಕ್ಷ ಆಯುಬ್ ಖಾನ್ ತಿಳಿಸಿದರು.
ಬಿಎಸ್–6 ಆಟೊಗಳಿಗೆ ಪರವಾನಗಿ ನೀಡಬೇಕು. ದುಬಾರಿ ದಂಡ ವಿಧಿಸುವುದನ್ನು ಕೈಬಿಡಬೇಕು ಎಂದು ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.