ADVERTISEMENT

9 ತಿಂಗಳಲ್ಲಿ ಕಾಯಂ ಸಿಬ್ಬಂದಿ ನೇಮಕಕ್ಕೆ ಕ್ರಮ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2020, 19:45 IST
Last Updated 24 ಫೆಬ್ರುವರಿ 2020, 19:45 IST

ಬೆಂಗಳೂರು: ‘ಭೂ ಕಬಳಿಕೆ ಪ್ರಕರಣಗಳ ವಿಚಾರಣೆ ನಡೆಸಲು ಸ್ಥಾಪಿಸಲಾಗಿರುವ ವಿಶೇಷ ನ್ಯಾಯಾಲಯಕ್ಕೆ ಕಾಯಂ ಸಿಬ್ಬಂದಿ ನೇಮಿಸಲು ಒಂಬತ್ತು ತಿಂಗಳಲ್ಲಿ ಕ್ರಮ ಕೈಗೊಳ್ಳಲಾಗುವುದು’ ಎಂದು ರಾಜ್ಯ ಸರ್ಕಾರ ಹೈಕೋರ್ಟ್‍ಗೆ ತಿಳಿಸಿದೆ.

ಈ ಕುರಿತಂತೆ ಎಂ.ಎನ್. ವೇಣುಗೋಪಾಲ್ ಹಾಗೂ ಇತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಅಭಯ್‌ ಎಸ್. ಓಕಾ ನೇತೃತ್ವದ ವಿಭಾಗೀಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು. ವಿಚಾರಣೆ ವೇಳೆ ಸರ್ಕಾರದ ಪರ ವಕೀಲ ಎ.ಸಿ. ಬಾಲರಾಜು ಈ ಕುರಿತ ಪ್ರಮಾಣ ಪತ್ರವನ್ನು ನ್ಯಾಯಪೀಠಕ್ಕೆ ಸಲ್ಲಸಿದರು.

ಪ್ರಮಾಣ ಪತ್ರ ಪರಿಶೀಲಿಸಿದ ನ್ಯಾಯಪೀಠ, ‘ರಾಜ್ಯದಾದ್ಯಂತ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ನಿವೃತ್ತರನ್ನು ನೇಮಕ ಮಾಡಿಕೊಳ್ಳುವುದಿಲ್ಲ ಎಂದು2016ರ ಫೆಬ್ರುವರಿ 29ರಂದು ಹೊರಡಿಸಿರುವ ಸುತ್ತೋಲೆ ಪಾಲಿಸಿ’ ಎಂದು ಸರ್ಕಾರಕ್ಕೆ ನಿರ್ದೇಶಿಸಿತು.

ADVERTISEMENT

ಈ ಬಗ್ಗೆ ಮುಂದಿನ ಆರುತಿಂಗಳಲ್ಲಿ ಕ್ರಮ ಕೈಗೊಳ್ಳುವಂತೆ ಸೂಚಿಸಿತು.

ಗೃಹ ನಿರ್ಮಾಣ ಸಹಕಾರ ಸಂಘಕ್ಕೆ ಅಧ್ಯಕ್ಷರ ಆಯ್ಕೆ

ಬೆಂಗಳೂರು:‌ ಬೆಂಗಳೂರು ನೌಕರರ ಗೃಹ ನಿರ್ಮಾಣ ಸಹಕಾರ ಸಂಘದ ಆಡಳಿತ ಮಂಡಳಿಯ ಅಧ್ಯಕ್ಷರಾಗಿಮಹಾಲಿಂಗಯ್ಯ ಮತ್ತು ಉಪಾಧ್ಯಕ್ಷರಾಗಿ ಎನ್‌.ಸುನಂದಾ ಆಯ್ಕೆಯಾಗಿದ್ದಾರೆ.

ನಿರ್ದೇಶಕರಾಗಿಮುದ್ದಯ್ಯ, ಜೆ.ಕೃಷ್ಣಯ್ಯ, ಡಾ.ಅಪ್ಪಾಜಿ, ಆರ್.ರಂಗಧಾಮ, ಎಚ್. ಕೃಷ್ಣಪ್ಪ, ಕೆ.ಎನ್.ರಾಮಯ್ಯ, ಡಾ.ಕೆ.ಆರ್. ಗೋವಿಂದರಾಜು, ಎಂ.ಎನ್. ಶಿವಣ್ಣ, ಎಂ.ಎಸ್. ನಂದೀಶ್, ಎಚ್.ಎಸ್.ಯೋಗೇಶ್, ಬಿ.ಎಸ್.ನಾಗಲಕ್ಷ್ಮಿ ಆಯ್ಕೆಯಾಗಿದ್ದಾರೆ.

ಪರೀಕ್ಷಾ ಕೇಂದ್ರಕ್ಕೆ ಉಚಿತ ಪ್ರಯಾಣ

ಬೆಂಗಳೂರು: ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಗಳಿಗೆ ಉಚಿತವಾಗಿ ಪ್ರಯಾಣ ಮಾಡಲು ಬಿಎಂಟಿಸಿ ಅವಕಾಶ ಕಲ್ಪಿಸಿದೆ.

ಮಾರ್ಚ್ 4ರಿಂದ 23ರವರೆಗೆ ಪರೀಕ್ಷೆಗಳು ನಡೆಯಲಿವೆ. ವ್ಯಾಸಂಗ ಮಾಡುತ್ತಿರುವ ವಿದ್ಯಾಸಂಸ್ಥೆಗಳಲ್ಲಿ ಪರೀಕ್ಷೆ ಇಲ್ಲದಿದ್ದರೆ ನಿರ್ವಾಹಕರಿಗೆ ಪರೀಕ್ಷಾ ಪ್ರವೇಶ ಪತ್ರ ತೋರಿಸಿ ಉಚಿತವಾಗಿ ಪ್ರಯಾಣ ಮಾಡಬಹುದು ಎಂದು ಬಿಎಂಟಿಸಿ ಪ್ರಕಟಣೆ ತಿಳಿಸಿದೆ.

ದಿನಾಂಕ ವಿಸ್ತರಣೆ

ಬೆಂಗಳೂರು: ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯದ ವಿದೇಶಿ ಭಾಷಾ ಅಧ್ಯಯನ ಕೇಂದ್ರದಲ್ಲಿನ ಸರ್ಟಿಫಿಕೇಟ್ ಕೋರ್ಸ್‌ಗಳ ಅರ್ಜಿ ಸಲ್ಲಿಕೆ ದಿನಾಂಕವನ್ನು ಇದೇ 29ರವರೆಗೆ ವಿಸ್ತರಿಸಲಾಗಿದೆ. ₹ 200 ದಂಡ ಶುಲ್ಕದೊಂದಿಗೆ ಮಾರ್ಚ್‌ 6ರೊಳಗೆ ಅರ್ಜಿ ಸಲ್ಲಿಸಬಹುದು ಎಂದು ಕುಲಸಚಿವರ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.