ADVERTISEMENT

ಕೋವಿಡ್–19 ಸೋಂಕಿತರ ಮಾಹಿತಿ ಸೋರಿಕೆ?

ಕೋವಿಡ್‌ ಪೀಡಿತರನ್ನು ಸಂಪರ್ಕಿಸುತ್ತಿರುವ ಖಾಸಗಿ ಏಜೆನ್ಸಿಗಳು

ವರುಣ ಹೆಗಡೆ
Published 10 ನವೆಂಬರ್ 2020, 22:08 IST
Last Updated 10 ನವೆಂಬರ್ 2020, 22:08 IST
ಕೊರೊನಾ ವೈರಸ್‌ ಸೋಂಕು–ಪ್ರಾತಿನಿಧಿಕ ಚಿತ್ರ
ಕೊರೊನಾ ವೈರಸ್‌ ಸೋಂಕು–ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ನಗರದಲ್ಲಿ ಕೋವಿಡ್ ಪೀಡಿತರನ್ನು ಸಂಪರ್ಕಿಸುತ್ತಿರುವ ವಿವಿಧ ಖಾಸಗಿ ಏಜನ್ಸಿಗಳು, ಕಟ್ಟಡಗಳಿಗೆ ಸೋಂಕು ನಿವಾರಕ ದ್ರವ ಸಿಂಪಡಣೆ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಒದಗಿಸುವುದಾಗಿ ದುಂಬಾಲು ಬೀಳುತ್ತಿವೆ. ಇದರಿಂದಾಗಿ ಕೊರೊನಾ ಸೋಂಕಿತರ ವೈಯಕ್ತಿಕ ಮಾಹಿತಿಗಳು ಸೋರಿಕೆಯಾಗುತ್ತಿರುವ ಬಗ್ಗೆ ಸಂದೇಹ ವ್ಯಕ್ತವಾಗಿದೆ.

ನಗರದಲ್ಲಿ ಕೋವಿಡ್ ಪ್ರಕರಣಗಳು ವರದಿಯಾದ ಪ್ರಾರಂಭಿಕ ದಿನಗಳಲ್ಲಿ ಸೋಂಕಿತರನ್ನು ಆಸ್ಪತ್ರೆಗೆ ದಾಖಲಿಸಿ, ವ್ಯಕ್ತಿಯ ಮನೆಯ ಸುತ್ತಮುತ್ತಲಿನ ಸ್ಥಳವನ್ನು ಕಂಟೈನ್‌ಮೆಂಟ್ ಸ್ಥಳವೆಂದು ಗುರುತಿಸಲಾಗುತ್ತಿತ್ತು. ಸೋಂಕಿತರ ಸಂಖ್ಯೆ ಏರುಗತಿ ಪಡೆದ ಬಳಿಕ ಸರ್ಕಾರವು ಮನೆ ಆರೈಕೆಗೆ ಅವಕಾಶ ನೀಡಿ ಆದೇಶ ಹೊರಡಿಸಿತು. ಕೋವಿಡ್‌ ಪೀಡಿತರಲ್ಲಿ ಬಹುತೇಕರು ಈಗ ಮನೆ ಆರೈಕೆಗೆ ಒಳಪಡುತ್ತಿದ್ದಾರೆ. ಕೋವಿಡ್ ಪರೀಕ್ಷೆ ನಡೆಸುವ ಮುನ್ನ ಬಿಬಿಎಂಪಿ ಸಿಬ್ಬಂದಿಯು ವ್ಯಕ್ತಿಯ ದೂರವಾಣಿ ಸಂಖ್ಯೆಯ ಜತೆಗೆ
ವಿಳಾಸ ಸೇರಿದಂತೆ ಕೆಲವೊಂದು ವೈಯಕ್ತಿಕ ಮಾಹಿತಿ ಪಡೆಯುತ್ತಿದ್ದಾರೆ. ಈ ಮಾಹಿತಿಯು ಖಾಸಗಿ ಏಜೆನ್ಸಿಗಳಿಗೆ ಹೇಗೆ ದೊರೆಯುತ್ತಿವೆ ಎಂದು ಸೋಂಕಿತರು ಪ್ರಶ್ನಿಸಿದ್ದಾರೆ.

ವ್ಯಕ್ತಿಗೆ ಕೋವಿಡ್ ದೃಢಪಟ್ಟ ಬಳಿಕ ಸಂಪರ್ಕಿಸುವ ಬಿಬಿಎಂಪಿ ಅಧಿಕಾರಿಗಳು, ಮನೆ ಆರೈಕೆಯ ಬಗ್ಗೆ ನಿರ್ಧರಿಸುತ್ತಾರೆ. ಮನೆ ಆರೈಕೆಗೆ ಒಳ‍ಪಟ್ಟವರ ಜತೆಗೆ ಬಿಬಿಎಂಪಿ ಸಿಬ್ಬಂದಿ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವೈದ್ಯರುನಿರಂತರ ಸಂಪರ್ಕದಲ್ಲಿರುತ್ತಾರೆ. ಈ ನಡುವೆ, ಕೆಲವು ಖಾಸಗಿ ಆಸ್ಪತ್ರೆಗಳು ಕೂಡ ಕೋವಿಡ್ ಪೀಡಿತರಿಗಾಗಿ ಟೆಲಿ ಸಮಾಲೋಚನೆ ಹಾಗೂ ಮನೆ ಆರೈಕೆ ಸೇವೆ ಪ್ರಾರಂಭಿಸಿವೆ. ಅದೇ ರೀತಿ, ಸೋಂಕು ನಿವಾರಕ ದ್ರವ ಸಿಂಪಡಣೆ, ಧೂಮೀಕರಣ, ಆಹಾರ ಪೂರೈಕೆ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಒದಗಿಸುವ ಏಜೆನ್ಸಿಗಳು ತಲೆಯೆತ್ತಿವೆ. ಅಂತಹ ಏಜೆನ್ಸಿಗಳು ಸೋಂಕಿತರ ದೂರವಾಣಿ ಸಂಖ್ಯೆಗೆ ಕರೆ ಮಾಡುವ ಜತೆಗೆ ಸಂದೇಶ ರವಾನಿಸುತ್ತಿವೆ.

ADVERTISEMENT

ಸೋಂಕಿತರಿಗೆ ಕಿರಿಕಿರಿ: ‘ಸೋಂಕು ತಗುಲಿರುವ ಬಗ್ಗೆ ವರದಿ ಬಂದ ಕೆಲವೇ ಕ್ಷಣದಲ್ಲಿ ಬಿಬಿಎಂಪಿ ಅಧಿಕಾರಿಗಳು ದೂರವಾಣಿ ಕರೆ ಮಾಡಿ, ವಿಚಾರಿಸಿದರು. ಮನೆ ಆರೈಕೆಗೆ ಒಳಪಡುವಂತೆ ಸೂಚಿಸಿದರು. ಬಳಿಕ ಕೆಲವು ಖಾಸಗಿ ಏಜೆನ್ಸಿಗಳು ಕರೆ ಮಾಡಿ, ತಮ್ಮ ಸೇವೆ ಪಡೆಯುವಂತೆ ಒತ್ತಾಯ ಮಾಡಲಾಂಭಿಸಿದವು. ಮೊಬೈಲ್‌ಗೆ ಕೂಡ ನಿರಂತರ ಸಂದೇಶಗಳನ್ನು ರವಾನಿಸಿದವು. ಯಾವುದೇ ಸೇವೆಯ ಅಗತ್ಯವಿಲ್ಲ ಎಂದು ತಿಳಿಸಿದರೂ ಕಿರಿಕಿರಿ ತಪ್ಪಲಿಲ್ಲ. ಬಿಬಿಎಂಪಿ ಸಿಬ್ಬಂದಿಯೇ ಅವರಿಗೆ ಮಾಹಿತಿ ನೀಡಿರಬೇಕು’ ಎಂದು ಕೋವಿಡ್‌ನಿಂದ ಚೇತರಿಸಿಕೊಂಡಿರುವ ವೈಟ್‌ಫೀಲ್ಡ್‌ನ ನಿವಾಸಿಯೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.