ADVERTISEMENT

ಬೆಂಗಳೂರು: ನೀರಿನ ಸಮಸ್ಯೆ ಪರಿಹಾರಕ್ಕೆ ವಿದ್ಯಾರ್ಥಿಗಳಿಂದ ಪ್ರಯತ್ನ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2024, 14:45 IST
Last Updated 13 ಏಪ್ರಿಲ್ 2024, 14:45 IST
‘ಐಡಿಯಾಥಾನ್‌’ನಲ್ಲಿ ನೀರಿನ ಸಮಸ್ಯೆ ಪರಿಹರಿಸುವ ಪರಿಕಲ್ಪನೆಯನ್ನು ವಿದ್ಯಾರ್ಥಿಗಳು ನಿರ್ಣಾಯಕರಿಗೆ ವಿವರಿಸಿದರು
‘ಐಡಿಯಾಥಾನ್‌’ನಲ್ಲಿ ನೀರಿನ ಸಮಸ್ಯೆ ಪರಿಹರಿಸುವ ಪರಿಕಲ್ಪನೆಯನ್ನು ವಿದ್ಯಾರ್ಥಿಗಳು ನಿರ್ಣಾಯಕರಿಗೆ ವಿವರಿಸಿದರು   

ಬೆಂಗಳೂರು: ಪಿಇಎಸ್ ಪಾಲಿಟೆಕ್ನಿಕ್ ಶಿಕ್ಷಣ ಸಂಸ್ಥೆಯು ನೀರಿನ ಸಮರ್ಥ ನಿರ್ವಹಣೆಗೆ ಸಂಬಂಧಿಸಿದಂತೆ ಪಿಇಎಸ್ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ ‘ಐಡಿಯಾಥಾನ್‌’ನಲ್ಲಿ 120ಕ್ಕೂ ಅಧಿಕ ವಿದ್ಯಾರ್ಥಿಗಳು ವಿನೂತನ ಆಲೋಚನೆಗಳ ಮೂಲಕ ನಗರದ ನೀರಿನ ಸಮಸ್ಯೆ ಪರಿಹರಿಸುವ ಪ್ರಯತ್ನ ಮಾಡಿದರು. 

ಈ ಕಾರ್ಯಕ್ರಮದಲ್ಲಿ ವಿವಿಧ ಪಾಲಿಟೆಕ್ನಿಕ್ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಪಿಇಎಸ್ ಪಾಲಿಟೆಕ್ನಿಕ್‌ನ 4ನೇ ಸೆಮಿಸ್ಟರ್ ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿಗಳಾದ ಪುಣ್ಯ ಚಂದ್ರಶೇಖರ್, ಮನಸ್ವಿನಿ ಮತ್ತು ಸಾಯಿಕೃಷ್ಣ ಶರ್ಮಾ ಅವರು ಪ್ರಥಮ ಬಹುಮಾನ ಪಡೆದರು. ಅವರು ನೀರಿನ ಸೋರಿಕೆ ಪತ್ತೆ ಹಚ್ಚುವ ಹಾಗೂ ಅದನ್ನು ತಡೆಯುವ ಐಒಟಿ ತಂತ್ರಜ್ಞಾನ ಆಧಾರಿತ ನಿರ್ವಹಣಾ ವ್ಯವಸ್ಥೆಯ ಪರಿಕಲ್ಪನೆಯನ್ನು ಪ್ರಸ್ತುತಪಡಿಸಿದ್ದರು.

ಪಿಇಎಸ್ ಪಾಲಿಟೆಕ್ನಿಕ್‌ನ 4ನೇ ಸೆಮಿಸ್ಟರ್‌ನ ಮೆಕ್ಯಾನಿಕಲ್ ಎಂಜಿನಿಯರಿಂಗ್‌ನ ನಿತೇಶ್ ಕುಮಾರ್, ಸುಮನ್ ಕೆ.ಟಿ. ಮತ್ತು ಮನೋಜ್ ಕುಮಾರ್ ಅವರು ಅಪಾರ್ಟ್‌ಮೆಂಟ್ ಸಂಕೀರ್ಣದಲ್ಲಿ ಉಪ ರಸ್ತೆಗಳು ಮತ್ತು ಆಂತರಿಕ ರಸ್ತೆಗಳಿಗಾಗಿ ಪರ್ವಿಯಸ್ ಕಾಂಕ್ರೀಟ್‌ನ ಕಲ್ಪನೆ ರೂಪಿಸಿದ್ದರು. ಅವರು ಎರಡನೇ ಬಹುಮಾನ ಪಡೆದರು. 

ADVERTISEMENT

ಈಸ್ಟ್ ವೆಸ್ಟ್ ಪಾಲಿಟೆಕ್ನಿಕ್‌ನ ಸಿವಿಲ್ ಎಂಜಿನಿಯರಿಂಗ್‌ನ ಯಶವಂತ್, ಬಾಲಾಜಿ ಮತ್ತು ಧನುಷ್ ಅವರು ಅಂತರ್ಜಲ ಮರುಪೂರಣ ವ್ಯವಸ್ಥೆಯ ಮಾದರಿಗೆ ಮೂರನೇ ಬಹುಮಾನ ಪಡೆದರು. ಈ ಬಹುಮಾನವು ಕ್ರಮವಾಗಿ ₹ 15 ಸಾವಿರ, ₹ 12 ಸಾವಿರ ಹಾಗೂ ₹ 9 ಸಾವಿರ ನಗದು ಒಳಗೊಂಡಿವೆ. 

ಹನುಮಂತನಗರ ಪಿಇಎಸ್‌ ಕಾಲೇಜಿನ ನಿರ್ದೇಶಕ ಪ್ರೊ.ಎಂ.ವಿ. ಸತ್ಯನಾರಾಯಣ ಅವರು ವಿಜೇತರಿಗೆ ನಗದು ಬಹುಮಾನವನ್ನು ವಿತರಿಸಿದರು.

ಪಿಇಎಸ್ ವಿಶ್ವವಿದ್ಯಾಲಯದ ಕುಲಾಧಿಪತಿ ಎಂ.ಆರ್.ದೊರೆಸ್ವಾಮಿ ಅವರು ವಿಜೇತರ ಪರಿಕಲ್ಪನೆಯನ್ನು ಶ್ಲಾಘಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.