ಬೆಂಗಳೂರು: ಶೈಕ್ಷಣಿಕ, ಸಂಶೋಧನೆ ಮತ್ತು ಉದ್ಯಮ ಆಧಾರಿತ ಕೌಶಲ ಬಲಪಡಿಸಲು ಪಿಇಎಸ್ ವಿಶ್ವವಿದ್ಯಾಲಯ ಮತ್ತು ಜಾಗತಿಕ ತಂತ್ರಜ್ಞಾನ ಕಂಪನಿ ಎಚ್‌ಸಿಎಲ್ ಟೆಕ್ ಒಪ್ಪಂದಕ್ಕೆ ಸಹಿ ಹಾಕಿವೆ.
ನವೀನ ತಂತ್ರಜ್ಞಾನ ಕ್ಷೇತ್ರಗಳಲ್ಲಿ ವಿದ್ಯಾರ್ಥಿಗಳನ್ನು ಆಧುನಿಕ ಜ್ಞಾನದಿಂದ ಸಜ್ಜುಗೊಳಿಸುವ ಮೂಲಕ ಶೈಕ್ಷಣಿಕ ಮತ್ತು ಉದ್ಯಮದ ನಡುವಿನ ಅಂತರವನ್ನು ಕಡಿಮೆ ಮಾಡುವ ಗುರಿ ಇಟ್ಟುಕೊಂಡು ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಪಿಇಎಸ್ ಪ್ರಕಟಣೆ ತಿಳಿಸಿದೆ.
ಪಿಇಎಸ್ ವಿದ್ಯಾರ್ಥಿಗಳು ಮತ್ತು ಎಚ್‌ಸಿಎಲ್ ಟೆಕ್ ಉದ್ಯೋಗಿಗಳು ಸಂಶೋಧನೆ, ನಾವಿನ್ಯ ಮತ್ತು ಕೌಶಲ ಅಭಿವೃದ್ಧಿಯ ಬಗ್ಗೆ ಕೇಂದ್ರೀಕರಿಸುವಂತೆ ಮಾಡಲಾಗುವುದು. ಜಂಟಿ ಸಂಶೋಧನೆ, ಅಭಿವೃದ್ಧಿ ಯೋಜನೆಗಳು, ಅತಿಥಿ ಉಪನ್ಯಾಸಗಳು, ಉದ್ಯಮ ತಜ್ಞರ ನೇತೃತ್ವದ ಕಾರ್ಯಾಗಾರಗಳು ನಡೆಯಲಿವೆ. ಪಿಇಎಸ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ಎಚ್‌ಸಿಎಲ್ ಟೆಕ್ ಇಂಟರ್ನ್‌ಶಿಪ್ ನೀಡುವುದಲ್ಲದೇ ಪ್ರಾಯೋಗಿಕ ಅನುಭವ ಮತ್ತು ಸಂಭಾವ್ಯ ಉದ್ಯೋಗವಕಾಶಗಳನ್ನು ಒದಗಿಸಲಿದೆ.
‘ಕೃತಕ ಬುದ್ಧಿಮತ್ತೆ, ಸೆಮಿ ಕಂಡಕ್ಟರ್‌ಗಳು, ಡಿಜಿಟಲ್ ಎಂಜಿನಿಯರಿಂಗ್ ಪರಿಹಾರಗಳಂಥ ಹೊಸ ಕ್ಷೇತ್ರಗಳಲ್ಲಿ ಪ್ರತಿಭೆಗಳನ್ನು ಅಭಿವೃದ್ಧಿಪಡಿಸುವ, ಸಂಶೋಧನೆಯನ್ನು ಬೆಳೆಸುವ ಮೂಲಕ ಭಾರತದ ತಾಂತ್ರಿಕ ಪರಿಸರ ವ್ಯವಸ್ಥೆಯನ್ನು ಗಟ್ಟಿಗೊಳಿಸುವ ಪ್ರಕ್ರಿಯೆ ಈ ಒಪ್ಪಂದದ ಮೂಲಕ ನಡೆಯಲಿದೆ’ ಎಂದು ಎಚ್‌ಸಿಎಲ್ ಟೆಕ್ ಕಾರ್ಪೊರೇಟ್ ಉಪಾಧ್ಯಕ್ಷ ಹರಿ ಸಾದರಹಳ್ಳಿ ತಿಳಿಸಿದರು.
‘ನಮ್ಮ ವಿದ್ಯಾರ್ಥಿಗಳಿಗೆ ನೈಜ ಪ್ರಪಂಚದ ಸವಾಲುಗಳನ್ನು ಪರಿಚಯಿಸಲು, ಮುಂದುವರಿದ ಉದ್ಯಮಗಳೊಂದಿಗೆ ತೊಡಗಿಕೊಳ್ಳಲು ಅವಕಾಶವನ್ನು ಈ ಒಪ್ಪಂದ ಒದಗಿಸಲಿದೆ’ ಎಂದು ಪಿಇಎಸ್ ವಿಶ್ವವಿದ್ಯಾಲಯ ಕುಲಾಧಿಪತಿ ಜವಾಹರ್ ದೊರೆಸ್ವಾಮಿ ಅಭಿಪ್ರಾಯ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.