ADVERTISEMENT

ಪೆಟ್ರೋಲ್‌ ದರ ಏರಿಕೆ ಭೀತಿ: ಮುಗಿಬಿದ್ದ ಸವಾರರು

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2022, 18:10 IST
Last Updated 10 ಮಾರ್ಚ್ 2022, 18:10 IST
   

ಬೆಂಗಳೂರು: ಐದು ರಾಜ್ಯಗಳ ಚುನಾವಣೆ ಮುಗಿದ ಬೆನ್ನಲ್ಲೇ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆಯಾಗಲಿದೆ ಎಂಬ ಆತಂಕದಲ್ಲಿ ವಾಹನಗಳ ಸವಾರರು ಪೆಟ್ರೊಲ್‌ ಬಂಕ್‌ಗಳ ಮುಂದೆ ಮುಗಿಬಿದ್ದಿದ್ದಾರೆ.

ಕಚ್ಚಾ ತೈಲ ಬೆಲೆ ಏರಿಕೆಯಾದರೂ ಚುನಾವಣೆ ಇದ್ದುದರಿಂದ ಇಂಧನ ದರ ಏರಿಕೆ ನಿರ್ಧಾರವನ್ನು ಸರ್ಕಾರ ಕೈಗೊಂಡಿರಲಿಲ್ಲ. ಚುನಾವಣೆ ಮುಗಿದ ಮರು ದಿನವೇ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆಯಾಗಲಿದೆ ಎಂದು ಭಾವಿಸಿ ಸವಾರರು ವಾಹನಗಳ ಟ್ಯಾಂಕ್‌ಗಳನ್ನು ಭರ್ತಿ ಮಾಡಿಸಿಕೊಳ್ಳುತ್ತಿದ್ದಾರೆ. ಪ್ರತಿನಿತ್ಯ 10 ಲೀಟರ್ ಡೀಸೆಲ್ ಬಳಕೆ ಮಾಡುವವರು ಎರಡು ಪಟ್ಟು ತುಂಬಿಸಿಕೊಳ್ಳುತ್ತಿದ್ದಾರೆ ಎಂದು ಪೆಟ್ರೋಲ್ ಬಂಕ್ ಮಾಲೀಕರು ಹೇಳುತ್ತಾರೆ.

‘ಇನ್ನೊಂದೆಡೆ ಬಂಕ್‌ಗಳಿಗೆ ಇಂಧನ ಒದಗಿಸುವ ಕಂಪನಿಗಳು ಪ್ರತಿನಿತ್ಯ ಒದಗಿಸುವುದಕ್ಕಿಂತ ಹೆಚ್ಚಿನ ಇಂಧನ ಪೂರೈಸಲು ಹಿಂದೇಟು ಹಾಕುತ್ತಿವೆ. ಇಂಧನ ಪೂರೈಕೆ ವ್ಯವಹಾರ ಬಹುತೇಕ ಸಾಲದ ಆಧಾರದಲ್ಲಿ ನಡೆಯುತ್ತಿದೆ. ದರ ಏರಿಕೆ ನಿರೀಕ್ಷೆ ಇರುವುದರಿಂದ ಕೇಳಿದಷ್ಟು ಇಂಧನ ಒದಗಿಸುತ್ತಿಲ್ಲ. ಹಣ ಪಾವತಿಸಿದರಷ್ಟೇ ಟ್ಯಾಂಕರ್ ಕಳಿಸುವುದಾಗಿ ಕಂಪನಿಗಳು ಹೇಳುತ್ತಿವೆ’ ಎಂದು ಪೆಟ್ರೊಲ್ ಬಂಕ್‌ವೊಂದರ ಮಾಲೀಕರು ಅಳಲು ತೋಡಿಕೊಂಡರು.

ADVERTISEMENT

‘ದೀಪಾವಳಿ ಸಂದರ್ಭದಲ್ಲಿ ದರ ಕಡಿಮೆ ಆಯಿತು. ಹಿಂದಿನ ದಿನ ಬೇಡವೆಂದರೂ ಟ್ಯಾಂಕರ್‌ಗಳನ್ನು ಕಳುಹಿಸಿದ್ದರು. ಹಲವು ಪೆಟ್ರೋಲ್ ಬಂಕ್ ಮಾಲೀಕರಿಗೆ ₹5ರಿಂದ ₹10 ಲಕ್ಷದ ತನಕ ನಷ್ಟವಾಯಿತು. ವರ್ಷವೆಲ್ಲ ಬಂದಿದ್ದ ಲಾಭಾಂಶ ಒಂದೇ ದಿನ ಹೋಯಿತು. ಈಗ ದರ ಏರಿಕೆ ಮುನ್ಸೂಚನೆ ಇರುವುದರಿಂದ ಹೆಚ್ಚಿನ ಲೋಡ್‌ ಕೇಳಿದರೆ ಕೊಡಲು ನಿರಾಕರಿಸುತ್ತಿವೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.