ADVERTISEMENT

ಪಿಸ್ತೂಲ್ ಮಾರಾಟ: ರಿಯಲ್‌ ಎಸ್ಟೇಟ್ ಮಧ್ಯವರ್ತಿ ಬಂಧನ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2022, 16:13 IST
Last Updated 20 ಮಾರ್ಚ್ 2022, 16:13 IST
ಆರೋಪಿಯಿಂದ ಜಪ್ತಿ ಮಾಡಲಾದ ಪಿಸ್ತೂಲ್‌ಗಳು
ಆರೋಪಿಯಿಂದ ಜಪ್ತಿ ಮಾಡಲಾದ ಪಿಸ್ತೂಲ್‌ಗಳು   

ಬೆಂಗಳೂರು: ಮಹಾರಾಷ್ಟ್ರ ಅಮರಾವತಿಯಿಂದ ಪಿಸ್ತೂಲ್‌ಗಳನ್ನು ತಂದು ನಗರದಲ್ಲಿ ಮಾರುತ್ತಿದ್ದ ಆರೋಪದಡಿ ಶಕೀಲ್ ಅಹ್ಮದ್ (29) ಎಂಬುವರನ್ನು ಬಾಣಸವಾಡಿ ಪೊಲೀಸರು ಬಂಧಿಸಿದ್ದಾರೆ.

‘ರಿಯಲ್ ಎಸ್ಟೇಟ್ ಮಧ್ಯವರ್ತಿಯಾಗಿರುವ ಕನಕನಗರದ ಶಕೀಲ್ ಈ ವ್ಯವಹಾರದ ಜೊತೆಯಲ್ಲೇ ಪಿಸ್ತೂಲ್ ಮಾರಾಟದಲ್ಲೂ ತೊಡಗಿಸಿಕೊಂಡಿದ್ದರು. ಇವರಿಂದ ಎರಡು ಪಿಸ್ತೂಲ್ ಹಾಗೂ ನಾಲ್ಕು ಜೀವಂತ ಗುಂಡುಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

‘ಅಪರಾಧ ಹಿನ್ನೆಲೆಯುಳ್ಳವರು, ರೌಡಿಗಳು ಹಾಗೂ ಇತರರ ಜೊತೆ ಆರೋಪಿ ಒಡನಾಟ ಹೊಂದಿದ್ದರು. ಅವರಿಗೆ ಅಗತ್ಯವಿದ್ದ ಪಿಸ್ತೂಲ್‌ಗಳನ್ನು ಅಮರಾವತಿಯಿಂದ ತಂದು ಮಾರುತ್ತಿದ್ದರು. ಅದೇ ಪಿಸ್ತೂಲ್‌ಗಳನ್ನು ಬಳಸಿ ಹಲವರು ಅಪರಾಧ ಕೃತ್ಯ ಎಸಗಿರುವ ಬಗ್ಗೆ ಮಾಹಿತಿ ಇದೆ’ ಎಂದೂ ತಿಳಿಸಿದರು.

ADVERTISEMENT

‘ಆರೋಪಿ ಇತ್ತೀಚೆಗೆ ಅಮರಾವತಿಯಿಂದ ಪಿಸ್ತೂಲ್ ತಂದಿದ್ದರು. ರೌಡಿಯೊಬ್ಬರಿಗೆ ಪಿಸ್ತೂಲ್ ನೀಡಲು ಬಾಣಸವಾಡಿ ರೈಲು ನಿಲ್ದಾಣ ಬಳಿ ಕಾಯುತ್ತಿದ್ದರು. ಅದೇ ಸಂದರ್ಭದಲ್ಲೇ ದಾಳಿ ಮಾಡಿ ಆರೋಪಿಯನ್ನು ಸೆರೆ ಹಿಡಿಯಲಾಗಿದೆ’ ಎಂದೂ ಹೇಳಿದರು.

‘ಪಿಸ್ತೂಲ್ ಮಾರಾಟ ಪ್ರಕರಣದಲ್ಲೇ 2019ರಲ್ಲಿ ಶಕೀಲ್ ಅಹ್ಮದ್ ಅವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು. ಪ್ರಕರಣದಲ್ಲಿ ಜಾಮೀನು ಪಡೆದು ಜೈಲಿನಿಂದ ಹೊರಬಂದಿದ್ದ ಆರೋಪಿ, ಪುನಃ ಪಿಸ್ತೂಲ್ ಮಾರಾಟ ಮುಂದುವರಿಸಿದ್ದರು. ಆರ್‌.ಟಿ.ನಗರ ಹಾಗೂ ಸಂಪಿಗೆಹಳ್ಳಿ ಠಾಣೆಯಲ್ಲೂ ಆರೋಪಿ ವಿರುದ್ಧ ಪ್ರಕರಣಗಳು ದಾಖಲಾಗಿವೆ’ ಎಂದೂ ಅಧಿಕಾರಿ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.