ADVERTISEMENT

ಬೆಂಗಳೂರಿನ ರಸ್ತೆಗಳಿಂದ ಕಸ ಹೆಕ್ಕಲಿದ್ದಾರೆ 5000 ಮಂದಿ

ಜನ ಜಾಗೃತಿಗಾಗಿ ಅಕ್ಟೋಬರ್‌ 2ರಂದು ‘ಪ್ಲಾಗ್‌ ರನ್‌’ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2018, 6:35 IST
Last Updated 19 ಸೆಪ್ಟೆಂಬರ್ 2018, 6:35 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಸಾರ್ವಜನಿಕ ಸ್ಥಳಗಳನ್ನು ಪ್ಲಾಸ್ಟಿಕ್‌ ಕಸದಿಂದ ಮುಕ್ತಗೊಳಿಸುವ ಬಗ್ಗೆ ಜನ ಜಾಗೃತಿ ಮೂಡಿಸುವ ಸಲುವಾಗಿ ಬಿಬಿಎಂಪಿ ಅಕ್ಟೋಬರ್‌ 2ರಂದುನಗರದ 50 ರಸ್ತೆಗಳಲ್ಲಿ ವಿನೂತನ ‘ಪ್ಲಾಗ್‌ ರನ್‌’ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಇದರಲ್ಲಿ5000 ಮಂದಿ ಭಾಗವಹಿಸಲಿದ್ದಾರೆ.

ಗೋ ನೇಟಿವ್‌, ಯುನೈಟೆಡ್‌ ವೇ ಬೆಂಗಳೂರು, ನಮ್ಮ ನಿಮ್ಮ ಸೈಕಲ್‌ ಫೌಂಡೇಷನ್ ಹಾಗೂ ಲೆಟ್ಸ್‌ ಬಿ ದ ಚೇಂಜ್‌ ಸಂಸ್ಥೆಗಳ ಸಹಯೋಗದಲ್ಲಿ ಈ ಕಾರ್ಯಕ್ರಮ ನಡೆಯಲಿದೆ.

ಇಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದಪಾಲಿಕೆ ಆಯುಕ್ತ ಎನ್‌.ಮಂಜುನಾಥ್‌ ಪ್ರಸಾದ್‌ ‘ಬೆಳಿಗ್ಗೆ ವಾಯು ವಿಹಾರ ಹಾಗೂ ಜಾಗಿಂಗ್‌ ಮಾಡುವವರು ಓಡುತ್ತಲೇ ಕಸವನ್ನು ಹೆಕ್ಕಲಿದ್ದಾರೆ. ಅವರು ಸಂಗ್ರಹಿಸುವ ಕಸವನ್ನು ಬಿಬಿಎಂಪಿ ವೈಜ್ಞಾನಿಕ ರೀತಿಯಲ್ಲಿ ವಿಲೇವಾರಿ ಮಾಡಲಿದೆ’ ಎಂದು ತಿಳಿಸಿದರು.

ADVERTISEMENT

ಯುನೈಡೆಡ್‌ ವೇ ಬೆಂಗಳೂರು ಸಂಸ್ಥೆಯ ಪ್ರಶಾಂತ್‌, ‘ಒಮ್ಮೆ ಬಳಸಿ ಬಿಸಾಡುವ ಪ್ಲಾಸ್ಟಿಕ್‌ ವಸ್ತುಗಳಿಂದಲೇ ಸಮಸ್ಯೆ ಎದುರಾಗುತ್ತಿದೆ. ಇಂತಹ ಉತ್ಪನ್ನಗಳನ್ನು ಆದಷ್ಟು ಕಡಿಮೆ ಬಳಸುವಂತೆ ಜಾಗೃತಿ ಮೂಡಿಸುತ್ತೇವೆ’ ಎಂದರು.

ಗೋ ನೇಟಿವ್ ಸಂಸ್ಥೆಯ ಸಲಹೆಗಾರ ರಾಮಕೃಷ್ಣ, ‘ ಪ್ಲಾಸ್ಟಿಕ್ ಉತ್ಪನ್ನಗಳ ಸಮರ್ಪಕ ವಿಲೇವಾರಿ ಬಗ್ಗೆಯೂ ಜನರಿಗೆ ತಿಳಿವಳಿಕೆ ಕೊರತೆ ಇದೆ. ಈ ಬಗ್ಗೆ ಜನರಲ್ಲಿಅರಿವು ಮೂಡಿಸುತ್ತೇವೆ’ ಎಂದರು.

ನಮ್ಮ ನಿಮ್ಮ ಸೈಕಲ್‌ ಫೌಂಡೇಷನ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮುರಳಿ, ‘ಪ್ಲಾಸ್ಟಿಕ್‌ ಉತ್ಪನ್ನಗಳನ್ನು ತಯಾರಿಸುವುದು ಕಚ್ಛಾತೈಲದಿಂದ. ಮಾಲಿನ್ಯಕ್ಕೆ ಕಾರಣವಾಗುವ ತೈಲದ ಉತ್ಪನ್ನ ಬಳಕೆ ಕಡಿಮೆ ಮಾಡಬೇಕಾದ ಅಗತ್ಯ ಇದೆ’ ಎಂದರು.

www.plog.runಮೂಲಕ ಯಾವ ಸ್ಥಳಗಳಲ್ಲಿ ಪ್ಲಾಗ್‌ ರನ್‌ ನಡೆಯಲಿದೆ ಎಂದು ಸಾರ್ವಜನಿಕರು ತಿಳಿದುಕೊಳ್ಳಬಹುದು. ಹೆಸರನ್ನೂ ನೋಂದಾಯಿಸಬಹುದು' ಎಂದರು.

ಲೆಟ್ಸ್‌ ಬಿ ದ ಚೇಂಜ್‌ ಸಂಸ್ಥೆಯ ಅನಿರುದ್ಧ, ‘ನಮ್ಮೆದುರು ಯಾರಾದರು ಕಸ ಬಿಸಾಡಿದರೆ ನಾವು ಅಸಹಾಯಕರಾಗಬೇಕಾದ ಅಗತ್ಯವಿಲ್ಲ. ಬೇರೆಯವರು ಬಿಸಾಡಿದ ಕಸವನ್ನು ನಾವೇ ಹೆಕ್ಕಿದರೆ ಖಂಡಿತಾ ಅವರಿಗೆ ಮುಜುಗರ ಉಂಟಾಗಲಿದೆ. ಇಂತಹ ತಂತ್ರವನ್ನು ನಾವು ಅನುಸರಿಸಬೇಕಾದ ಅಗತ್ಯ ಇದೆ’ ಎಂದರು.

* 150 ಕಿ.ಮೀ. ಉದ್ದದ ರಸ್ತೆಯಲ್ಲಿ ಕಸ ಹೆಕ್ಕಲಿದ್ದಾರೆ

* 16 ಕಾಲೇಜುಗಳ ವಿದ್ಯಾರ್ಥಿಗಳು ಕೈಜೋಡಿಸಲಿದ್ದಾರೆ

****

ಸ್ವೀಡನ್‌ನಲ್ಲಿ ಪ್ಲಾಗಿಂಗ್‌ ಜನಪ್ರಿಯವಾಗಿದೆ. ನಾವು ಮೊದಲ ಬಾರಿ ಇಂತಹ ವಿನೂತನ ಪ್ರಯತ್ನಕ್ಕೆ ಮುಂದಾಗಿದ್ದೇವೆ. ಇದು ಯಶಸ್ವಿಯಾದರೆ ನಮ್ಮ ನಗರದಲ್ಲೂ ಇದನ್ನು ಆಗಾಗ್ಗೆ ಹಮ್ಮಿಕೊಳ್ಳಲಿದ್ದೇವೆ. ನಗರದ ಇತರ ಪ್ರದೇಶಗಳಿಗೂ ಇದನ್ನು ವಿಸ್ತರಿಸಲಿದ್ದೇವೆ. ಮೊದಲ ಪ್ರಯತ್ನದಲ್ಲೇ 5 ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸುವ ನಿರೀಕ್ಷೆ ಇದೆ. ಈ ಕಾರ್ಯಕ್ರಮವನ್ನು ’ಗಿನ್ನೆಸ್‌ ಬುಕ್‌ ಆಫ್‌ ವರ್ಲ್ಡ್ ರೆಕಾರ್ಡ್‌’ನಲ್ಲಿ ದಾಖಲಿಸುವ ಪ್ರಯತ್ನವೂ ನಡೆದಿದೆ.

– ಎನ್‌‌.ಮಂಜುನಾಥ ಪ್ರಸಾದ್‌, ಪಾಲಿಕೆ ಆಯುಕ್ತರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.