
ನವದೆಹಲಿ: ಸೋಫಾ ಮತ್ತು ಹಾಸಿಗೆ ತ್ಯಾಜ್ಯದ ಸಮಸ್ಯೆ ನಿವಾರಣೆಗಾಗಿ ಶ್ರಮಿಸುತ್ತಿರುವ ಬೆಂಗಳೂರಿನ ಕೆಲವು ವೃತ್ತಿಪರರ ಪ್ರಯತ್ನಗಳನ್ನು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಶ್ಲಾಘಿಸಿದರು.
ತಮ್ಮ ‘ಮನದ ಮಾತು’ ರೇಡಿಯೊ ಮಾಸಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ, ದೇಶದ ವಿವಿಧ ಭಾಗಗಳಲ್ಲಿ ಹಲವು ಗುಂಪುಗಳು ತಮ್ಮ ಪ್ರದೇಶಗಳನ್ನು ಸ್ವಚ್ಛವಾಗಿಟ್ಟುಕೊಳ್ಳಲು ನಡೆಸಿರುವ ಪ್ರಯತ್ನಗಳನ್ನು ಉಲ್ಲೇಖಿಸಿದರು.
‘ಬೆಂಗಳೂರಿನಲ್ಲಿ ಸೋಫಾ ತ್ಯಾಜ್ಯ ದೊಡ್ಡ ಸಮಸ್ಯೆ ಆಗಿದೆ. ಕೆಲವು ವೃತ್ತಿಪರರು ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ತಮ್ಮದೇ ಆದ ಹೊಸ ಮಾರ್ಗವೊಂದನ್ನು ಕಂಡುಕೊಂಡಿದ್ದಾರೆ. ಇದಕ್ಕಾಗಿಯೇ ಹಲವರು ಒಟ್ಟುಗೂಡಿದ್ದಾರೆ’ ಎಂದು ಮೋದಿ ಹೇಳಿದರು.
ಇದೇ ಸಂದರ್ಭ ಅರುಣಾಚಲಪ್ರದೇಶದ ಜನರ ಪ್ರಯತ್ನವನ್ನು ಮುಕ್ತಕಂಠದಿಂದ ಶ್ಲಾಘಿಸಿದರು.
ಇಟಾನಗರದ ಕೆಲವು ಪ್ರದೇಶಗಳಲ್ಲಿ ಕಸದ ರಾಶಿಯೇ ಬೀಳುತ್ತಿತ್ತು. ಇದನ್ನು ಗಮನಿಸಿದ ಯುವಕರ ಗುಂಪು ಸ್ವಚ್ಛತೆಗೆ ಮುಂದಾಯಿತು. ಆ ಪ್ರದೇಶ ಸ್ವಚ್ಛವಾದೊಡನೆ ಇಡೀ ನಗರಕ್ಕೆ ತನ್ನ ಅಭಿಯಾನ ವಿಸ್ತರಿಸಿತು. ಇದು ಅಕ್ಕಪಕ್ಕದ ನಗರಗಳಿಗೂ ವಿಸ್ತರಣೆಗೊಂಡಿತು. ಇಟಾನಗರವು ಸೇರಿದಂತೆ ನಹರ್ಲಗುನ್, ದೋಯಿಮುಖ್, ಸೆಪ್ಪಾ, ಪಾಲಿನ್, ಪಾಸಿಘಾಟ್‌ನಲ್ಲೂ ಸ್ವಚ್ಛತೆ ಕೈಗೊಂಡಿದ್ದರಿಂದ 11 ಲಕ್ಷ ಕೆ.ಜಿ ಕಸ ಸಂಗ್ರಹಗೊಂಡಿತು ಎಂದು ಹೇಳಿದರು.
ಅಸ್ಸಾಂನ ನಾಗೋನ್‌ನ ಜನರು ತಮ್ಮೂರಿನ ಹಳೆಯ ಬೀದಿಗಳ ಜೊತೆ ಭಾವನಾತ್ಮಕ ಸಂಬಂಧ ಹೊಂದಿದ್ದಾರೆ. ಬೀದಿಗಳನ್ನು ಇಲ್ಲಿನ ಜನರೇ ಸ್ವಚ್ಛಗೊಳಿಸುತ್ತಿದ್ದಾರೆ. ಈ ಕಾಯಕಕ್ಕೆ ಹಲವರು ಕೈಜೋಡಿಸಿದ್ದು, ಇಲ್ಲಿನ ಬೀದಿಗಳು ಸ್ವಚ್ಛವಾಗಿವೆ ಎಂದು ಮೋದಿ ತಮ್ಮ ಮನದ ಮಾತಿನಲ್ಲಿ ಪ್ರಸ್ತಾಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.