ADVERTISEMENT

ಪ್ರಧಾನಿ ಮೋದಿ ಸಂಚಾರ: ಹಲವು ರಸ್ತೆ ಬಂದ್, ಓಡಾಟಕ್ಕೆ ಬದಲಿ ಮಾರ್ಗ

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2022, 20:33 IST
Last Updated 10 ನವೆಂಬರ್ 2022, 20:33 IST
ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದ ಕೆಳಸೇತುವೆ ರಸ್ತೆ ಪಕ್ಕದಲ್ಲಿ ಹಲವು ದಿನಗಳಿಂದ ಕಾಮಗಾರಿ ನಡೆಯುತ್ತಿದ್ದು, ಎಲ್ಲೆಂದರಲ್ಲಿ ಮಣ್ಣು ಸುರಿಯಲಾಗಿತ್ತು. ಪ್ರಧಾನಿ ಭೇಟಿ ಹಿನ್ನೆಲೆಯಲ್ಲಿ ಮಣ್ಣಿನ ಗುಡ್ಡೆಗಳು ಕಾಣದಂತೆ ಅಡ್ಡವಾಗಿ ಗುರುವಾರ ತಗಡುಗಳನ್ನು ನಿಲ್ಲಿಸಲಾಗಿದೆ – ಪ್ರಜಾವಾಣಿ ಚಿತ್ರ/ ಕಿಶೋರ್ ಕುಮಾರ್ ಬೋಳಾರ್
ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದ ಕೆಳಸೇತುವೆ ರಸ್ತೆ ಪಕ್ಕದಲ್ಲಿ ಹಲವು ದಿನಗಳಿಂದ ಕಾಮಗಾರಿ ನಡೆಯುತ್ತಿದ್ದು, ಎಲ್ಲೆಂದರಲ್ಲಿ ಮಣ್ಣು ಸುರಿಯಲಾಗಿತ್ತು. ಪ್ರಧಾನಿ ಭೇಟಿ ಹಿನ್ನೆಲೆಯಲ್ಲಿ ಮಣ್ಣಿನ ಗುಡ್ಡೆಗಳು ಕಾಣದಂತೆ ಅಡ್ಡವಾಗಿ ಗುರುವಾರ ತಗಡುಗಳನ್ನು ನಿಲ್ಲಿಸಲಾಗಿದೆ – ಪ್ರಜಾವಾಣಿ ಚಿತ್ರ/ ಕಿಶೋರ್ ಕುಮಾರ್ ಬೋಳಾರ್   

ಬೆಂಗಳೂರು: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ನ. 11ರಂದು ನಗರಕ್ಕೆ ಬರಲಿದ್ದು, ಅವರ ಸಂಚಾರಕ್ಕಾಗಿ ಹಲವು ರಸ್ತೆಗಳಲ್ಲಿ ಸಾರ್ವಜನಿಕರ ವಾಹನಗಳ ಓಟಾಟವನ್ನು ಬಂದ್ ಮಾಡಲಾಗಿದೆ. ಇದರಿಂದಾಗಿ ದಟ್ಟಣೆ ಉಂಟಾಗುವ ಸಾಧ್ಯತೆ ಇದ್ದು, ಬದಲಿ ಮಾರ್ಗ ಬಳಸುವಂತೆ ಸಂಚಾರ ಪೊಲೀಸರು ಕೋರಿದ್ದಾರೆ.

‘ಮೆಜೆಸ್ಟಿಕ್‌ನ ರೈಲು ನಿಲ್ದಾಣ, ವಿಧಾನಸೌಧ ಹಾಗೂ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಪ್ರಧಾನ ಮಂತ್ರಿಯವರು ಪಾಲ್ಗೊಳ್ಳಲಿದ್ದಾರೆ. ಅವರ ಸುಗಮ ಸಂಚಾರ ಹಾಗೂ ಭದ್ರತೆ ದೃಷ್ಟಿಯಿಂದ ಕೆಲ ರಸ್ತೆಗಳಲ್ಲಿ ಸಾರ್ವಜನಿಕರ ವಾಹನಗಳ ಸಂಚಾರ ನಿರ್ಬಂಧಿಸಲಾಗಿದೆ’ ಎಂದು ಸಂಚಾರ ವಿಭಾಗದ ಜಂಟಿ ಕಮಿಷನರ್ ಬಿ.ಆರ್. ರವಿಕಾಂತೇಗೌಡ ತಿಳಿಸಿದ್ದಾರೆ.

‘ಕಾರ್ಯಕ್ರಮ ನಡೆಯುವ ಸಮಯ ಆಧರಿಸಿ ರಸ್ತೆಗಳಲ್ಲಿ ಸಂಚಾರ ನಿರ್ಬಂಧಿಸಲಾಗಿದೆ. ಇದರಿಂದಾಗಿ ದಟ್ಟಣೆ ಉಂಟಾಗುವ ಸಾಧ್ಯತೆಯೂ ಇದೆ. ಸಾರ್ವಜನಿಕರು ಬದಲಿ ಮಾರ್ಗದಲ್ಲಿ ಸಂಚರಿಸಬೇಕು’ ಎಂದು ಕೋರಿದ್ದಾರೆ.

ADVERTISEMENT

ಪೊಲೀಸ್ ಬಿಗಿ ಭದ್ರತೆ: ‘ಪ್ರಧಾನ ಮಂತ್ರಿಗಳು ಸಂಚರಿಸುವ ದಾರಿಯುದ್ದಕ್ಕೂ ಹಾಗೂ ಕಾರ್ಯಕ್ರಮ ಸ್ಥಳದಲ್ಲಿ ಭದ್ರತೆ ಬಿಗಿ ಇರಲಿದೆ. 4 ಸಾವಿರಕ್ಕೂ ಹೆಚ್ಚು ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿದೆ’ ಎಂದು ಪೊಲೀಸ್ ಕಮಿಷನರ್ ಪ್ರತಾಪ್ ರೆಡ್ಡಿ ಹೇಳಿದರು.

ರಸ್ತೆಗಳ ಅಕ್ಕ–ಪಕ್ಕದಲ್ಲಿ ಬ್ಯಾರಿಕೇಡ್‌ಗಳನ್ನು ನಿಲ್ಲಿಸಲಾಗಿದೆ. ಪ್ರಮುಖ ರಸ್ತೆಗಳಿಗೆ ಸಂಪರ್ಕ ಕಲ್ಪಿಸುವ ಒಳರಸ್ತೆಗಳಲ್ಲೂ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ. ಹೆಚ್ಚುವರಿ ಪೊಲೀಸ್ ಕಮಿಷನರ್, ಜಂಟಿ ಕಮಿಷನರ್, 8 ಡಿಸಿಪಿಗಳು, 13 ಎಸಿಪಿಗಳು, 50 ಇನ್‌ಸ್ಪೆಕ್ಟರ್ ಭದ್ರತೆ ಹೊಣೆ ಹೊತ್ತುಕೊಂಡಿದ್ದಾರೆ. ಕೆಎಸ್ಆರ್‌, ಸಿಎಆರ್ ಸಿಬ್ಬಂದಿಯನ್ನೂ ಭದ್ರತೆಗೆ ಬಳಸಿಕೊಳ್ಳಲಾಗುತ್ತಿದೆ.

‘ವಿಮಾನ ನಿಲ್ದಾಣಕ್ಕೆ ಪರ್ಯಾಯ ರಸ್ತೆ ಬಳಸಿ’
‘ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗುವ ಪ್ರಯಾಣಿಕರು, ಶುಕ್ರವಾರ (ನ.11) ಬೆಳಿಗ್ಗೆ 8ರಿಂದ ಸಂಜೆ 5ರ ವರೆಗೆ ಬಳ್ಳಾರಿ ರಸ್ತೆಯ ಬದಲು ಪರ್ಯಾಯ ರಸ್ತೆ ಬಳಸಬೇಕು’ ಎಂದು ಉತ್ತರ ವಿಭಾಗದ (ಸಂಚಾರ) ಡಿಸಿಪಿ ಎಸ್‌. ಸವಿತಾ ಕೋರಿದ್ದಾರೆ.

‘ಪ್ರಧಾನಿ ಕಾರ್ಯಕ್ರಮಕ್ಕಾಗಿ ಗಣ್ಯರ ವಾಹನಗಳು ಈ ಮಾರ್ಗದಲ್ಲಿ ಸಂಚರಿಸಲಿವೆ. ಆದ್ದರಿಂದ, ಪ್ರಯಾಣಿಕರು ಪರ್ಯಾಯ ಮಾರ್ಗಗಳನ್ನು ಬಳಸಬೇಕು. ವಿಳಂಬ ತಪ್ಪಿಸಲು ಪ್ರಯಾಣಿಕರು ಹೆಣ್ಣೂರು–ಕೊತ್ತನೂರು–ಬಾಗಲೂರು–ಬೇಗೂರು ಪರ್ಯಾಯ ರಸ್ತೆ ಬಳಸಿ’ ಎಂದು ಸವಿತಾ ಟ್ವೀಟ್‌ ಮಾಡಿದ್ದಾರೆ.

ಸಂಚಾರ ನಿರ್ಬಂಧಿತ ಪ್ರದೇಶಗಳು (ಬೆಳಿಗ್ಗೆ 9ರಿಂದ ಮಧ್ಯಾಹ್ನ 12ರವರೆಗೆ)

ಮೇಖ್ರಿ ವೃತ್ತ, ಕಾವೇರಿ ಜಂಕ್ಷನ್, ವಿಂಡ್ಸರ್ ಮ್ಯಾನರ್, ರಮಣ ಮಹರ್ಷಿ ರಸ್ತೆ, ಬಸವೇಶ್ವರ ವೃತ್ತ, ಶಾಸಕರ ಭವನ, ಉದ್ಯೋಗ ಸೌಧ (ಕೆಪಿಎಸ್‌ಸಿ ಕಚೇರಿ), ಶೇಷಾದ್ರಿ ರಸ್ತೆ, ಆನಂದರಾವ್ ವೃತ್ತ ಮೇಲ್ಸೇತುವೆ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತ ಹಾಗೂ ಸುತ್ತಮುತ್ತ ರಸ್ತೆಗಳಲ್ಲಿ ನಿರ್ಬಂಧ.

* ಸಂಚಾರ ನಿರ್ಬಂಧಿತ ಪ್ರದೇಶಗಳು (ಬೆಳಿಗ್ಗೆ 10.30ರಿಂದ ಮಧ್ಯಾಹ್ನ 1ರವರೆಗೆ):

ಮೇಖ್ರಿ ವೃತ್ತ, ಹೆಬ್ಬಾಳ, ಎಲಿವೆಟೆಡ್‌ ಕಾರಿಡಾರ್‌

ಬದಲಿ ಮಾರ್ಗ:

* ಮೈಸೂರು ಬ್ಯಾಂಕ್‌ ವೃತ್ತದಿಂದ ಅರಮನೆ ರಸ್ತೆಗೆ ಹೋಗುವ ವಾಹನಗಳು, ಕೆ.ಜಿ. ರಸ್ತೆ ಮೂಲಕ ಸಾಗಬಹುದು.

* ಆನಂದರಾವ್ ವೃತ್ತದ ಗಾಂಧಿ ಪ್ರತಿಮೆ ವೃತ್ತದ ಮೂಲಕ ಸಂಚರಿಸುವವರು, ರೇಸ್‌ವ್ಯೂ ವೃತ್ತ ಹಾಗೂ ಶಿವಾನಂದ ವೃತ್ತದಲ್ಲಿ ಎಡ ತಿರುವು ಪಡೆದು ನೆಹರು ವೃತ್ತದ ಮೂಲಕ ಸಾಗಬಹುದು

* ಕೆ.ಕೆ. ರಸ್ತೆ ಮೂಲಕ ವಿಂಡ್ಸ್‌ ಮ್ಯಾನರ್ ವೃತ್ತಕ್ಕೆ ತೆರಳುವವವರು, ಶಿವಾನಂದ ವೃತ್ತ ಹಾಗೂ ನೆಹರು ವೃತ್ತದ ಮೂಲಕ ಹೋಗಬಹುದು

* ಬಿಎಚ್‌ಇಎಲ್ ವೃತ್ತದಿಂದ ಮೇಖ್ರಿ ವೃತ್ತದ ಕಡೆಗೆ ಹೋಗುವವರು, ಸದಾಶಿವನಗರ ಪೊಲೀಸ್ ಠಾಣೆ - ಮಾರಮ್ಮ ದೇವಸ್ಥಾನ ವೃತ್ತ - ಮಾರ್ಗೋಸ್ ರಸ್ತೆ ಮೂಲಕ‌ ಸಂಚರಿಸಬಹುದು

* ಸದಾಶಿವನಗರದ ಭಾಷ್ಯಂ ವೃತ್ತದಿಂದ ಕಾವೇರಿ ಜಂಕ್ಷನ್ ಕಡೆಗೆ ಹೋಗುವ ವಾಹನ, ಮಲ್ಲೇಶ್ವರ 18ನೇ ಕ್ರಾಸ್ - ಮಾರ್ಗೋಸ್ ರಸ್ತೆಯ ಮೂಲಕ ಸಂಚರಿಸಬಹುದು

* ಕ್ವೀನ್ಸ್ ವೃತ್ತದಿಂದ ಸಿ.ಟಿ.ಓ ಕಡೆಗೆ ಹೋಗುವ ವಾಹನಗಳು, ಸಿದ್ದಲಿಂಗಯ್ಯ ವೃತ್ತ - ಆರ್.ಆರ್.ಎಂ.ಆರ್. ರಸ್ತೆಯ ಮೂಲಕ ಸಾಗಬಹುದು

* ಬಾಳೇಕುಂದ್ರಿ ಜಂಕ್ಷನ್‌ನಿಂದ ಮೆಜೆಸ್ಟಿಕ್ ಕಡೆಗೆ ಸಂಚರಿಸುವವರು, ಕನ್ನಿಂಗ್ ಹ್ಯಾಂ ರಸ್ತೆ ಮೂಲಕ ಸಾಗಬಹುದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.