
ಬೆಂಗಳೂರು: ವೈಟ್‌ಫೀಲ್ಡ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಆರು ವರ್ಷದ ಬಾಲಕಿ ಹತ್ಯೆ ಪ್ರಕರಣ ಹೊಸ ತಿರುವು ಪಡೆದುಕೊಂಡಿದ್ದು, ಆರೋಪಿ ಕೊಲೆಗೂ ಮೊದಲು ಅತ್ಯಾಚಾರವೆಸಗಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿದೆ.
ಈ ಸಂಬಂಧ ಪಶ್ಚಿಮ ಬಂಗಾಳದ ಯುಸೂಫ್ ಮೀರ್(30) ಎಂಬಾತನನ್ನು ಬಂಧಿಸಿ, ಕೊಲೆ ಹಾಗೂ ಪೋಕ್ಸೊ ಪ್ರಕರಣ ದಾಖಲಿಸಲಾಗಿದೆ.
‘ಮೂರು ವರ್ಷಗಳ ಹಿಂದೆ ಪಶ್ಚಿಮ ಬಂಗಾಳದ ಕುಟುಂಬವೊಂದು ತಮ್ಮ ಪುತ್ರಿ ಜತೆ ಬೆಂಗಳೂರಿಗೆ ಬಂದಿದ್ದು, ವೈಟ್‌ಫೀಲ್ಡ್‌ನ ಪಟ್ಟಂದೂರು ಲೇಔಟ್‌ನಲ್ಲಿ ಕಾರ್ಮಿಕರ ಶೆಡ್‌ನಲ್ಲಿ ವಾಸವಾಗಿತ್ತು. ಬಾಲಕಿ ತಂದೆ ಕೂಲಿ ಕಾರ್ಮಿಕನಾಗಿದ್ದರೆ, ತಾಯಿ ಮನೆ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಬಾಲಕಿಯನ್ನು ಮನೆಯಲ್ಲಿಯೇ ಬಿಟ್ಟು ದಂಪತಿ ಕೆಲಸಕ್ಕೆ ಹೋಗುತ್ತಿದ್ದರು. ಅವರ ಮನೆ ಪಕ್ಕದಲ್ಲೇ ಆರೋಪಿ ವಾಸವಾಗಿದ್ದ’ ಎಂದು ಪೊಲೀಸರು ತಿಳಿಸಿದರು.
‘ಆರೋಪಿ ಯುಸೂಫ್ ಮೀರ್ ಮತ್ತು ಮೃತ ಬಾಲಕಿಯ ತಾಯಿ ನಡುವೆ ಕುಡಿಯುವ ನೀರು ಮತ್ತು ಗುಜರಿ ವಸ್ತು ಸಂಗ್ರಹ ವಿಷಯಕ್ಕೆ ಆಗಾಗ್ಗೆ ಜಗಳ ನಡೆಯುತ್ತಿತ್ತು. ಎಂಟು ದಿನಗಳ ಹಿಂದೆಯೂ ಜಗಳವಾಗಿತ್ತು. ಅದು ವಿಕೋಪಕ್ಕೆ ಹೋಗಿ ಬಾಲಕಿಯ ತಾಯಿ ಆರೋಪಿಗೆ ಹೊಡೆದಿದ್ದರು. ಅದರಿಂದ ಕೋಪಗೊಂಡಿದ್ದ ಆರೋಪಿ, ಸೇಡು ತೀರಿಸಿಕೊಳ್ಳುವ ಉದ್ದೇಶದಿಂದ ಜನವರಿ 5ರಂದು ದಂಪತಿ ಕೆಲಸಕ್ಕೆ ಹೋದಾಗ, ಬಾಲಕಿಯನ್ನು ಅಪಹರಿಸಿ, ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರವೆಸಗಿದ್ದಾನೆ. ಬಳಿಕ ವೈಯರ್‌ನಿಂದ ಕುತ್ತಿಗೆಗೆ ಬಿಗಿದು ಹತ್ಯೆಗೈದು ಮೃತದೇಹವನ್ನು ಪ್ಲಾಸ್ಟಿಕ್ ಕವರ್‌ನಲ್ಲಿ ಇರಿಸಿ, ಬ್ಯಾಗ್‌ನಲ್ಲಿ ತುಂಬಿ ನೆಲ್ಲೂರುಹಳ್ಳಿಯ ರಸ್ತೆ ಬದಿಯ ಚರಂಡಿಗೆ ಎಸೆದು ಪರಾರಿಯಾಗಿದ್ದ’ ಎಂದು ಪೊಲೀಸರು ಹೇಳಿದರು.
‘ಕೆಲಸ ಮುಗಿಸಿಕೊಂಡು ಮನೆಗೆ ಬಂದ ದಂಪತಿ ಹುಡುಕಾಟ ನಡೆಸಿದರೂ ಮಗಳು ಪತ್ತೆಯಾಗಿರಲಿಲ್ಲ. ಬಳಿಕ ಪೊಲೀಸರು ಘಟನಾ ಸ್ಥಳದ ಸಿ.ಸಿ.ಟಿ.ವಿ ಕ್ಯಾಮೆರಾ ಹಾಗೂ ಬಾತ್ಮೀದಾರರ ಮಾಹಿತಿ ಮೇರೆಗೆ ಕ್ಷೀಪ್ರ ಕಾರ್ಯಾಚರಣೆ ನಡೆಸಿ, ಮೃತದೇಹ ಪತ್ತೆ ಹಚ್ಚಿದ್ದರು. ಬಳಿಕ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಹತ್ಯೆಗೈದಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ’ ಎಂದು ಪೊಲೀಸರು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.