ADVERTISEMENT

ಪೊಲೀಸರ ಮೇಲೆ ಹಲ್ಲೆ: ಐವರ ಬಂಧನ

ಆಫ್ರಿಕಾ ಪ್ರಜೆ ‘ಕಸ್ಟಡಿ’ ಸಾವು ಪ್ರಕರಣ l ಠಾಣೆ ಎದುರು ನಡೆದಿದ್ದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2021, 22:48 IST
Last Updated 3 ಆಗಸ್ಟ್ 2021, 22:48 IST
ಜೆ.ಸಿ.ನಗರ ಠಾಣೆ ಎದುರು ಕೆಲ ಆಫ್ರಿಕಾ ಪ್ರಜೆಗಳು ಸೋಮವಾರ ಸಂಜೆ ಪ್ರತಿಭಟನೆ ನಡೆಸಿದರು.
ಜೆ.ಸಿ.ನಗರ ಠಾಣೆ ಎದುರು ಕೆಲ ಆಫ್ರಿಕಾ ಪ್ರಜೆಗಳು ಸೋಮವಾರ ಸಂಜೆ ಪ್ರತಿಭಟನೆ ನಡೆಸಿದರು.   

ಬೆಂಗಳೂರು: ಪೊಲೀಸರ ವಶದಲ್ಲಿದ್ದ ಆಫ್ರಿಕಾ ಪ್ರಜೆ ಜೋಯೆಲ್ ಶಿಂದನಿ ಮಲು (27) ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದನ್ನು ಖಂಡಿಸಿ ಸೋಮವಾರ ನಡೆಸಿದ್ದ ಪ್ರತಿಭಟನೆ ವೇಳೆ ಪೊಲೀಸರ ಮೇಲೆ ಹಲ್ಲೆ ಮಾಡಿದ್ದವರ ವಿರುದ್ಧ ಪ್ರತ್ಯೇಕ ಎಫ್‌ಐಆರ್‌ ದಾಖಲಾಗಿವೆ.

ಜೆ.ಸಿ. ನಗರ ಠಾಣೆ ಎದುರು ಸೇರಿದ್ದ ಆಫ್ರಿಕಾದ 30ಕ್ಕೂ ಹೆಚ್ಚು ಪ್ರಜೆಗಳು, ‘ಜೋಯೆಲ್ ಸಾವಿಗೆ ಪೊಲೀಸರೇ ಕಾರಣ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಘೋಷಣೆ ಕೂಗಿದ್ದರು. ಇದೇ ಸಂದರ್ಭದಲ್ಲೇ ಪಿಎಸ್‌ಐ ಹಾಗೂ ಮೂವರು ಕಾನ್‌ಸ್ಟೆಬಲ್‌ ಮೇಲೆ ಹಲ್ಲೆ ಮಾಡಿದ್ದರು ಎನ್ನಲಾಗಿದೆ. ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದಂತೆ ಪೊಲೀಸರು, ಆಫ್ರಿಕಾ ಪ್ರಜೆಗಳ ಮೇಲೆ ಲಾಠಿ ಪ್ರಹಾರ ನಡೆಸಿದ್ದರು. ಮೂವರು ಪ್ರಜೆಗಳು ಗಾಯಗೊಂಡಿದ್ದರು.

‘ಆಫ್ರಿಕಾ ಪ್ರಜೆಗಳ ಹಲ್ಲೆಯಿಂದ ಗಾಯಗೊಂಡಿರುವ ಪಿಎಸ್‌ಐ ಹಾಗೂ ಮೂವರು ಕಾನ್‌ಸ್ಟೆಬಲ್‌ಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಅವರು ನೀಡಿದ್ದ ದೂರು ಆಧರಿಸಿ ಎರಡು ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ. ಪೊಲೀಸರ ಮೇಲೆ ಹಲ್ಲೆ ಮಾಡಿದ ಹಾಗೂ ಹಲ್ಲೆಗೆ ಪ್ರಚೋದನೆ ನೀಡಿದ ಆರೋಪದಡಿ ಐವರನ್ನು ಮಂಗಳವಾರ ಬಂಧಿಸಲಾಗಿದೆ. ಅದರಲ್ಲಿ ಒಬ್ಬ ಮಾದಕ ವಸ್ತು ಸೇವಿಸಿದ್ದು ವೈದ್ಯಕೀಯ ಪರೀಕ್ಷೆಯಿಂದ ಗೊತ್ತಾಗಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

ADVERTISEMENT

‘ಪ್ರಕರಣದ ಮತ್ತಷ್ಟು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಅವರ ಪತ್ತೆಗಾಗಿ ಪ್ರತ್ಯೇಕ ತಂಡಗಳು ತನಿಖೆ ಮುಂದುವರಿಸಿವೆ’ ಎಂದೂ ತಿಳಿಸಿದರು.

ಮರಣೋತ್ತರ ಪರೀಕ್ಷೆ ಬಾಕಿ: ಮೃತ ಜೋಯೆಲ್‌ ಮೃತದೇಹವನ್ನು ಬೌರಿಂಗ್ ಆಸ್ಪತ್ರೆಯಲ್ಲಿ ಇರಿಸಲಾಗಿದ್ದು, ಮರಣೋತ್ತರ ಪರೀಕ್ಷೆ ಬಾಕಿ ಇದೆ. ಮೃತರ ಸಂಬಂಧಿಕರಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದು, ರಾಯಭಾರಿ ಕಚೇರಿ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.

‘ಬಾಲಕನನ್ನು ಎತ್ತಿ ಎಸೆದಿದ್ದ ಪ್ರತಿಭಟನಕಾರ’

‘ಗಲಾಟೆ ಮಾಡುವ ಉದ್ದೇಶದಿಂದಲೇ ಠಾಣೆ ಎದುರು ಬಂದಿದ್ದ ಆಫ್ರಿಕಾ ಪ್ರಜೆಯೊಬ್ಬ, ಸ್ಥಳೀಯ ಬಾಲಕನನ್ನು ಎತ್ತಿ ಎಸೆದಿದ್ದ ಘಟನೆ ತಡವಾಗಿ ಗೊತ್ತಾಗಿದೆ. ಆ ಬಾಲಕನಿಗೆ ತೀವ್ರ ಗಾಯವಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಬಾಲಕ ಹಾಗೂ ಅವರ ತಾಯಿ, ಜೆ.ಸಿ. ನಗರ ಠಾಣೆ ಎದುರಿನ ರಸ್ತೆಬದಿಯಲ್ಲಿ ನಡೆದುಕೊಂಡು ಹೊರಟಿದ್ದರು. ಅದೇ ಸಂದರ್ಭದಲ್ಲೇ ಅವರನ್ನು ಅಡ್ಡಗಟ್ಟಿದ್ದ ಆಫ್ರಿಕಾ ಪ್ರಜೆಯೊಬ್ಬ, ಬಾಲಕನ್ನು ಒತ್ತಾಯದಿಂದ ಎತ್ತಿಕೊಂಡು ಕಾರಿಗೆ ತಾಗುವಂತೆ ಎಸೆದಿದ್ದ. ಅದರಿಂದ ಬಾಲಕನ ಕಿವಿ ಹಾಗೂ ಮುಖಕ್ಕೆ ತೀವ್ರ ಗಾಯವಾಗಿದೆ. ಬಾಲಕನ ಪೋಷಕರು ನೀಡಿರುವ ದೂರು ಆಧರಿಸಿ ಪ್ರತ್ಯೇಕ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದೂ ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.