ಪೊಲೀಸ್ ವಾಹನ
ಬೆಂಗಳೂರು: ‘ನಿಧಿಯ ಆಸೆಗೆ ಮಗನನ್ನು ಕೊಲೆ ಮಾಡಲು ಪತಿ ಸಂಚು ರೂಪಿಸಿದ್ದಾರೆ’ ಎಂದು ಆರೋಪಿಸಿ ನಗರ ಪೊಲೀಸ್ ಕಮಿಷನರ್ ಬಿ.ದಯಾನಂದ ಅವರಿಗೆ ಮಹಿಳೆಯೊಬ್ಬರು ದೂರು ಸಲ್ಲಿಸಿದ್ದಾರೆ.
ಸದ್ದಾಂ ಹುಸೇನ್ ಎಂಬಾತ ಪುತ್ರನ ಹತ್ಯೆಗೆ ಸಂಚು ರೂಪಿಸಿದ್ದಾರೆ ಎಂದು ಹೇಳಲಾಗಿದ್ದು, ಆತನ ಪತ್ನಿ ಪೊಲೀಸರಿಗೆ ದೂರು ನೀಡಿದ್ದಾರೆ.
‘ಈ ಹಿಂದೆ ದೂರು ನೀಡಲು ಹೋದಾಗ ಕೆ.ಆರ್.ಪುರ ಪೊಲೀಸರು ಪ್ರಕರಣ ದಾಖಲಿಸಿಕೊಳ್ಳಲು ಹಿಂದೇಟು ಹಾಕಿದ್ದರು. ಈಗಲಾದರೂ ತನಿಖೆ ನಡೆಸಿ ನ್ಯಾಯ ಕಲ್ಪಿಸಿ’ ಎಂದೂ ಮಹಿಳೆ ಕೋರಿದ್ದಾರೆ.
‘2020ರಲ್ಲಿ ಸದ್ದಾಂ ಹುಸೇನ್ ಪರಿಚಯ ಆಗಿತ್ತು. ನಂತರ ಇಬ್ಬರೂ ಮದುವೆ ಮಾಡಿಕೊಂಡಿದ್ದೆವು. ಕೆಲವು ತಿಂಗಳ ಬಳಿಕ ಮಗು ಜನಿಸಿತ್ತು. ಆಗ ಸದ್ದಾಂ ನನ್ನ ಮೇಲೆ ಹಲ್ಲೆ ಮಾಡಿದ್ದರು. ಅಲ್ಲದೇ ತಾಯಿಗೂ ಜೀವ ಬೆದರಿಕೆ ಹಾಕಿದ್ದರು’ ಎಂದು ಕಮಿಷನರ್‌ಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
‘ಸದ್ದಾಂ ಹುಸೇನ್ ಕೇರಳದ ಕೆಲವು ವ್ಯಕ್ತಿಗಳ ಜತೆಗೆ ಸೇರಿಕೊಂಡು ವಾಮಾಚಾರ ಕಲಿತುಕೊಂಡಿದ್ದರು. ನಂತರ ನಿಧಿ ಆಸೆಗೆ ಮಾಟಮಂತ್ರ ಮಾಡಲು ತಯಾರಿ ನಡೆಸಿದ್ದರು.ಈ ವೇಳೆ ತನ್ನ ಮಗನನ್ನು ಬಲಿಕೊಡುವುದಾಗಿ ಹೇಳಿದ್ದರು. ನನ್ನ ತಾಯಿಯನ್ನೂ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದರು. ಪಕ್ಕದ ಮನೆಯವರ ಸಹಾಯ ಪಡೆದು ನಾನು ಮತ್ತು ನನ್ನ ಮಗ ತಪ್ಪಿಸಿಕೊಂಡು ಬಂದೆವು’ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
‘ಈ ಸಂಬಂಧ ಕೆ.ಆರ್. ಪುರ ಠಾಣೆಗೆ ದೂರು ನೀಡಿದ್ದರೂ ಪೊಲೀಸರು ದೂರು ಸ್ವೀಕರಿಸಿಲ್ಲ. ಆದ್ದರಿಂದ, ಕೂಡಲೇ ಪ್ರಕರಣ ದಾಖಲಿಸಿಕೊಂಡು ಸದ್ದಾಂ ಹುಸೇನ್ ಹಾಗೂ ಆತನ ಸಹಚರ ನಯಾಜ್ ವಿರುದ್ಧ ಕ್ರಮ ಕೈಗೊಳ್ಳಬೇಕು. ನಮಗೆ ರಕ್ಷಣೆಯನ್ನೂ ನೀಡಬೇಕು’ ಎಂದು ಮಹಿಳೆ ಕೋರಿದ್ದಾರೆ.
‘ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುವಂತೆ ಸೂಚಿಸಲಾಗಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.